ಕ್ರೀಡೆ

2021ರಲ್ಲಿ ಮುಂಬೈ ಇಂಡಿಯನ್ಸ್​ ಬಿಟ್ಟಿದ್ದೂ ಇದೇ ಕಾರಣಕ್ಕೆ… ಮುಖಕ್ಕೆ ಹೊಡದಂಗೆ ಹೇಳಿದ್ರು ರವಿಶಾಸ್ತ್ರಿ

ಮುಂಬೈ: ಐಪಿಎಲ್ 2024ರ ಆವೃತ್ತಿಯ 10 ಬಲಿಷ್ಠ ತಂಡಗಳ ಹತ್ತು ಸೂಪರ್​ ಕ್ಯಾಪ್ಟನ್​ಗಳ ಮೇಲೆ ಭಾರೀ ಭರವಸೆ ಮತ್ತು ನಿರೀಕ್ಷೆಗಳು ಹೆಚ್ಚಾದರೂ ಸಹ ಮುಂಬೈ ಇಂಡಿಯನ್ಸ್​​ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ವಿರುದ್ಧ ಕೇಳಿಬರುತ್ತಿರುವ ಅಪಸ್ವರ ಮಾತ್ರ ಇಂದಿಗೂ ಕಿಂಚಿತ್ತು ಕಡಿಮೆಯಾಗಿಲ್ಲ. ಅದಕ್ಕೆ ಇತ್ತೀಚಿನ ಬೆಳವಣಿಗೆಗಳೇ ಸಾಕ್ಷಿ.

ಹೌದು, ಇದಕ್ಕೆ ಕಾರಣ ಎರಡು ವರ್ಷ ಗುಜರಾತ್ ಟೈಟನ್ಸ್ ನಾಯಕನಾಗಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಫೈನಲ್​ವರೆಗೂ ತಂದಿದ್ದ ಪಾಂಡ್ಯ ಕಳೆದ ವರ್ಷ ದಿಢೀರ್​ ಟೈಟನ್ಸ್​​ಗೆ ಕೈಕೊಟ್ಟು ಮುಂಬೈ ಇಂಡಿಯನ್ಸ್ ತಂಡಕ್ಕೆ ಮತ್ತೆ ಹಿಂತಿರುಗಿದರು. ಈ ಸಂಗತಿ ಕ್ರಿಕೆಟ್​ ಫ್ಯಾನ್ಸ್​ಗಳಲ್ಲಿ ಭಾರೀ ಆಶ್ಚರ್ಯ ಮೂಡಿಸಿದ್ದಲ್ಲದೇ, ತೀವ್ರ ಆಘಾತವನ್ನು ತಂದೊಡ್ಡಿತು.

ಐಪಿಎಲ್​ ಇತಿಹಾಸದಲ್ಲಿ ಸಿಎಸ್​ಕೆ ತಂಡದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ನೇತೃತ್ವದಲ್ಲಿ ಚೆನ್ನೈ ತಂಡ ಐದು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಧೋನಿ ನಂತರ ಮತ್ತೊಬ್ಬ ಕ್ಯಾಪ್ಟನ್ ಯಾರಾದರೂ ಐದು ಬಾರಿ ತಂಡಕ್ಕೆ ಟ್ರೋಫಿ ತಂದುಕೊಟ್ಟಿದ್ದಾರೆ ಎಂದರೆ ಅದು ರೋಹಿತ್ ಶರ್ಮಾ. ಇಂತಹ ಯಶಸ್ವಿ ನಾಯಕನನ್ನು ಮುನ್ಸೂಚನೆ ನೀಡದೆ, ಕ್ಯಾಪ್ಟನ್​ ಸ್ಥಾನದಿಂದ ಕೆಳಗಿಳಿಸಿ, ಹಾರ್ದಿಕ್​ಗೆ ಕೊಟ್ಟಿದ್ದು, ಎಂಐ ಹಾಗೂ ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರೀ ಅಸಮಾಧಾನ ಭುಗಿಲೇಳುವಂತೆ ಮಾಡಿತು.

ಐಪಿಎಲ್​ ನಾಯಕತ್ವ ಬದಲಾವಣೆ ಆದಾಗಿನಿಂದ ಮುಂಬೈ ತಂಡದಲ್ಲಿ ಮಾತ್ರ ಎಲ್ಲವೂ ಸರಿಯಿಲ್ಲ. ರೋಹಿತ್​ರಿಂದ ನಾಯಕತ್ವ ಕಸಿದು ಹಾರ್ದಿಕ್​ ಪಾಂಡ್ಯಗೆ ನೀಡಿರುವುದು ಇದೀಗ ಅಭಿಮಾನಿಗಳ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ ಇಂದಿಗೂ ಹಾರ್ದಿಕ್​ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕಾ ಪ್ರಹಾರಗಳು ನಡೆಯುತ್ತಿವೆ. ಐಪಿಎಲ್​ 2024ರ ಸೀಸನ್ ಆರಂಭಕ್ಕೂ ಮುನ್ನವೇ ವಿರೋಧ ವ್ಯಕ್ತಪಡಿಸುತ್ತಿದ್ದ ಫ್ಯಾನ್ಸ್​, ಈಗ 9 ದಿನಗಳು ಕಳೆದರೂ ಇನ್ನೂ ಪಾಂಡ್ಯರನ್ನು ಕ್ಯಾಪ್ಟನ್ ಎಂದು ಒಪ್ಪುತ್ತಿಲ್ಲ.

ಪ್ರ್ಯಾಕ್ಟೀಸ್​ ಸೆಷನ್​, ಸ್ಟೇಡಿಯಂನಲ್ಲಿ ಲೈವ್​ ಮ್ಯಾಚ್ ಸೇರಿದಂತೆ ಎಲ್ಲಿಯೇ ಹೋದರೂ ಹಾರ್ದಿಕ್​ ವಿರುದ್ಧ ಕೂಗುವ ಘೋಷಣೆಗಳು ಮಾತ್ರ ಇಂದಿಗೂ ಕಡಿಮೆಯಾಗ್ತಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ರೋಹಿತ್​ರನ್ನು ನಡೆಸಿಕೊಂಡ ರೀತಿ, ಹೀಗೆ ಹಲವು ವಿಷಯಗಳನ್ನು ಮುನ್ನೆಲೆಗೆ ತರುವ ನೆಟ್ಟಿಗರು ಪಾಂಡ್ಯರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ. ಇನ್ನು ಇದನ್ನೆಲ್ಲಾ ಗಮನಿಸಿದ ಭಾರತೀಯ ಕ್ರಿಕೆಟ್ ತಂಡದ ಹಿರಿಯ ಕೋಚ್​ ರವಿಶಾಸ್ತ್ರಿ, ಹಾರ್ದಿಕ್ ಕ್ಯಾಪ್ಟನ್ಸಿ ಹಿಂದಿರುವ ಅಸಲಿ ಸಂಗತಿಯನ್ನು ಈ ರೀತಿ ಹೇಳಿದ್ದಾರೆ.

ನಾಯಕತ್ವಕ್ಕಾಗಿ ಹಾರ್ದಿಕ್ ಪಾಂಡ್ಯ 2021ರಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ತ್ಯಜಿಸಿದ್ದರು. ಈಗ ಅದೇ ತಂಡಕ್ಕೆ ಕ್ಯಾಪ್ಟನ್ಸಿಗಾಗಿ ಮತ್ತೆ ಮರಳಿದ್ದಾರೆ. ನನಗೆ ಗೊತ್ತಾಗ್ತಿಲ್ಲ ಕ್ಯಾಪ್ಟನ್ ಸ್ಥಾನಕ್ಕೆ ಯಾಕೆ ಇಷ್ಟೊಂದು ಹಸಿವು ಅಂತ? ಮೊದಲು ತನ್ನ ಆಟದ ವೈಖರಿಯತ್ತ ಹೆಚ್ಚು ಪ್ರದರ್ಶಿಸುವುದು ಉತ್ತಮ ಎಂದಿದ್ದಾರೆ. ಸದ್ಯ ರವಿಶಾಸ್ತ್ರಿಯ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.