ನವದೆಹಲಿ: ಟೀಮ್ ಇಂಡಿಯಾದ ಮಾಜಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಬಗ್ಗೆ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಕುತೂಹಲಕಾರಿ ಕಾಮೆಂಟ್ ಮಾಡಿದ್ದಾರೆ. ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಮಾಡಿದ ಆ ಒಂದು ಕೆಲಸ ದ್ರಾವಿಡ್ ಕಣ್ಣಲ್ಲಿ ನೀರು ತರಿಸಿತು. ಆದರೆ, ಅದು ನೋವಿನಿಂದ ಬಂದ ಕಣ್ಣೀರಲ್ಲ. ಬದಲಾಗಿ ದ್ರಾವಿಡ್ ಹೃದಯಾಂತರಾಳದಿಂದ ಹರಿದುಬಂದು ಆನಂದಭಾಷ್ಪ ಎಂದು ಎಂದು ಅಶ್ವಿನ್ ಹೇಳಿದ್ದಾರೆ.
ಹಿಟ್ಮ್ಯಾನ್ ರೋಹಿತ್ ಶರ್ಮ ನಾಯಕತ್ವದಲ್ಲಿ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಗೆದ್ದಿರುವುದೇ ಎಲ್ಲರಿಗೂ ಗೊತ್ತೇ ಇದೆ. ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿ ಭಾರತ ತಂಡ ವಿಶ್ವ ಚಾಂಪಿಯನ್‌ಶಿಪ್ ಆಯಿತು. 17 ವರ್ಷಗಳ ಟಿ20 ವಿಶ್ವಕಪ್ಗೆ ಟೀಮ್ ಇಂಡಿಯಾ ಮುತ್ತಿಟ್ಟಿದೆ.
ತಮ್ಮ ನಾಯಕತ್ವದಲ್ಲಿ ಭಾರತಕ್ಕೆ ವಿಶ್ವಕಪ್ ನೀಡುವ ಕನಸಿನೊಂದಿಗೆ ರೋಹಿತ್ ಶರ್ಮ, ಒಮ್ಮೆಯಾದರೂ ಟಿ20 ವಿಶ್ವಕಪ್ ಗೆಲ್ಲುವ ಆಸೆಯೊಂದಿಗೆ ವಿರಾಟ್ ಕೊಹ್ಲಿ ಮತ್ತು ತಮ್ಮ ಕೋಚಿಂಗ್‌ನಲ್ಲಿ ಟೀಮ್ ಇಂಡಿಯಾವನ್ನು ಚಾಂಪಿಯನ್ ಮಾಡುವ ಹಂಬಲದೊಂದಿಗೆ ರಾಹುಲ್ ದ್ರಾವಿಡ್ ತುಂಬಾ ಶ್ರಮಿಸಿದರು. ಹಾಗಾಗಿಯೇ 140 ಕೋಟಿ ಭಾರತೀಯರ ಕನಸು ನನಸಾಯಿತು. ಫೈನಲ್ ಪಂದ್ಯದ ಗೆಲುವಿನ ನಂತರ ಭಾರತೀಯ ಕ್ರಿಕೆಟಿಗರ ಸಂಭ್ರಮಾಚರಣೆಯು ಸಹ ವಿಶೇಷವಾಗಿತ್ತು. ಪ್ರತಿಯೊಬ್ಬ ಆಟಗಾರರು ವಿಭಿನ್ನ ಭಾವನೆಗಳನ್ನು ವ್ಯಕ್ತಪಡಿಸಿದರು. ಹಾರ್ದಿಕ್ ಪಾಂಡ್ಯ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮೈದಾನದಲ್ಲೇ ಕಣ್ಣೀರು ಹಾಕಿದರು.
ವಿಶ್ವಕಪ್ ಗೆದ್ದ ಸಂಭ್ರಮಾಚರಣೆ ತುತ್ತ ತುದಿಯಲ್ಲಿ ಇರುವಾಗ ಮತ್ತು ಎಲ್ಲ ಆಟಗಾರರು ಟ್ರೋಫಿಯನ್ನು ಹಿಡಿದು ಸಂಭ್ರಮಿಸುವಾಗ ವಿರಾಟ್ ಕೊಹ್ಲಿ ಅವರು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರನ್ನು ತಂಡದ ಮಧ್ಯಕ್ಕೆ ಕರೆದು ಟಿ20 ವಿಶ್ವಕಪ್ ಟ್ರೋಫಿಯನ್ನು ದ್ರಾವಿಡ್ ಕೈಗೆ ನೀಡಿದರು. ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ವಿಶ್ವಕಪ್ ಗೆದ್ದ ದ್ರಾವಿಡ್, ತಮ್ಮ ಸಹಜ ಶೈಲಿಗಿಂತ ಭಿನ್ನವಾಗಿ ತುಂಬಾ ಭಾವುಕರಾದರು. ಬಳಿಕ ಟ್ರೋಫಿಯನ್ನು ತನ್ನ ಕೈಗಳಿಂದ ಮೇಲಕ್ಕೆ ಎತ್ತಿ ಅಲುಗಾಡಿಸಿ ಸಂಭ್ರಮಿಸಿದರು. ಆ ಸಮಯದಲ್ಲಿ ದ್ರಾವಿಡ್ ಕಣ್ಣೀರು ಸುರಿಸಿದರು.
ಈ ಒಂದು ಕ್ಷಣ ಟಿ20 ವಿಶ್ವಕಪ್ ವಿಜಯದ ಸಂಭ್ರಮಾಚರಣೆಯಲ್ಲೇ ಅತ್ಯುತ್ತಮ ಕ್ಷಣ ಎಂದು ಅಶ್ವಿನ್ ಇತ್ತೀಚೆಗೆ ಮಾಧ್ಯಮ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್)