Virat Kohli : ಟೀಮ್ ಇಂಡಿಯಾದ ದಿಗ್ಗಜ ಬ್ಯಾಟರ್, ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಇದೀಗ 12 ವರ್ಷಗಳ ಬಳಿಕ ಮತ್ತೆ ರಣಜಿ ಟ್ರೋಫಿಯಲ್ಲಿ ದೆಹಲಿ ತಂಡದ ಪರ ಅಖಾಡಕ್ಕಿಳಿಯಲಿದ್ದಾರೆ. ಇದೇ ಗುರುವಾರ (ಜ.30) ಮೊದಲ ಬಾರಿಗೆ ರಣಜಿ ಟ್ರೋಫಿ ಪಂದ್ಯದಲ್ಲಿ ಆಡಲಿರುವ ವಿರಾಟ್, ತಂಡದ ನಾಯಕನಾಗಿ ಕಾಣಿಸಿಕೊಳ್ಳಲು ನಿರಾಕರಿಸಿದ್ದಾರೆ.
2012ರಲ್ಲಿ ದೇಶೀಯ ವೈಟ್ ಬಾಲ್ ಟೂರ್ನಿಯಲ್ಲಿ ದೆಹಲಿ ಪರ ಕೊನೆಯ ಬಾರಿಗೆ ಆಡಿದ್ದ ಕೊಹ್ಲಿ, ಈ ಬಾರಿ ರೈಲ್ವೇಸ್ ವಿರುದ್ಧದ ರಣಜಿ ಟ್ರೋಫಿ ಪಂದ್ಯಕ್ಕಾಗಿ ದೆಹಲಿ ತಂಡದ ಭಾಗವಾಗಿದ್ದಾರೆ. ಪಂದ್ಯ ಪ್ರಾರಂಭವಾಗುವ ಕೆಲವು ದಿನಗಳ ಮೊದಲೇ ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿದ್ದಾರೆ. ಕ್ಯಾಪ್ಟನ್ ಆಗಿ ನೀವೇ ತಂಡವನ್ನು ಮುನ್ನಡೆಸಿ ಎಂಬ ಜವಾಬ್ದಾರಿಯನ್ನು ಹೊರಲು ಇಚ್ಛಿಸದ ಕೊಹ್ಲಿ, ತಂಡದವರೊಂದಿಗೆ ತರಬೇತಿ ನಡೆಸಿ, ಆಟವಾಡಲು ಮುಂದಾಗಿದ್ದಾರೆ.
ತಂಡದೊಂದಿಗೆ ತರಬೇತಿಯಲ್ಲಿ ಭಾಗಿಯಾಗಿ, ಇತರೆ ಆಟಗಾರರಿಗೆ ತರಬೇತಿ ನೀಡುವುದಾಗಿ ಕೊಹ್ಲಿ ತಿಳಿಸಿದ್ದಾರೆಂದು ಮುಖ್ಯ ಕೋಚ್ ಸರಣ್‌ದೀಪ್ ಸಿಂಗ್ ಹೇಳಿದರು. ದೆಹಲಿ ಆಟಗಾರರು ಕೊಹ್ಲಿ ಅವರೊಂದಿಗೆ ಹೆಚ್ಚು ಸಮಯ ಕಳೆಯಲು ಅವಕಾಶ ಸಿಕ್ಕರೆ ಅದು ಅವರಿಗೆ ಉತ್ತಮ ಅನುಭವವಾಗುತ್ತದೆ ಎಂದು ಡಿಡಿಸಿಎ ಅಧಿಕಾರಿಯೊಬ್ಬರು ಸೋಮವಾರ ಮಾಧ್ಯಮಕ್ಕೆ ತಿಳಿಸಿದ್ದಾರೆ.
ರೈಲ್ವೇಸ್ ವಿರುದ್ಧದ ಪಂದ್ಯದಲ್ಲಿ ದೆಹಲಿ ತಂಡವನ್ನು ಮುನ್ನಡೆಸುವ ಪ್ರಸ್ತಾಪವನ್ನು ಕೊಹ್ಲಿಗೆ ನೀಡಲಾಗಿತ್ತು. ಆದರೆ, ಅವರು ನಿರಾಕರಿಸಿದರು ಎಂದು ವರದಿಯಾಗಿದೆ. ರಿಷಭ್ ಪಂತ್ ಕೂಡ ಈ ಪಂದ್ಯದಲ್ಲಿ ಆಡದ ಕಾರಣ, ಆಯುಷ್ ಬದೋನಿ ತಂಡವನ್ನು ಮುನ್ನಡೆಸಲಿದ್ದಾರೆ. (ಏಜೆನ್ಸೀಸ್)