ಕ್ರೀಡೆ

ಆತನನ್ನು ನೋಡಿದರೆ ಅಯ್ಯೋ ಪಾಪ ಅನಿಸುತ್ತೆ; ಆರ್​. ಅಶ್ವಿನ್​ ಹೀಗಂದಿದ್ದು ಯಾರ ಬಗ್ಗೆ ಗೊತ್ತಾ?

ಚೆನ್ನೈ: ಪ್ರವಾಸಿ ಬಾಂಗ್ಲಾದೇಶ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಹೀನಾಯವಾಗಿ ಸೋಲುವ ಮೂಲಕ ತೀವ್ರ ಮುಖಭಂಗವನ್ನು ಅನುಭವಿಸಿರುವ ಪಾಕಿಸ್ತಾನ ತಂಡವನ್ನು ಒಂದಿಲ್ಲೊಂದು ಕಾರಣಕ್ಕೆ ಟ್ರೋಲ್​ ಮಾಡಲಾಗುತ್ತಿದೆ. ಸ್ವದೇಶದವರಿದಂಲೇ ಹೆಚ್ಚು ಟೀಕೆಗೆ ಗುರಿಯಾಗಿರುವ ಪಾಕ್ ಬಗ್ಗೆ ಇದೀಗ ಟೀಮ್​ ಇಂಡಿಯಾದ ಆಟಗಾರ ಆರ್​. ಅಶ್ವಿನ್​ ಸಹಾನುಭೂತಿ ವ್ಯಕ್ತಪಡಿಸಿದ್ದು, ಈ ಕುರಿತು ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಮಾತನಾಡಿದ್ದಾರೆ.

ಟೆಸ್ಟ್​ ಸರಣಿಯ ಸೋಲಿನ ಕಾರಣಕ್ಕೆ ತಂಡದ ನಾಯಕ ಶಾನ್​ ಮಸೂದ್​ರನ್ನು ಹೀನಾಯವಾಗಿ ಟೀಕಿಸಲಾಗಿತ್ತು. ಈ ಕುರಿತು ಮಾತನಾಡಿರುವ ಆರ್​. ಅಶ್ವಿನ್​ ಶಾನ್​​ ಕುರಿತು ಸಹಾನುಭೂತಿ ವ್ಯಕ್ತಪಡಿಸಿದ್ದಾರೆ. ಆತನನ್ನು ನೋಡಿದರೆ ಅಯ್ಯೋ ಅನಿಸುತ್ತೆ ಎಂದು ಹೇಳಿದ್ದಾರೆ. ಈ ಕುರಿತಾದ ವಿಡಿಯೋ ಸಖತ್​ ವೈರಲ್​ ಆಗಿದೆ.

ಶಾನ್​ ಮಸೂದ್​ ಒಬ್ಬ ಬುದ್ಧಿವಂತೆ ಆಟಗಾರನಾಗಿದ್ದು, ಆತನನ್ನು ನೋಡಿದರೆ ನನಗೆ ಅಯ್ಯೋ ಪಾಪ ಅನಿಸುತ್ತದೆ. ಪೋಸ್ಟ್​ ಮ್ಯಾಚ್​ ಪ್ರಸೆಂಟೇಷನ್​ನಲ್ಲಿ ಆತ ಮಾತನಾಡುವುದನ್ನು ನೋಡಿದರೆ ಮುಂದಿನ ದಿನಗಳಲ್ಲಿ ಆತ ಪಾಕಿಸ್ತಾನ ಕ್ರಿಕೆಟ್​ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಾನೆ ಎಂಬ ವಿಶ್ವಾಸ ನನಗಿದೆ. ಆತ ಸಾಕಷ್ಟು ಅರ್ಥಪೂರ್ಣವಾಗಿ ಮಾತನಾಡುತ್ತಾನೆ ಮತ್ತು ಬಾಬರ್​ ಅಜಂನಂತಹ ಆಟಗಾರನಲ್ಲದೇ ಇರಬಹುದು ಎಂಬ ಕಾರಣಕ್ಕೆ ಆತನ ವಿರುದ್ಧ ಈ ರೀತಿ ಮಾತನಾಡಲಾಗುತ್ತಿದೆ. ಡ್ರೆಸ್ಸಿಂಗ್​​ ರೂಮ್​ನಲ್ಲಿ ಪರಿಸ್ಥಿತಿ ಚೆನ್ನಾಗಿಲ್ಲ ಎಂಬುದು ನಮಗೆ ಸ್ಪಷ್ಟವಾಗಿ ಅರ್ಥವಾಗುತ್ತದೆ.

ಇನ್ನೂ ಪಾಕಿಸ್ತಾನ ವಿರುದ್ಧ ಬಾಂಗ್ಲಾದೇಶ ಸರಣಿ ಗೆದ್ದಿರುವುದನ್ನು ನೋಡಿದರೆ ಅವರು ಎಷ್ಟು ದೂರ ಸಾಗಿದ್ದಾರೆ ಎಂಬುದು ಸ್ಪಷ್ಟವಾಗಿ ಕಾಣುತ್ತದೆ. ಕಳೆದ ವರ್ಷ ನಾವು ಬಾಂಗ್ಲಾ ಪ್ರವಾಸ ಕೈಗೊಂಡಾಗ ನಮಗೆ ಉತ್ತಮ ಟೆಸ್ಟ್​​ ತಂಡ ಯಾವುದೆಂದು ತಿಳಿಯಿತು, ಶಕಿಬ್​ ಅಲ್​ ಹಸನ್​ ಅವರಂತಹ ಹಿರಿಯ ಅನುಭವಿ ಆಟಗಾರರು, ಮುಶ್ಫಿಕರ್ ರಹೀಮ್, ಮೆಹಿದಿ ಹಸನ್​ನಂತಹ ಯುವ ಉತ್ಸಾಹಿ ಆಟಗಾರರು ತಂಡದಲ್ಲಿದ್ದು, ಇದು ಅವರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.