ಕ್ರೀಡೆ

ಸುಶಾಂತ್​ ಜೀವಂತವಾಗಿಲ್ಲ, ಆದರೆ ಆತನ ನೆನಪು ಜೀವಂತ!; ರೆಗ್ಗಿ ಮಿಲ್ಲರ್​

ಸುಶಾಂತ್​ ಸಿಂಗ್​ ರಜಪೂತ್​ ಸಾವನ್ನಪ್ಪಿ ಇಂದಿಗೆ ಒಂದು ತಿಂಗಳಾಯಿತು. ಅವರ ಸಾವನ ಬಳಿಕ ಇಡೀ ಸಿನಿಮಾರಂಗ ಅವರ ಸಾವಿಗೆ ಕಂಬನಿ ಮಿಡಿಯುತ್ತಿದೆ. ಜತೆಗೆ ಬಾಲಿವುಡ್​ನಲ್ಲಿ ಹಲವು ಬದಲಾವಣೆಗಳಿಗೂ ಸುಶಾಂತ್​ ಸಾವು ಕಾರಣವಾಗಿದೆ. ಈ ನಡುವೆ ಅವರ ‘ದಿಲ್​ ಬೇಚಾರಾ‘ ಚಿತ್ರ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಚಿತ್ರದ ಟ್ರೇಲರ್​ ದಾಖಲೆ ಪ್ರಮಾಣದಲ್ಲಿ ವೀಕ್ಷಣೆಗೊಳಪಟ್ಟಿದೆ.

ದಿಲ್​ ಬೇಚಾರಾ ಚಿತ್ರದ ಟೈಟಲ್​ ಟ್ರ್ಯಾಕ್​ ಸಹ ಈಗಷ್ಟೇ ಬಿಡುಗಡೆಯಾಗಿದ್ದು, ಯೂಟ್ಯೂಬ್​ನಲ್ಲಿ ಟ್ರೆಂಡಿಂಗ್​ನಲ್ಲಿದೆ. ಇದೀಗ ಇದೇ ಸುಶಾಂತ್​ ಹಾಡು ಅಮೆರಿಕದ ಬಾಸ್ಕೇಟ್​ ಬಾಲ್​ ಪ್ಲೇಯರ್ ಗಮನ ಸೆಳೆದಿದೆ. ಹೌದು, ಅಮೆರಿಕದ ಖ್ಯಾತ ಬಾಸ್ಕೇಟ್​ ಬಾಲ್​ ಮಾಜಿ ಆಟಗಾರ ರೆಗ್ಗಿ ಮಿಲ್ಲರ್​, ಸುಶಾಂತ್​ ಹಾಡಿನ ವಿಡಿಯೋ ಹಾಕಿಕೊಂಡು ಸುಶಾಂತ್​ ಅವರ ನೆನಪು ಶಾಶ್ವತ. ಅವರು ಜೀವಂತವಾಗಿಲ್ಲ. ಆದರೆ ಅವರು ನೆನಪು ಯಾವತ್ತೂ ಜೀವಂತ’ ಎಂದು ಬರೆದುಕೊಂಡಿದ್ದಾರೆ.

ಇನ್ನು ಚಿತ್ರದ ಟೈಟಲ್​ ಟ್ರ್ಯಾಕ್​ನಲ್ಲಿ ರೆಗ್ಗಿ ಅವರ ಜೆರ್ಸಿಯನ್ನೇ ಸುಶಾಂತ್​ ಧರಿಸಿದ್ದು, ಅದೂ ಕೂಡ ರೆಗ್ಗಿ ಅವರನ್ನು ಸೆಳೆದಿತ್ತು. ಸುಶಾಂತ್​ ಡಾನ್ಸ್ ಸಹ ರೆಗ್ಗಿಗೆ ಇಷ್ಟವಾಗಿತ್ತು. ಇನ್ನೇನು ಇದೇ ತಿಂಗಳು 24ರಂದು ಡಿಸ್ನಿ ಹಾಟ್​ಸ್ಟಾರ್​ನಲ್ಲಿ ದಿಲ್​ ಬೇಚಾರಾ ಚಿತ್ರ ತೆರೆಕಾಣಲಿದೆ.

ಮುಖೇಶ್​ ಛಾಬ್ರಾ ನಿರ್ದೇಶನದ ಈ ಚಿತ್ರದಲ್ಲಿ ಸಂಜನಾ ಸಿಂಘಿ ನಾಯಕಿಯಾಗಿ ನಟಿಸಿದ್ದು, ಇದು ಅವರ ಚೊಚ್ಚಲ ಸಿನಿಮಾ ಆಗಿದೆ. (ಏಜೆನ್ಸೀಸ್​)