ವೆಸ್ಟ್ ಇಂಡೀಸ್: ನಿನ್ನೆ (ಜೂ.20) ಇಲ್ಲಿನ ಕೆನ್ಸಿಂಗ್ಟನ್ ಓವಲ್ ಬಾರ್ಬಡೋಸ್ ಮೈದಾನದಲ್ಲಿ ನಡೆದ ಆಫ್ಘಾನಿಸ್ತಾನ ಮತ್ತು ಟೀಂ ಇಂಡಿಯಾ ನಡುವಿನ ಐಸಿಸಿ ಟಿ20 ವಿಶ್ವಕಪ್ ಸೂಪರ್ 8 ಕ್ಲ್ಯಾಶ್ನಲ್ಲಿ 47 ರನ್ಗಳಿಂದ ಭಾರತ ಭರ್ಜರಿ ಜಯ ದಾಖಲಿಸಿತು. ಈ ಪಂದ್ಯದಲ್ಲಿ ಟೀಂ ಇಂಡಿಯಾದ 360 ಡಿಗ್ರಿ ಬ್ಯಾಟ್ಸ್ಮನ್ ಎಂದೇ ಖ್ಯಾತಿ ಪಡೆದಿರುವ ಸೂರ್ಯಕುಮಾರ್ ಯಾದವ್ ಅವರ ಆಕರ್ಷಕ ಬ್ಯಾಟಿಂಗ್ ವೈಖರಿ ತಂಡದ ಗೆಲುವಿಗೆ ಪ್ರಮುಖ ಕಾರಣವಾಯಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ, ಆಫ್ಘಾನಿಸ್ತಾನಕ್ಕೆ ಬೌಲಿಂಗ್ ಮಾಡುವಂತೆ ಆಹ್ವಾನಿಸಿತು. 20 ಓವರ್ನಲ್ಲಿ 8 ವಿಕೆಟ್ ನಷ್ಟಕ್ಕೆ 181 ರನ್ ಕಲೆಹಾಕಿದ ಭಾರತ, ಎದುರಾಳಿಗಳಿಗೆ 182 ರನ್ಗಳ ಗುರಿಯನ್ನು ಚೇಸ್ ಮಾಡುವಂತೆ ಸವಾಲು ಎಸೆಯಿತು. ಇದನ್ನು ತಲುಪುವಲ್ಲಿ ಎಡವಿದ ಆಫ್ಘಾನಿಸ್ತಾನದ ಬ್ಯಾಟ್ಸ್ಮನ್ಗಳು, ಕೇವಲ 134ಕ್ಕೆ ಆಲ್ಔಟ್ ಆಗುವ ಮೂಲಕ ಟೀಂ ಇಂಡಿಯಾಗೆ ಗೆಲುವಿನ ಕಿರೀಟ ಮುಡಿಸಿತು.
ಭಾರತದ ಪರ ಸೂರ್ಯಕುಮಾರ್ ಯಾದವ್ (53 ರನ್, 28 ಎಸೆತ, 5 ಫೊರ್, 3 ಸಿಕ್ಸರ್) ಹಾಗೂ ಜಸ್ಪ್ರಿತ್ ಬುಮ್ರಾ (3 ವಿಕೆಟ್, 4 ಓವರ್, 7 ರನ್) ಬಾರತ ತಂಡದ ಗೆಲುವಿಗೆ ಪ್ರಮುಖ ಕಾರಣರಾದರು. ಸದ್ಯ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಸತತವಾಗಿ ಅದ್ಭುತ ಪ್ರದರ್ಶನ ನೀಡುತ್ತಿರುವ ಟೀಂ ಇಂಡಿಯಾಗೆ ಎಲ್ಲಿಲ್ಲದ ಪ್ರಶಂಸೆ, ಮೆಚ್ಚುಗೆಗಳು ಹರಿದುಬರುತ್ತಿವೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಈ ಬಾರಿಯ ವಿಶ್ವಕಪ್ ಚಾಂಪಿಯನ್ ಪಟ್ಟ ದೊರೆಯುವುದು ಖಚಿತ ಎಂದು ಕ್ರಿಕೆಟ್ ಅಭಿಮಾನಿಗಳು ಭರವಸೆ ವ್ಯಕ್ತಪಡಿಸಿದ್ದಾರೆ.
ಇನ್ನು ತಂಡದ ಗೆಲುವನ್ನು ಕೊಂಡಾಡಿದ ನಾಯಕ ರೋಹಿತ್ ಶರ್ಮಾ,"ನಾವು ಆಯಾ ಪಿಚ್ಗಳ ಪರಿಸ್ಥಿತಿಗಳನ್ನು ಗಮನಿಸುತ್ತೇವೆ ಮತ್ತು ಆಟಗಾರರ ಸಾಮರ್ಥ್ಯಗಳನ್ನು ಅರಿತಿದ್ದೇವೆ. ಪರಿಸ್ಥಿತಿಗೆ ಅನುಗುಣವಾಗುವಂತೆ ತಂಡದ ಆಟಗಾರರನ್ನು ಕಣಕ್ಕಿಳಿಸುವ ಬಗ್ಗೆ ಮಾತುಕತೆ ಮಾಡ್ತೇವೆ. ಈ ಪಂದ್ಯದಲ್ಲಿಯೂ ಸಹ ಹಾಗೇ ಮಾಡಿದ್ದು, ಅಗತ್ಯವಿದ್ದರೆ ಹೊಂದಾಣಿಕೆಗಳನ್ನು ಮಾಡಲು ನಾವು ಸಿದ್ಧ. ಮುಂದಿನ ಬಾರಿ ಷರತ್ತುಗಳ ಪ್ರಕಾರ, ವೇಗಿಗಳೊಂದಿಗೆ ಮುನ್ನುಗ್ಗುತ್ತೇವೆ. ನಮ್ಮ ತಂಡದ ಮೂವರು ಸ್ಪಿನ್ನರ್‌ಗಳು ಕಳೆದ ಪಂದ್ಯಗಳಲ್ಲಿ ಹಾಗೂ ಇಂದಿನ ಮ್ಯಾಚ್ನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ" ಎಂದು ಹೇಳಿದರು,(ಏಜೆನ್ಸೀಸ್).