ನವದೆಹಲಿ: ನಿನ್ನೆ (ಜೂನ್ 24) ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 8 ಸಮರದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 24 ರನ್‌ಗಳ ಅಂತರದಿಂದ ಭರ್ಜರಿ ಜಯ ಸಾಧಿಸಿತು. ಈ ಮೂಲಕ ಆಸಿಸ್ ಪಡೆಗೆ ಮಣ್ಣು ಮುಕ್ಕಿಸಿದ ಭಾರತಕ್ಕೆ ಕ್ಯಾಪ್ಟನ್ ರೋಹಿತ್ ಶರ್ಮಾ ಅವರ ಸ್ಪೋಟಕ ಇನ್ನಿಂಗ್ಸ್ ಆಸೆರೆಯಾಯಿತು.
ಇದನ್ನೂ ಓದಿ: ಕೆರಿಬಿಯನ್ ನಾಡಲ್ಲಿ ಅಬ್ಬರಿಸಿ ಬೊಬ್ಬಿರಿದ ರೋಹಿತ್ ಶರ್ಮ: ಒಂದೇ ಪಂದ್ಯದಲ್ಲಿ 6 ದಾಖಲೆ ಬರೆದ ಹಿಟ್ಮ್ಯಾನ್!
ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬೌಲಿಂಗ್ ಆಯ್ದುಕೊಂಡು, ಟೀಂ ಇಂಡಿಯಾಗೆ ಬ್ಯಾಟ್ ಮಾಡುವಂತೆ ತಿಳಿಸಿತು. ಅದರಂತೆಯೇ ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 205 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. 41 ಎಸೆತಗಳನ್ನು ಎದುರಿಸಿದ ನಾಯಕ ರೋಹಿತ್ ಶರ್ಮ, 7 ಬೌಂಡರಿ ಹಾಗೂ 8 ಸಿಕ್ಸರ್ ನೆರವಿನಿಂದ 92 ರನ್ ಗಳಿಸಿ ಶತಕ ವಂಚಿತರಾದರು. 206 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆಸಿಸ್ ಪಡೆ, 7 ವಿಕೆಟ್ ಕಳೆದುಕೊಂಡು 181 ರನ್ ಗಳಿಸುವಲ್ಲಿ ಶಕ್ತವಾಯಿತು. ಅಂತಿಮವಾಗಿ ಟೀಂ ಇಂಡಿಯಾ 24 ರನ್‌ಗಳ ಭರ್ಜರಿ ಗೆಲುವು ದಾಖಲಿಸಿ, ಸಂಭ್ರಮಿಸಿತು.
ಇನ್ನು ನಾಯಕನಾಗಿ ತಂಡಕ್ಕೆ ಅದ್ಭುತ ಕೊಡುಗೆ ನೀಡಿದ ರೋಹಿತ್, ಪಂದ್ಯ ಮುಗಿದ ಬಳಿಕ ಕಮೆಂಟೇಟರ್ ಹರ್ಷ ಬೋಗ್ಲೆ ಕೇಳಿದ ಕೆಲವು ನೇರ ಪ್ರಶ್ನೆಗಳಿಗೆ ಮುಕ್ತವಾಗಿ ಮಾತನಾಡಿದರು. “ನನಗೆ ಐವತ್ತು ಮತ್ತು ಶತಕಗಳು ಮುಖ್ಯವಲ್ಲ. ಇದನ್ನೇ ಕಳೆದ ಪಂದ್ಯದಲ್ಲಿಯೂ ನಾನು ಹೇಳಿದ್ದೆ. ಪಂದ್ಯ ಗೆಲ್ಲುವತ್ತ ಮಾತ್ರ ಹೆಚ್ಚು ಗಮನ ಹರಿಸಿದ್ದೇನೆ. ಬಹಳ ದಿನಗಳಿಂದ ಆ ರೀತಿ ಆಡುವ ಪ್ರಯತ್ನ ಮಾಡುತ್ತಿದ್ದೇನೆ" ಎಂದು ಹೇಳಿದರು.
“ನಾವು ಆಸಿಸ್ ಪಡೆ ಹಾಕಿದ ಬಾಲ್ಗೆ ಹೇಗೆ ಪ್ರದರ್ಶನ ಕೊಟ್ಟಿದ್ದೇವೆ ಎಂಬುದನ್ನು ನೋಡಲು ಬಹಳ ಸಂತೋಷವಾಯಿತು. ಕುಲದೀಪ್ ಯಾದವ್ ಆಸ್ಟ್ರೇಲಿಯಾ ವಿರುದ್ಧ ಉತ್ತಮ ಪ್ರದರ್ಶನ ನೀಡಿದರು. ಯಾದವ್ ನ್ಯೂಯಾರ್ಕ್‌ನಲ್ಲಿ ಆಡಲು ಸಾಧ್ಯವಾಗಲ್ಲ ಎಂದೇ ಭಾವಿಸಿದ್ದೆ. ಆದರೆ ಆತ ಸದಾ ಕ್ರಿಕೆಟ್ ಕುರಿತು ಕೆಲವು ಯೋಜನೆಗಳನ್ನು ತಮ್ಮಲ್ಲೇ ರೂಪಿಸಿಕೊಳ್ಳುತ್ತಿದ್ದರು. ಅದರಲ್ಲೂ ಸೂಪರ್ 8 ಪಂದ್ಯಗಳಿಗೆಂದು ನಾವು ವೆಸ್ಟ್ ಇಂಡೀಸ್‌ಗೆ ಬಂದಾಗ, ಕುಲದೀಪ್ ಅವರೇ ನಮ್ಮ ಫಸ್ಟ್ ಆಯ್ಕೆಯಾಗಿದ್ದರು” ಎಂದು ರೋಹಿತ್ ಶರ್ಮಾ ಸಂತಸದ ಮಾತುಗಳನ್ನು ಆಡಿದ್ದಾರೆ,(ಏಜೆನ್ಸೀಸ್).