IPL 2025: ಏ.02ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್ಸಿಬಿ ಮತ್ತು ಗುಜರಾತ್ ಟೈಟನ್ಸ್ ನಡುವಿನ ಪಂದ್ಯದಲ್ಲಿ ಶುಭಮನ್ ಗಿಲ್ ಪಡೆ, 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಆರ್ಸಿಬಿಯನ್ನು ತವರಿನ್ನಲ್ಲೇ ಮಣಿಸಿದ ಖುಷಿಯನ್ನು ವ್ಯಕ್ತಪಡಿಸಿದ ಜಿಟಿ, ಮುಂಬರುವ ಪಂದ್ಯಗಳನ್ನು ಸಹ ಗೆದ್ದು ಬೀಗುವ ಉತ್ಸಾಹವನ್ನು ತೋರಿದೆ.
ಇದನ್ನೂ ಓದಿ: ಚೀನಾ ನಾಗರಿಕರೊಂದಿಗೆ ಲೈಂಗಿಕ ಸಂಬಂಧ ನಿಷೇಧ; ಉದ್ಯೋಗಿಗಳಿಗೆ ಟ್ರಂಪ್ ಸರ್ಕಾರದ ಹೊಸ ನಿಯಮ | Donald Trump
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ಪಡೆಗೆ ಉತ್ತಮ ಆರಂಭ ಸಿಗಲಿಲ್ಲ. ತಮ್ಮ ಬಲಿಷ್ಠ ಬೌಲಿಂಗ್ ದಾಳಿಯಿಂದ ಬೆಂಗಳೂರು ಬ್ಯಾಟರ್ಗಳನ್ನು ಕಟ್ಟಿಹಾಕಿದ ಮೊಹಮ್ಮದ್ ಸಿರಾಜ್, ಬರೋಬ್ಬರಿ ಮೂರು ವಿಕೆಟ್ಗಳನ್ನು ಕಬಳಿಸಿ, ತಂಡದ ಪರ ಮಿಂಚಿದರು. ವೇಗಿಗಳ ಪೈಕಿ ಸಿರಾಜ್, ಪ್ರಸಿದ್ಧ್ ಕೃಷ್ಣ ಅದ್ಭುತ ಪ್ರದರ್ಶನ ನೀಡಿದರೆ, ಬಹಳ ನಿರೀಕ್ಷೆಯನ್ನು ಇಟ್ಟುಕೊಂಡಿದ್ದ ಸ್ಪಿನ್ ಮಾಂತ್ರಿಕನೇ ಹೆಚ್ಚುವರಿ ರನ್ ಕೊಟ್ಟಿದ್ದು ಮ್ಯಾನೇಜ್ಮೆಂಟ್ ಹಾಗೂ ಜಿಟಿ ಅಭಿಮಾನಿಗಳ ಬೇಸರಕ್ಕೆ ಕಾರಣವಾಯಿತು. ಸದ್ಯ ಇದೇ ವಿಷಯ ಮಾಜಿ ಕ್ರಿಕೆಟಿಗನನ್ನು ಕೆರಳಿಸಿದೆ.
ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ತೋರಿರುವ ರಶೀದ್ ಖಾನ್, ತಮ್ಮ ತಂಡದಲ್ಲಿ ಆಡುತ್ತಿದ್ದಾರೆ ಎಂದರೆ ಅವರ ಮೇಲಿನ ನಿರೀಕ್ಷೆಗಳು ಎಂದಿಗಿಂತ ದುಪ್ಪಟ್ಟಾಗಿಯೇ ಇರುತ್ತದೆ. ಆದರೆ, ನಿನ್ನೆಯ ಪಂದ್ಯದಲ್ಲಿ ಆ ಮ್ಯಾಜಿಕ್ ಕ್ಷಣಗಳು ಇರದೆ ಕೇವಲ ಸಪ್ಪೆ ಪ್ರದರ್ಶನ ನೀಡಿದ್ದು, ಇದೀಗ ಭಾರೀ ಬೇಸರಕ್ಕೆ ಕಾರಣವಾಗಿದೆ. ಈ ಕುರಿತು ಮಾತನಾಡಿರುವ ಮಾಜಿ ಹಿರಿಯ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು, "ತಮ್ಮದೇ ತಂಡದಲ್ಲಿರುವ ಸಾಯಿ ಕಿಶೋರ್ನನ್ನು ನೋಡಿ ರಶೀದ್ ಕಲಿಯಬೇಕು. ತನ್ನ 4 ಓವರ್ನಲ್ಲಿ ಸಾಯಿ 22 ರನ್ ಕೊಟ್ಟು, ಎರಡು ವಿಕೆಟ್ಗಳನ್ನು ಕಬಳಿಸಿದ್ದಾರೆ. ಆದರೆ, ನೀವು?" ಎಂದು ಪ್ರಶ್ನಿಸಿದರು.
"ಅಂತಹ ವಿಕೆಟ್ಗಳನ್ನು ಕಬಳಿಸುವ ಕೌಶಲ್ಯದ ಬೌಲಿಂಗ್ನತ್ತ ರಶೀದ್ ಗಮನ ಹರಿಸಬೇಕು. ವೇಗವಾಗಿ ಸ್ಪಿನ್ ಮಾಡುವುದರ ಜತೆಗೆ ಹೆಚ್ಚು ಗೂಗ್ಲಿ ಹಾಕಿದರೆ, ಬ್ಯಾಟರ್ಗಳು ಸುಲಭವಾಗಿ ಡಿಕೋಡ್ ಮಾಡುತ್ತಾರೆ. ಅದರಲ್ಲೂ ರಶೀದ್ ಹಾಕುವ ಎಸೆತದ ಬಗ್ಗೆ ಬ್ಯಾಟರ್ಗಳು ಮುಂಚಿತವಾಗಿಯೇ ಎಚ್ಚೆತ್ತುಕೊಳ್ಳುತ್ತಿದ್ದಾರೆ. ಈ ವಿಷಯದಲ್ಲಿ ರಶೀದ್ ಖಾನ್ ಎಚ್ಚರವಹಿಸಬೇಕು. ವಿಕೆಟ್ ಕೀಳಲು ಮಂದಗತಿಯ ಸ್ಪಿನ್ ಅಗತ್ಯವಿದೆ" ಎಂದರು,(ಏಜೆನ್ಸೀಸ್).