ನವದೆಹಲಿ: ಇತ್ತೀಚಿನ ವರ್ಷಗಳಲ್ಲಿ ಟೀಮ್ ಇಂಡಿಯಾ ಪಾಲಿನ ಆಪತ್ಭಾಂದವ ಎಂದೇ ಗುರುತಿಸಿಕೊಂಡಿರುವ ವೇಗಿ ಜಸ್ಪ್ರೀತ್ ಬುಮ್ರಾ ಅವರನ್ನು ಮಾಂತ್ರಿಕ ಎಂದು ಕರೆದರೆ ತಪ್ಪಾಗಲಾರದು, ಏಕೆಂದರೆ ಜೂನ್ 29ರಂದು ಮುಕ್ತಾಯಗೊಂಡ ಟಿ20 ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ಮುಖಾಮುಖಿಯಾಗಿದ್ದವು. ಪಂದ್ಯ ಭಾರತದ ಕೈ ತಪ್ಪಿತ್ತು ಎನ್ನುವಾಗ ಬುಮ್ರಾ ತಮ್ಮ ಬಿಗಿ ಬೌಲಿಂಗ್ ದಾಳಿ ಮೂಲಕ ಟೀಮ್ ಇಂಡಿಯಾವನ್ನು ಗೆಲುವಿನಿತ್ತ ಕೊಂಡೊಯ್ದಿದ್ದರು.
ಇದಲ್ಲದೆ ಗ್ರೂಪ್ ಹಂತದ ಪಂದ್ಯಗಳಲ್ಲಿಯೂ ಉತ್ತಮ ಪ್ರದರ್ಶನ ನೀಡಿದ ಬುಮ್ರಾ ಹಲವರ ಮೆಚ್ಚುಗೆಗೆ ಪಾತ್ರರಾಗಿದ್ದರು. ಬುಮ್ರಾರ ಈ ಅಸಾಧಾರಣ ಪ್ರದರ್ಶನವನ್ನು ಕಂಡು ಹಲವರು ಹಾಡಿಹೊಗಳುತ್ತಿದ್ದು, ಇದೀಗ ಟೀಮ್ ಇಂಡಿಯಾದ ಮಾಜಿ ಕೋಚ್ ರವಿಶಾಸ್ತ್ರಿ ಬುಮ್ರಾರನ್ನು ಪಾಕಿಸ್ತಾನ ಕ್ರಿಕೆಟ್ ತಂಡದ ಲೆಜೆಂಡರಿ ಆಟಗಾರ ವಾಸಿಂ ಅಕ್ರಮ್ಗೆ ಹೋಲಿಸಿ ಮಾತನಾಡಿದ್ದು, ಈ ಸುದ್ದಿ ಸಖತ್ ವೈರಲ್ ಆಗಿದೆ.
ಇದನ್ನೂ ಓದಿ: ಕೋಚ್ ಸ್ಥಾನದಲ್ಲಿ ಹೆಚ್ಚು ದಿನ ಉಳಿಯಲ್ಲ; ಗೌತಿ ಕುರಿತು ಶಾಕಿಂಗ್ ಹೇಳಿಕೆ ಕೊಟ್ಟ ವಿಶ್ವಕಪ್ ವಿಜೇತ ತಂಡದ ಆಟಗಾರ
ಐಸಿಸಿ ರಿವೀವ್ನಲ್ಲಿ ಈ ಕುರಿತು ಮಾತನಾಡಿದ ರವಿಶಾಸ್ತ್ರಿ, ಆತ ತಾನು ಏನು ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದಾನೆ. ನಾನು ನೋಡಿದಂತೆ ಆತನ ಕೈಗೆ ಚೆಂಡು ಸಿಕ್ಕಾಗ ಏನಾದರೂ ಜಾದೂ ಮಾಡಿದ್ದಾನೆ. ಭಾರತ ಪಾಕಿಸ್ತಾನ ಪಂದ್ಯ ನೋಡಿದಾಗ ನಮಗೆ ಸಂಪೂರ್ಣವಾಗಿ ಅರ್ಥವಾಗುತ್ತದೆ. ಕಡೆಯ ಐದು ಓವರ್ ಪಂದ್ಯ ಭಾರತದ ಕಡೆ ತಿರುಗಿದ್ದು, ಜಸ್ಪ್ರೀತ್ ಬುಮ್ರಾ ರಿಜ್ವಾನ್ರನ್ನು ಔಟ್ ಮಾಡುವ ಮೂಲಕ ಪಂದ್ಯವನ್ನು ಭಾರತದತ್ತ ತಿರುಗಿಸಿದರು.
ನಾನು ನೋಡಿರುವಂತೆ ಕೆಲವೇ ಕೆಲವು ಆಟಗಾರರು ಈ ರೀತಿ ಮಾಡಲು ಸಾಧ್ಯವಿದ್ದು, ಅದರಲ್ಲಿ ಪಾಕಿಸ್ತಾನದ ವಾಸಿಂ ಅಕ್ರಮ್, ವಕಾರ್ ಯೂನಿಸ್, ಶೇನ್ ವಾರ್ನ್ ವೈಟ್ ಬಾಲ್ ಕ್ರಿಕೆಟ್ನಲ್ಲಿ ಈ ರೀತಿ ಮಾಡಿದ್ದಾರೆ. ಬುಮ್ರಾರನ್ನು ನೋಡಿದರೆ ನನಗೆ ಅವರನ್ನೇ ನೋಡಿದಂತಾಗುತ್ತದೆ. ಕೆಲವೇ ಆಟಗಾರರು ಈ ಸಾಮರ್ಥ್ಯವನ್ನು ಹೊಂದಿದ್ದು, ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ನಾನು ಬುಮ್ರಾರಲ್ಲಿ ಅದನ್ನು ನೋಡಿದೆ ಎಂದು ಟೀಮ್ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.