ಬೆಂಗಳೂರು: ಐಪಿಎಲ್ 2024ರ ಸೀಸನ್ನ ಆರಂಭದ ಪಂದ್ಯದಲ್ಲೇ ಸೋಲಿನ ಮೂಲಕ ಎಡವಿದ ಆರ್ಸಿಬಿ, ತದನಂತರ ಒಂದು ಪಂದ್ಯವನ್ನು ಬಿಟ್ಟರೆ, ಉಳಿದೆಲ್ಲಾ ಮ್ಯಾಚ್ಗಳಲ್ಲಿ ಹೀನಾಯ ಸೋಲನ್ನು ಅನುಭವಿಸಿದೆ. ಇದು ಕಳೆದ 16 ವರ್ಷಗಳಿಂದ ತಮ್ಮ ನೆಚ್ಚಿನ ತಂಡ ಕಪ್ ಗೆಲ್ಲಲಿ ಎಂದು ಆಶಿಸಿ, ಭರವಸೆಯನ್ನು ಹೊತ್ತಿ ಸ್ಟೇಡಿಯಂಗೆ ಬರುತ್ತಿರುವ ಅಪಾರ ಸಂಖ್ಯೆಯ ಅಭಿಮಾನಿಗಳಿಗೆ ಭಾರೀ ನೋವನ್ನು ತಂದೊಡ್ಡಿದೆ.
ಕಳೆದ 16 ವರ್ಷಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರೋತ್ಸಾಹಿಸಿ, ಎಷ್ಟೇ ಸೋತರು, ಕಪ್ ಗೆಲ್ಲದೆ ನಿರಾಸೆ ಮೂಡಿಸಿದರು ಅದೇ ಪ್ರೀತಿ, ಅಭಿಮಾನ, ನಂಬಿಕೆ, ಭರವಸೆ ಇಟ್ಟು ಪ್ರತಿ ವರ್ಷ, ಪ್ರತಿ ಸೀಸನ್ನಲ್ಲಿಯೂ ಫ್ಯಾನ್ಸ್ ಬೆಂಬಲಿಸುತ್ತಿದ್ದಾರೆ. ಆದರೆ, ಇದೆಲ್ಲವೂ ಇನ್ನು ಮುಂದೆ ನಡೆಯುವುದಿಲ್ಲ ಎನ್ನುವ ಲಕ್ಷಣಗಳು ಇತ್ತೀಚಿನ ಬೆಳವಣಿಗೆಯಿಂದ ಕಂಡುಬಂದಿದೆ.
ಹೆಣ್ಣು ಮಕ್ಕಳು ಡಬ್ಲ್ಯೂಪಿಎಲ್ ಟ್ರೋಫಿ ಗೆದ್ದು ಆರ್ಸಿಬಿಗೆ ಗೆಲುವು ತಂದುಕೊಟ್ಟರು, ಇನ್ನೇನಿದ್ದರೂ ಪುರುಷರ ಐಪಿಎಲ್ ಗೆಲ್ಲುವುದು ಮಾತ್ರ ಬಾಕಿ ಉಳಿದಿದೆ. ಈ ಸಲ ಆದ್ರೂ ಕಪ್ ನಮ್ಮದಾಗಲಿದೆ ಎಂಬ ನಿರೀಕ್ಷೆಯಿಂದಲೇ ಫ್ಯಾನ್ಸ್ ಪಂದ್ಯವನ್ನು ನೋಡಲು ಅತ್ಯಧಿಕ ಸಂಖ್ಯೆಯಲ್ಲಿ ಸ್ಟೇಡಿಯಂಗೆ ಜಮಾಯಿಸುತ್ತಿದ್ದರು. ಆದರೆ, ಮುಂದಿನ ದಿನಗಳಲ್ಲಿ ಇದ್ಯಾಕೋ ಕಂಡುಬರುವಂತೆ ಕಾಣಿಸುತ್ತಿಲ್ಲ. ಅದಕ್ಕೆ ಕಾರಣ, ಆರ್ಸಿಬಿಯ ಸತತ ಹೀನಾಯ ಸೋಲು!
ಇದನ್ನೂ ಓದಿ: ಆರ್ಥಿಕ ಇಲಾಖೆ ಸಾಂಖ್ಯಿಕ ನಿರೀಕ್ಷಕ ಹುದ್ದೆ: ಪರೀಕ್ಷೆ ನಡೆದು ವರ್ಷವಾದ್ರೂ ಇನ್ನೂ ಪ್ರಕಟವಾಗಿಲ್ಲ ಫಲಿತಾಂಶ
ಉತ್ತಮ ಬ್ಯಾಟಿಂಗ್ ಹಾಗೂ ಬೌಲಿಂಗ್ ಲೈನ್ ಒಳಗೊಂಡಿರದ ಆರ್ಸಿಬಿ ಮ್ಯಾನೆಜ್ಮೆಂಟ್ ವಿರುದ್ಧ ತಿರುಗಿಬಿದ್ದಿರುವ ಆರ್ಸಿಬಿ ಫ್ಯಾನ್ಸ್, ನಮಗೆ ತಿಳಿಯುತ್ತಿರುವ ಸಣ್ಣ, ಸಣ್ಣ ವಿಷಯ ಇವರಿಗ್ಯಾಕೆ ತಿಳಿಯಲ್ಲ? ಬದಲಾವಣೆ ನಿಜಕ್ಕೂ ಬೇಕಿದೆ. ಬೌಲಿಂಗ್ ಯೂನಿಟ್ ಸ್ವಲ್ಪವೂ ಸರಿಯಿಲ್ಲ, ಬಲಿಷ್ಠವಾಗಿಲ್ಲ. ಮ್ಯಾನೆಜ್ಮೆಂಟ್ಗೆ ಯಾರನ್ನು ಕಣಕ್ಕಿಳಿಸಬೇಕು ಎಂಬುದೇ ಗೊತ್ತಿಲ್ಲ. ಇದು ಹೀಗೆ ಮುಂದುವರಿದರೆ ನಾವ್ಯಾರು ಸ್ಟೇಡಿಯಂಗೆ ಹೋಗಿ ಪಂದ್ಯವನ್ನೇ ನೋಡುವುದಿಲ್ಲ ಆಗ ಅವರಿಗೆ ಅರಿವಾಗುತ್ತದೆ ಎಂದು ಕಿಡಿಕಾರಿದ್ದರು.
ಆದರೆ, ನಿನ್ನೆಯ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿಯೂ ಇದೇ ನಡೆದಿದ್ದು, ಆರ್ಸಿಬಿ ಕೆಲವೇ ಅಂತರದಿಂದ ಸೋಲನ್ನು ಅನುಭವಿಸಿತು. ಇದನ್ನು ಗಂಭೀರವಾಗಿ ಗಮನಿಸಿದ ಆರ್ಸಿಬಿ ಅಭಿಮಾನಿಗಳು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಬೇಸರ ಹೊರಹಾಕಿದ್ದು, ಇವರು ಆಡುತ್ತಿರುವುದು ಎದುರಾಳಿಗಳ ಜತೆಗಲ್ಲ! ಬದಲಿಗೆ ನಮ್ಮ ಭಾವನೆಗಳ ಜತೆ ಎಂದು ಭಾರೀ ಅಸಮಾದಾನ ಹೊರಹಾಕಿದ್ದಾರೆ.