ಕ್ರೀಡೆ

ಅಫ್ಘಾನಿಸ್ತಾನ ವಿಶ್ವಕಪ್​ ಗೆಲ್ಲುವವರೆಗೂ ಮದುವೆಯಾಗಲ್ವಂತೆ ಸ್ಪಿನ್ನರ್​ ರಶೀದ್​..!

ನವದೆಹಲಿ: ರಶೀದ್​ ಖಾನ್​ ಹಾಲಿ ಕ್ರಿಕೆಟ್​ ಯುಗದಲ್ಲಿ ಮಿಂಚುತ್ತಿರುವ ಯುವ ಪ್ರತಿಭೆ. ಅದರಲ್ಲೂ ಟಿ20 ಕ್ರಿಕೆಟ್​ನಲ್ಲಿ ಶ್ರೇಷ್ಠ ಬೌಲರ್​ಗಳ ಸಾಲಿನಲ್ಲಿ ನಿಲ್ಲುತ್ತಾರೆ. 21 ವರ್ಷದ ರಶೀದ್​ ಖಾನ್​, ಟಿ20 ಕ್ರಿಕೆಟ್​ನಲ್ಲಿ ಈಗಾಗಲೇ 296 ವಿಕೆಟ್​ ಕಬಳಿಸಿದ್ದಾರೆ. ಈಗಾಗಲೇ ರಾಷ್ಟ್ರೀಯ ಟೆಸ್ಟ್​ ತಂಡ ಮುನ್ನಡೆಸಿದ ಜವಾಬ್ದಾರಿ ಹೊಂದಿರುವ ರಶೀದ್​ ಖಾನ್​ ತಮ್ಮ ದೊಡ್ಡ ಕನಸು ಹಾಗೂ ಸವಾಲೊಂದನ್ನು ಹೊರಹಾಕಿದ್ದಾರೆ. ಅಫ್ಘಾನಿಸ್ತಾನದ ತಂಡ ವಿಶ್ವಕಪ್​ ಜಯಿಸಿದ ಬಳಿಕವೇ ಮದುವೆಯಾಗುವುದಾಗಿ ಈ ಯುವ ಆಟಗಾರ ಶಪಥ ಮಾಡಿದ್ದಾರೆ.

ಅಫ್ಘಾನಿಸ್ತಾನ ತಂಡದ ಮೋಸ್ಟ್​ ಎಲಿಜಬಲ್​ ಬ್ಯಾಚುಲರ್​ ರಶೀದ್​ ಖಾನ್​. ಪ್ರತಿಷ್ಠಿತ ಐಪಿಎಲ್​ನಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ತಂಡಕ್ಕೆ ದುಬಾರಿ ಮೊತ್ತಕ್ಕೆ ಸೇಲಾಗಿರುವ ಅವರು, ಐಪಿಎಲ್​ ಅಲ್ಲದೆ, ಬಾಂಗ್ಲಾದೇಶ ಪ್ರೀಮಿಯರ್​ ಲೀಗ್​, ಬಿಗ್​ಬಾಷ್​ ಲೀಗ್​, ಮಾನ್ಸಿ ಸೂಪರ್​ ಲೀಗ್​ ಸೇರಿದಂತೆ ಹಲವು ಟಿ20 ಲೀಗ್​ನಲ್ಲಿ ಸ್ಟಾರ್​ ಆಟಗಾರನಾಗಿ ಮಿಂಚುತ್ತಿದ್ದಾರೆ. 2015ರಲ್ಲಿ ರಾಷ್ಟ್ರೀಯ ತಂಡದ ಪರ ಏಕದಿನ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ರಶೀದ್​ ಖಾನ್​, 2019ರ ಏಕದಿನ ವಿಶ್ವಕಪ್​ ತಂಡದ ಭಾಗವಾಗಿದ್ದರು. ಆದರೆ, ಗುಲ್ಬಾದಿನ್​ ನೈಬ್​ ಸಾರಥ್ಯದ ಅಫ್ಘಾನಿಸ್ತಾನ ತಂಡ ಲೀಗ್​ ಹಂತದಲ್ಲಿ ಆಡಿದ ಎಲ್ಲ ಪಂದ್ಯಗಳಲ್ಲೂ ಸೋತಿತ್ತು. ರಶೀದ್ ಖಾನ್ ಇದುವರೆಗೂ 4 ಟೆಸ್ಟ್ ಪಂದ್ಯಗಳಿಂದ 23 ವಿಕೆಟ್, 71 ಏಕದಿನ ಪಂದ್ಯಗಳಿಂದ 133 ವಿಕೆಟ್, 48 ಟಿ20 ಪಂದ್ಯಗಳಿಂದ 89 ವಿಕೆಟ್ ಕಬಳಿಸಿದ್ದಾರೆ.

ಕಳೆದ ಮಾರ್ಚ್​ ತಿಂಗಳಿಂದ ಸ್ಪರ್ಧಾತ್ಮಕ ಕ್ರಿಕೆಟ್​ನಿಂದ ದೂರ ಇರುವ ರಶೀದ್​ ಖಾನ್​, ಭಾರತದಲ್ಲಿ ನಡೆದ ಐರ್ಲೆಂಡ್​ ವಿರುದ್ಧದ ಸರಣಿಯೇ ಕಡೇ ಟೂನಿರ್ಯಾಗಿದೆ. ಬಳಿಕ ಐಪಿಎಲ್​ನಲ್ಲಿ ಆಡಬೇಕಿತ್ತು. ಆದರೆ, ಕರೊನಾ ವೈರಸ್​ ಭೀತಿಯಿಂದಾಗಿ ಐಪಿಎಲ್​ ಅನಿದಿರ್ಷ್ಟಾವಧಿವರೆಗೆ ಮುಂದೂಡಿಕೆಯಾಗಿದೆ.