ನವದೆಹಲಿ: ಮಾಜಿ ಕ್ರಿಕೆಟಿಗ ಹಾಗೂ ಉತ್ತರ ಪ್ರದೇಶ ಸರ್ಕಾರದ ಸಚಿವ ಚೇತನ್ ಚೌಹಾನ್ ಅವರ ನಿಧನಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ರಾಜಕೀಯ ಹಾಗೂ ಕ್ರೀಡಾಕ್ಷೇತ್ರದ ಗಣ್ಯರು ಸಂತಾಪ ಸೂಚಿಸಿದ್ದಾರೆ. ಕಳೆದ ತಿಂಗಳು ಕರೊನಾ ವೈರಸ್ ಸೋಂಕಿಗೆ ಒಳಗಾಗಿದ್ದ ಚೇತನ್ ಅವರನ್ನು ಗುರುಗ್ರಾಮದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿರುವ ಅವರು ಭಾನುವಾರ ನಿಧನರಾದರು. ಚೇತನ್ ಚೌಹಾನ್ ಎರಡು ಬಾರಿ ಸಂಸದರಾಗಿಯೂ ಕಾರ್ಯನಿರ್ವಹಿಸಿದ್ದರು.
ಚೇತನ್ ಚೌಹಾನ್ ನಿಧನಕ್ಕೆ ಟ್ವೀಟ್ ಮೂಲತ ಸಂತಾಪ ಸೂಚಿಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಉತ್ತಮ ಕ್ರಿಕೆಟಿಗ ಜತೆಗೆ ರಾಜಕೀಯ ನಾಯಕನಾಗಿದ್ದರು. ಸಾರ್ವಜನಿಕ ಸೇವೆ ತಮ್ಮನ್ನು ತೊಡಗಿಸಿಕೊಂಡಿದ್ದರು. ಉತ್ತರ ಪ್ರದೇಶದಲ್ಲಿ ಬಿಜೆಪಿ ಸಂಘಟನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದರು ಎಂದು ಹೇಳಿದ್ದಾರೆ. ಮೋದಿ ಅಲ್ಲದೆ, ಗೃಹ ಸಚಿವ ಅಮಿತ್ ಷಾ, ಬಿಜೆಪಿ ನಾಯಕ ರಾಜೀವ್ ಪ್ರತಾಪ್ ರೂಢಿ, ಸಂಸದ ಹಾಗು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.
ತಮ್ಮ ಕ್ರೀಡಾ ಜೀವನದ ಹಲವು ಘಟನೆಗಳನ್ನು ನನ್ನೊಂದಿಗೆ ಹಂಚಿಕೊಳ್ಳುತ್ತಿದ್ದರು. ಅವರ ಸಾವಿನ ಸುದ್ದಿ ಆಘಾತ ತಂದಿದೆ ಎಂದು ದಿಗ್ಗಜ ಸಚಿನ್ ತೆಂಡುಲ್ಕರ್ ಟ್ವೀಟ್ ಮಾಡಿದ್ದಾರೆ. ಮಾಜಿ ಕೋಚ್ ಅನಿಲ್ ಕುಂಬ್ಳೆ, 2007-08ರಲ್ಲಿ ಆಸ್ಟ್ರೆಲಿಯಾ ಪ್ರವಾಸದ ವೇಳೆ ನಿಮ್ಮೊಂದಿಗೆ ನಡೆಸಿದ ಮಾತುಕತೆ ಫಲಪ್ರದವಾಗಿತ್ತು. ಯಾವತ್ತಿಗೂ ನಾನು ಮರೆಯುವುದಿಲ್ಲ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು ಎಂದು ತಿಳಿಸಿದ್ದಾರೆ. ಮಾಜಿ ಕ್ರಿಕೆಟಿಗರಾದ ವೀರೇಂದ್ರ ಸೆಹ್ವಾಗ್, ವಿವಿಎಸ್ ಲಕ್ಷ್ಮಣ್, ಶಿಖರ್ ಧವನ್, ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಅನೇಕ ಮಂದಿ ಸಂತಾಪ ಸೂಚಿಸಿದ್ದಾರೆ.
ಚೇತನ್, ಜುಲೈ 12 ರಂದು ಲಖನೌದ ಸಂಜಯ್ ಗಾಂಧಿ ಪಿಜಿಐ ಆಸ್ಪತ್ರೆಯಲ್ಲಿ ಕೋವಿಡ್-19 ಪರೀಕ್ಷೆಗೆ ಒಳಗಾಗಿದ್ದರು. ಚೇತನ್ ಚೌಹಾನ್, ಪತ್ನಿ ಹಾಗೂ ಪುತ್ರ ವಿನಾಯಕ ಅವರನ್ನು ಅಗಲಿದ್ದಾರೆ. ಪುತ್ರ ವಿನಾಯಕ್ ಮೆಲ್ಬೋರ್ನ್ನಲ್ಲಿ ನೆಲೆಸಿದ್ದು, ಭಾನುವಾರ ಸಂಜೆ ವೇಳೆಗೆ ಆಗಮಿಸುವ ನಿರೀಕ್ಷೆಯಿದೆ. ನನ್ನ ಹಿರಿಯರ ಸಹೋದರ ಚೇತನ್ ಚೌಹಾನ್ ಇಂದು ನಮ್ಮನ್ನು ಅಗಲಿದ್ದಾರೆ. ಮಗ ವಿನಾಯಕ್ ಮೆಲ್ಬೋರ್ನ್ನಿಂದ ಆಗಮಿಸಿದ ಬಳಿಕ ಅಂತಿಮ ವಿಧಿ ವಿಧಾನ ಕಾರ್ಯ ನಡೆಯಲಿದೆ ಎಂದು ಚೇತನ್ ಚೌಹಾನ್ ಸಹೋದರ ಪುಷ್ಪೇಂದ್ರ ತಿಳಿಸಿದ್ದಾರೆ.