ಬರ್ಮಿಂಗ್ಹ್ಯಾಮ್: ಇಂಗ್ಲೆಂಡ್‌ನ ಬರ್ಮಿಂಗ್ಹ್ಯಾಮ್ನಲ್ಲಿ ನಡೆಯುತ್ತಿರುವ 2022ನೇ ಸಾಲಿನ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ಮಹಿಳಾ ವಿಭಾಗದ 55 ಕೆಜಿ ಭಾರ ಎತ್ತುವ ಸ್ಪರ್ಧೆಯಲ್ಲಿ ಬಿಂದ್ಯಾರಾಣಿ ದೇವಿ ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದು, ಪ್ರಸಕ್ತ ಕ್ರೀಡಾಕೂಟದಲ್ಲಿ ಭಾರತದ ನಾಲ್ಕನೇ ಪದಕ ಇದಾಗಿದೆ.
22 ವರ್ಷದ ಮಣಿಪುರ ಮೂಲದ ವೇಟ್ ಲಿಫ್ಟರ್ ಬಿಂದ್ಯಾರಾಣಿ ಅವರು ಇಂಗ್ಲೆಂಡ್‌ನ ಫ್ರೇರ್ ಮಾರೊ (198) ವಿರುದ್ಧ ಕ್ಲೀನ್ ಮತ್ತು ಜರ್ಕ್‌ನ ಫೈನಲ್ ಸುತ್ತಿನಲ್ಲಿ 116 ಕೆಜಿಯ ಅದ್ಭುತ ಪ್ರಯತ್ನದೊಂದಿಗೆ ಒಟ್ಟು 202 ಕೆಜಿ ತೂಕವನ್ನು ಎತ್ತುವ ಮೂಲಕ ಎರಡನೇ ಸ್ಥಾನವನ್ನು ಗಳಿಸಿದರು. ಒಟ್ಟು 203 ಕೆಜಿ ಭಾರ ಎತ್ತಿದ ನೈಜಿರಿಯಾದ ಅದಿಜತ್ ಅದೆನಿಕೆ ದ್ಲಾರಿಂದೆ ಅವರು ಮೊದಲ ಸ್ಥಾನದೊಂದಿಗೆ ಚಿನ್ನದ ಪದಕಕ್ಕೆ ಮುತ್ತಿಟ್ಟರು. ಕೇವಲ ಒಂದು ಕೆಜಿ ತೂಕದ ಅಂತರದಲ್ಲಿ ಬಿಂದ್ಯಾರಾಣಿ ಚಿನ್ನದ ಪದಕ ವಂಚಿತರಾದರು.
ಸ್ನ್ಯಾಚ್ ಸುತ್ತಿನಲ್ಲಿ ನೈಜೀರಿಯಾದ ಅದಿಜತ್ (92 ಕೆಜಿ) ಮತ್ತು ಇಂಗ್ಲಿಷ್ನ ಫ್ರೇರ್ ಮಾರೊ (88 ಕೆಜಿ) ಎದುರು 86 ಕೆಜಿ ಭಾರ ಎತ್ತುವ ಮೂಲಕ ಕೇವಲ ಕಡಿಮೆ ಅಂತರದಲ್ಲಿ ಅತ್ಯುತ್ತಮ ಪ್ರಯತ್ನವನ್ನು ನಿರ್ವಹಿಸಿದ ಬಿಂದ್ಯಾರಾಣಿ, ಕ್ಲೀನ್ ಮತ್ತು ಜರ್ಕ್‌ನಲ್ಲಿ ಬಲವಾಗಿ ಮರಳಿದರು.
ಕ್ಲೀನ್ ಆ್ಯಂಡ್ ಜರ್ಕ್ ಸುತ್ತಿನಲ್ಲಿ ಮೊದಲ ಯತ್ನದಲ್ಲಿ 110 ಕೆಜಿ ಭಾರ ಎತ್ತಿದರು. ಆದರೆ, ನೈಜಿರಿಯನ್ ಸ್ಪರ್ಧಿ ಇದೇ ಭಾರವನ್ನು ಎತ್ತುವಲ್ಲಿ ವಿಫಲವಾದರು. ಆದರೆ, ಎರಡನೇ ಪ್ರಯತ್ನದಲ್ಲಿ 110 ಕೆಜಿ ಎತ್ತಿದರು. ಇದರಿಂದ ಅವರ ಒಟ್ಟು ಲೆಕ್ಕಕ್ಕೆ ಇನ್ನುಷ್ಟು ಕೆಜಿ ಸೇರಿತು. ಆದರೆ, ಬಿಂದ್ಯಾರಾಣಿ 114ಕೆಜಿ ಎತ್ತುವಲ್ಲಿ ವಿಫಲವಾದರು. ಇದರಿಂದ ಮೂರನೇ ಸ್ಥಾನಕ್ಕೆ ಕುಸಿದರು. ಇತ್ತ 109 ಕೆಜಿ ಭಾರ ಎತ್ತುವ ಮೂಲಕ ಇಂಗ್ಲೆಂಡ್‌ನ ಮ್ಯಾರೋ 198 ಕೆಜಿ ತೂಕ ಎತ್ತಿದ್ದರು.
ಕ್ಲೀನ್ ಮತ್ತು ಜರ್ಕ್‌ನ ತನ್ನ ಮೂರನೇ ಮತ್ತು ಅಂತಿಮ ಅವಕಾಶದಲ್ಲಿ 116 ಕೆಜಿ ಭಾರ ಎತ್ತುವ ಮೂಲಕ ಒಟ್ಟು 202 ಕೆಜಿಯೊಂದಿಗೆ ಬೆಳ್ಳಿ ಪದಕವನ್ನು ಜಯಿಸಿದರು. ಇದು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬಿಂದ್ಯಾರಾಣಿ ಅವರ ಮೊದಲ ಪದಕವಾಗಿದೆ.
ಇದಕ್ಕೂ ಮುನ್ನ ಶನಿವಾರ ಮಹಿಳೆಯರ 49 ಕೆಜಿ ವಿಭಾಗದಲ್ಲಿ ಮೀರಾಬಾಯಿ ಚಾನು ಚಿನ್ನದ ಪದಕ, ಪುರುಷರ 55 ಕೆಜಿ ವಿಭಾಗದಲ್ಲಿ ಸಂಕೇತ್ ಸರ್ಗರ್ ಬೆಳ್ಳಿ ಮತ್ತು 61 ಕೆಜಿ ವಿಭಾಗದಲ್ಲಿ ಗುರುರಾಜ ಪೂಜಾರಿ ಕಂಚಿನ ಪದಕ ಗೆದ್ದುಕೊಂಡಿದ್ದು, ಭಾರತ ವೇಟ್‌ಲಿಫ್ಟಿಂಗ್‌ನಲ್ಲಿ ನಾಲ್ಕು ಪದಕಗಳೊಂದಿಗೆ ಪದಕ ಬೇಟೆ ಆರಂಭಿಸಿದೆ. (ಏಜೆನ್ಸೀಸ್)