PSL vs IPL: ಮಾ.22ರಿಂದ ಭಾರತದಲ್ಲಿ ನಡೆಯುತ್ತಿರುವ ಐಪಿಎಲ್ ಜಾಗತಿಕ ಮಟ್ಟದಲ್ಲಿ ವ್ಯಾಪಕ ವೀಕ್ಷಣೆಯನ್ನು ಪಡೆಯುತ್ತಿದೆ. ಈ ವಿಷಯದಲ್ಲಿ ಅನುಮಾನವೇ ಇಲ್ಲ. ಬಿಸಿಸಿಐ ಐಪಿಎಲ್ ಲೀಗ್ ಶುರುಮಾಡಿದ ಒಂದೇ ತಿಂಗಳೊಳಗೆ ತಮ್ಮ ದೇಶದಲ್ಲಿ ಪಿಎಸ್ಎಲ್ಗೆ ಚಾಲನೆ ನೀಡಿರುವ ಪಾಕಿಸ್ತಾನ, ಎಂದಿನಂತೆ ತನ್ನ ನರಿ ಬುದ್ಧಿಯನ್ನು ತೋರುವಲ್ಲಿ ಮುಂದಾಗಿದೆ. ವೀಕ್ಷಕರ ಸಂಖ್ಯೆ ಹಾಗೂ ಕ್ರಿಕೆಟ್ ಪ್ರೇಮಿಗಳ ಸಂಖ್ಯೆ ಐಪಿಎಲ್ಗೆ ಹೆಚ್ಚು. ಜಾಗತಿಕವಾಗಿ ಇಂಡಿಯನ್ ಪ್ರೀಮಿಯರ್ ಲೀಗ್ನ ಫ್ರಾಂಚೈಸಿ, ಕ್ರಿಕೆಟಿಗರಿಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಇದನ್ನು ಸಹಿಸಿಕೊಳ್ಳದ ಪಾಕ್ ಮಾಜಿ ಆಟಗಾರರು, ಪಿಎಸ್‌ಎಲ್ ಮುಂದೆ ಐಪಿಎಲ್ ಏನೇನೂ ಅಲ್ಲ ಎಂದು ಹೇಳಿರುವುದು ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಪ್ರಸಕ್ತ ಐಪಿಎಲ್ 18ನೇ ಆವೃತ್ತಿಯ ಪಂದ್ಯಗಳು ರೋಚಕತೆಗೆ ಸಾಕ್ಷಿಯಾಗುತ್ತಿದ್ದು, ಕ್ರಿಕೆಟ್ ಅಭಿಮಾನಿಗಳ ಉತ್ಸಾಹ, ಕುತೂಹಲ ಎಂದಿಗಿಂತ ದುಪ್ಪಟ್ಟಾಗಿದೆ. ಆರ್ಸಿಬಿ, ಡೆಲ್ಲಿ ಕ್ಯಾಪಿಟಲ್ಸ್, ಗುಜರಾತ್ ಟೈಟನ್ಸ್, ಪಂಜಾಬ್ ಕಿಂಗ್ಸ್, ಕೋಲ್ಕತ ನೈಟ್ ರೈಡರ್ಸ್ ಉತ್ತಮ ಆಲ್ರೌಂಡ್ ಪ್ರದರ್ಶನದ ಮೂಲಕ ಅಂಕಪಟ್ಟಿಯಲ್ಲಿ ಮಿಂಚುತ್ತಿದೆ. ಹೀಗಿರುವಾಗ ಮತ್ತೊಮ್ಮೆ ಪಾಕ್ ತನ್ನ ದ್ವೇಷದ ಜ್ವಾಲೆಯನ್ನು ಭಾರತೀಯ ಕ್ರಿಕೆಟ್ ಮೇಲೆ ಚಿಮ್ಮಿರುವುದು ಮಾಜಿ ಕ್ರಿಕೆಟಿಗರನ್ನು ಪ್ರತಿಕ್ರಿಯಿಸುವಂತೆ ದೂಡುತ್ತಿದೆ. ಈ ವಿಚಾರಕ್ಕೆ ಮಾಜಿ ಬ್ಯಾಟರ್ ಮೊಹಮ್ಮದ್ ಹಫೀಜ್ ಕಡೆಗೂ ಪ್ರತಿಕ್ರಿಯಿಸಿದ್ದಾರೆ.
ಕಳೆದ ಒಂದಷ್ಟು ದಿನಗಳಿಂದ ಪಾಕ್ ಕ್ರಿಕೆಟ್ಗೆ ವೈರಿಯಾಗಿ ಕಾಣುತ್ತಿರುವ ಹಫೀಜ್, ದಿಗ್ಗಜ ಬ್ಯಾಟರ್ಗಳಾದ ವಾಖರ್ ಯೂನಿಸ್, ವಾಸಿಮ್ ಅಕ್ರಂರನ್ನು ಎದುರು ಹಾಕಿಕೊಂಡಿದ್ದಾರೆ. ಇವರೊಂದಿಗೆ ಕೆಲವು ವಿಷಯಕ್ಕಾಗಿ ತೀವ್ರ ಜಿದ್ದಾಜಿದ್ದಿಯನ್ನು ಹೊಂದಿದ್ದಾರೆ. ಇದೆಲ್ಲದರ ಮಧ್ಯೆ ನಿಮಗೆ ಪಿಎಸ್‌ಎಲ್ ಅಥವಾ ಐಪಿಎಲ್ ಯಾವುದು ಉತ್ತಮ, ಮನರಂಜನಾತ್ಮಕ ಎನಿಸುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಹಫೀಜ್, 'ನನಗೆ ಎರಡೂ ಉತ್ತಮವೇ' ಎಂದು ಹೇಳಿದ್ದಾರೆ.
"ಇಲ್ಲಿ ಯಾವುದೇ ಹೋಲಿಕೆ ಇಲ್ಲ. ನನಗೆ, ಎರಡೂ ಲೀಗ್‌ಗಳು (ಐಪಿಎಲ್ ಮತ್ತು ಪಿಎಸ್‌ಎಲ್) ಪ್ರಪಂಚದಾದ್ಯಂತದ ಕ್ರಿಕೆಟ್ ಅಭಿಮಾನಿಗಳಿಗೆ ಒಳ್ಳೆಯ ಮನರಂಜನೆಯನ್ನು ನೀಡುತ್ತಿವೆ" ಎಂದು ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).