ಕ್ರೀಡೆ

ವಿರಾಟ್​ ಕೊಹ್ಲಿಯ ದೊಡ್ಡ ದಾಖಲೆ ಮುರಿಯುವರೇ ರೋಹಿತ್ ಶರ್ಮಾ?

ನವದೆಹಲಿ: ಟಿ20 ವಿಶ್ವಕಪ್ 2024 ರಲ್ಲಿ ಬಿರುಗಾಳಿಯ ರೂಪದಲ್ಲಿದ್ದಾರೆ ರೋಹಿತ್ ಶರ್ಮಾ. ಟೀಂ ಇಂಡಿಯಾ ಸಂಕಷ್ಟಕ್ಕೆ ಸಿಲುಕಿದಾಗಲೆಲ್ಲ ರೋಹಿತ್ ದಾವಿಸಿದ್ದಾರೆ. ಆದರೆ ವೈಯಕ್ತಿಕ ದಾಖಲೆಗಳ ಬಗ್ಗೆ ಈ ಆಟಗಾರ ತಲೆಕೆಡಿಸಿಕೊಳ್ಳುವುದಿಲ್ಲ.

ರೋಹಿತ್ ಶರ್ಮಾ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಇದುವರೆಗೆ 7 ಪಂದ್ಯಗಳಲ್ಲಿ 248 ರನ್ ಕಲೆಹಾಕಿದ್ದಾರೆ. ಈ ಅವಧಿಯಲ್ಲಿ ಅವರ ಸರಾಸರಿ 41.33 ಮತ್ತು ಸ್ಟ್ರೈಕ್ ರೇಟ್ 155.97 ಆಗಿದೆ. ಫೈನಲ್‌ನಲ್ಲಿ 72 ರನ್ ಗಳಿಸಿದರೆ, ಟಿ20 ವಿಶ್ವಕಪ್​ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಲಿದ್ದಾರೆ.

ವಿರಾಟ್ ಕೊಹ್ಲಿ 2014 ರ ವಿಶ್ವಕಪ್‌ನಲ್ಲಿ 319 ರನ್ ಗಳಿಸಿದ್ದರು. ನಂತರ 2022 ರ ವಿಶ್ವಕಪ್ ಋತುವಿನಲ್ಲ 296 ರನ್ ಗಳಿಸಿದ್ದರು. 2014 ರಲ್ಲಿ ಅವರು ಗಳಿಸಿದ 319 ರನ್​ಗಳು 106.33 ರ ಸರಾಸರಿಯಲ್ಲಿ ಬಂದವು. ಇದು ವಿಶ್ವಕಪ್ ಋತುವಿನಲ್ಲಿ ದಾಖಲೆಯಾಗಿ ಉಳಿದಿದೆ.

ಇನ್ನು ರೋಹಿತ್​ ಟಿ20 ವಿಶ್ವಕಪ್ 2024 ಋತುವಿನಲ್ಲಿ ನ್ಯೂಯಾರ್ಕ್‌ನಲ್ಲಿ ನಡೆದ ಐರ್ಲೆಂಡ್ ವಿರುದ್ಧದ ಆರಂಭಿಕ ಪಂದ್ಯದಲ್ಲಿ 52 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರು. ಬಳಿಕ ಪಾಕಿಸ್ತಾನದ ವಿರುದ್ಧ 13 ರನ್ ಗಳಿಸಿದ್ದರು. ಅಫ್ಘಾನಿಸ್ತಾನ ವಿರುದ್ಧ 8 ರನ್ ಬಾಂಗ್ಲಾ ವಿರುದ್ಧ 23 ರನ್‌ಗಳ ಇನ್ನಿಂಗ್ಸ್, ಆಸ್ಟ್ರೇಲಿಯಾ ವಿರುದ್ಧ 41 ಎಸೆತಗಳಲ್ಲಿ 92 ರನ್ ಗಳಿಸಿ ಬಿರುಸಿನ ಆಟವಾಡಿದರು. ಅದೇ ರೀತಿ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ರೋಹಿತ್ 39 ಎಸೆತಗಳಲ್ಲಿ 57 ರನ್ ಗಳಿಸಿದ್ದರು.