ನವದೆಹಲಿ: ಪ್ರಸಕ್ತ ಐಪಿಎಲ್ ಟೂರ್ನಿಯ ಆರಂಭಕ್ಕೂ ಮುನ್ನ ಮುಂಬೈ ತಂಡದಲ್ಲಾದ ನಾಯಕತ್ವ ಬದಲಾವಣೆಯಿಂದಾಗಿ ಮಾಜಿ ನಾಯಕ ರೋಹಿತ್ ಶರ್ಮ ಮತ್ತು ಹಾಲಿ ನಾಯಕ ಹಾರ್ದಿಕ್ ಪಾಂಡ್ಯ ನಡುವಿನ ಸಂಬಂಧಕ್ಕೆ ಹುಳಿ ಬಿದ್ದಂತಾಗಿದೆ. ನಿನ್ನೆ ಗುಜರಾತ್ ಟೈಟಾನ್ಸ್ ವಿರುದ್ಧ ನಡೆದ ಪಂದ್ಯದ ಸಮಯದಲ್ಲೂ ಇಬ್ಬರ ನಡುವೆ ಮನಸ್ತಾಪ ಇರುವುದು ಗೋಚರವಾಗಿದೆ.
ರೋಹಿತ್ರನ್ನು ನಾಯಕತ್ವ ಸ್ಥಾನದಿಂದ ಕೆಳಗಿಳಿಸಿದ್ದು, ಕ್ರೀಡಾಭಿಮಾನಿಗಳಿಗೆ ಸ್ವಲ್ಪವೂ ಇಷ್ಟವಿಲ್ಲ. ಒಬ್ಬ ಹಿರಿಯ ಆಟಗಾರನನನ್ನು ಈ ರೀತಿ ನಡೆಸಿಕೊಳ್ಳಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮೊದಲ ಪಂದ್ಯದಲ್ಲೇ ಇದರ ಪರಿಣಾಮವೂ ಗೋಚರವಾಯಿತು. ಏಕೆಂದರೆ, ಗುಜರಾತ್ ಟೈಟಾನ್ಸ್ ವಿರುದ್ಧ ಮುಂಬೈ ತಂಡ ಹೀನಾಯ ಸೋಲನ್ನು ಅನುಭವಿಸಿತು.
ನಿನ್ನೆಯ ಪಂದ್ಯದಲ್ಲಿ ಹಾರ್ದಿಕ್ ಮಾಡಿದ ಅವಾಂತರಗಳಿಂದ ಅಭಿಮಾನಿಗಳು ಸಿಟ್ಟಿಗೆದ್ದರು. ಕ್ಷೇತ್ರ ರಕ್ಷಣೆ ವೇಳೆ ಸ್ಥಾನ ಬದಲಾಯಿಸುವಂತೆ ರೋಹಿತ್ಗೆ ಹಾರ್ದಿಕ್ ಸೂಚನೆ ನೀಡಿದ್ದು ಫ್ಯಾನ್ಸ್ಗೆ ಕೊಂಚವೂ ಇಡಿಸಲಿಲ್ಲ. ಹೀಗಾಗಿ ಪ್ರತಿಬಾರಿ ಚೆಂಡು ಹಾರ್ದಿಕ್ ಬಳಿ ಬಂದಾಗ ಅಥವಾ ಕ್ರೀಡಾಂಗಣದ ದೊಡ್ಡ ಪರದೆಯ ಮೇಲೆ ಹಾರ್ದಿಕ್ ಕಾಣಿಸಿಕೊಂಡಾಗ ಫ್ಯಾನ್ಸ್ ಕಿರುಚಾಡುವ ಮೂಲಕ ತಮ್ಮ ಸಿಟ್ಟನ್ನು ವ್ಯಕ್ತಪಡಿಸಿದರು. ಇದರಿಂದ ಹಾರ್ದಿಕ್ಗೂ ಅವಮಾನವಾಯಿತು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಜಾಲತಾಣದಲ್ಲಿ ಮತ್ತೊಂದು ವಿಡಿಯೋ ತುಣುಕು ಹರಿದಾಡುತ್ತಿದೆ. ಅದರಲ್ಲಿ ರೋಹಿತ್, ಹಾರ್ದಿಕ್ ವಿರುದ್ಧ ಸಿಟ್ಟಿಗೆದ್ದಿರುವುದನ್ನು ಕಾಣಬಹುದು. ಪಂದ್ಯ ಮುಗಿದ ಬಳಿಕ ಹಿಂದಿನಿಂದ ಬಂದು ರೋಹಿತ್ರನ್ನು ಹಾರ್ದಿಕ್ ತಬ್ಬಿಕೊಳ್ಳುತ್ತಾರೆ. ಬಳಿಕ ಇಬ್ಬರು ತೀವ್ರ ಚರ್ಚೆಯಲ್ಲಿ ತೊಡಗುತ್ತಾರೆ. ಪಂದ್ಯ ಸೋತ ಸಿಟ್ಟಿನಿಂದ ಹಾರ್ದಿಕ್ರನ್ನು ರೋಹಿತ್ ತರಾಟೆಗೆ ತೆಗೆದುಕೊಂಡಂತೆ ವಿಡಿಯೋದಲ್ಲಿ ಭಾಸವಾಗುತ್ತದೆ. ಮುಂಬೈ ತಂಡದ ಮಾಲೀಕ ಆಕಾಶ್ ಅಂಬಾನಿ ಮುಂದೆಯೇ ಇದೆಲ್ಲವೂ ನಡೆಯುತ್ತದೆ. ಗುಜರಾತ್ ಟೈಟಾನ್ಸ್ ತಂಡದ ರಶೀದ್ ಖಾನ್ ಸಹ ಅಲ್ಲಿಯೇ ಇದ್ದರು. ಹಾರ್ದಿಕ್ ಮತ್ತು ರೋಹಿತ್ ವಾಗ್ವಾದವನ್ನು ನೋಡಿ ಆಕಾಶ್ ಅಂಬಾನಿ ಮತ್ತು ರಶೀದ್ ಖಾನ್ ಸ್ಥಳದಿಂದ ಕಾಲ್ಕಿಳುತ್ತಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಮುಂಬೈ ತಂಡದ ನೂತನ ನಾಯಕ ಹಾರ್ದಿಕ್ ಪಾಂಡ್ಯ ಮೊದಲ ಪಂದ್ಯದಲ್ಲೇ ಸಂಪೂರ್ಣ ವಿಫಲವಾದರು. ಬ್ಯಾಟರ್ ಮತ್ತು ನಾಯಕನಾಗಿ ಅವರು ಯಾವುದೇ ಪ್ರಭಾವವನ್ನು ಬೀರಲಿಲ್ಲ. ತಂಡದ ಸೋಲಿಗೆ ಅವರ ವೈಫಲ್ಯವೂ ಒಂದು ಪ್ರಮುಖ ಕಾರಣ ಎನ್ನಬಹುದು. ಬೌಲಿಂಗ್‌ನಲ್ಲಿ ಅವರು ಬುಮ್ರಾ ಮತ್ತು ಗೆರಾಲ್ಡ್ ಕೊಯೆಟ್ಜಿಯಂತಹ ವಿಶ್ವ ದರ್ಜೆಯ ಬೌಲರ್‌ಗಳೊಂದಿಗೆ ಮೊದಲ ಓವರ್ ಬೌಲ್ ಮಾಡಿದರು. ಬುಮ್ರಾ ಮತ್ತು ಕೊಯೆಟ್ಜಿ 5 ವಿಕೆಟ್ ಪಡೆದರೆ, ಪಾಂಡ್ಯ ಒಂದೇ ಒಂದು ವಿಕೆಟ್ ಪಡೆಯದೆ 3 ಓವರ್‌ಗಳಲ್ಲಿ 30 ರನ್ ನೀಡಿದರು. ಇದಿಷ್ಟೇ ಅಲ್ಲದೆ, ಪವರ್ ಪ್ಲೇನಲ್ಲಿ ತನಗೆ ಇಷ್ಟವಾದವರಿಗೆ ಬೌಲಿಂಗ್ ಅವಕಾಶ ನೀಡುತ್ತಿದ್ದರು. ಫೀಲ್ಡಿಂಗ್ ಸ್ಥಾನಗಳೂ ಸಹ ಸರಿಯಾಗಿರಲಿಲ್ಲ. ಬ್ಯಾಟಿಂಗ್ ವೇಳೆ ಅಗತ್ಯದ ಸಮಯದಲ್ಲಿ ತಾನು ಕ್ರೀಸ್ಗೆ ಇಳಿಯದೆ ಟಿಮ್ ಡೇವಿಡ್‌ನನ್ನು ಕಳುಹಿಸಿದರು. ಹಾರ್ದಿಕ್, ಸ್ಪಿನ್ ಬೌಲರ್ ರಶೀದ್ ಖಾನ್ ಅವರನ್ನು ಸಮರ್ಥವಾಗಿ ಎದುರಿಸಿ ರನ್ ಗಳಿಸಿದ್ದರೆ ಮುಂಬೈಗೆ ಗೆಲುವು ಸುಲಭವಾಗುತ್ತಿತ್ತು. ಸ್ಪಿನ್ ಆಡುವಲ್ಲಿ ದುರ್ಬಲರಾದ ಡೇವಿಡ್ ಅವರನ್ನು ಕಳುಹಿಸಿದರು. ಇತ್ತ ತಿಲಕ್ ಕೂಡ ರಶೀದ್ ಅವರನ್ನು ಎದುರಿಸಲು ಸಾಧ್ಯವಾಗದೆ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಬಂದ ಪಾಂಡ್ಯ ಕೂಡ ಬ್ಯಾಟಿಂಗ್ನಲ್ಲಿ ಅಬ್ಬರಿಸಲಿಲ್ಲ.
ಪಂದ್ಯದ ವಿಚಾರಕ್ಕೆ ಬಂದರೆ, ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಹಾರ್ದಿಕ್ ತಂಡ ಗುಜರಾತ್ಗೆ ಬ್ಯಾಟ್ ಮಾಲು ಅವಕಾಶ ನೀಡಿತು. 20 ಓವರ್‌ಗಳಲ್ಲಿ ಗುಜರಾತ್ 168 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡ 120 ಬಾಲ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 162 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಕಡೆಯ ಓವರ್ವರೆಗೂ ಹೋದ ಈ ಪಂದ್ಯ ಬಹಳ ರೋಚಕವಾಗಿ ಸಾಗಿತು. ಅಂತಿಮವಾಗಿ 6 ರನ್ಗಳಿಂದ ಮುಂಬೈ ಹೀನಾಯ ಸೋಲು ಅನುಭವಿಸಿತು. (ಏಜೆನ್ಸೀಸ್)