ಕ್ರೀಡೆ

ಪ್ಲೀಸ್​ ಏನು ಮಾಡಬೇಡಿ… ಸಂಕಷ್ಟದಲ್ಲಿ ಅಭಿಮಾನಿ, ಅಮೆರಿಕ ಪೊಲೀಸರ ಬಳಿ ಬೇಡಿಕೊಂಡ ರೋಹಿತ್ ಶರ್ಮ!

ನ್ಯೂಯಾರ್ಕ್​: ಟಿ20 ವಿಶ್ವಕಪ್ 2024 ಅಂಗವಾಗಿ ನ್ಯೂಯಾರ್ಕ್​ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಅಭ್ಯಾಸ ಪಂದ್ಯದಲ್ಲಿ ಆಸಕ್ತಿದಾಯಕ ಘಟನೆ ನಡೆಯಿತು.

ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಸೆಕ್ಯುರಿಟಿಯ ಕಣ್ತಪ್ಪಿಸಿ, ಅಭಿಮಾನಿಯೊಬ್ಬ ಮೈದಾನಕ್ಕೆ ಓಡಿಹೋದರು. ಟೀಮ್​ ಇಂಡಿಯಾ ನಾಯಕ ರೋಹಿತ್ ಶರ್ಮ ಬಳಿಗೆ ಓಡಿ, ಅವರನ್ನು ತಬ್ಬಿಕೊಂಡರು. ಈ ಸಂದರ್ಭದಲ್ಲಿ ರೋಹಿತ್ ಕೂಡ ಮೂಕವಿಸ್ಮಿತರಾದರು. ಆದರೆ ಅಷ್ಟರಲ್ಲಿ ಎಚ್ಚೆತ್ತ ಪೊಲೀಸರು ರೋಹಿತ್​ ಅಭಿಮಾನಿಯ ಬಳಿ ಓಡಿಬಂದು ಅತನನ್ನು ಹಿಡಿದುಕೊಂಡರು.

ಅಮೆರಿಕ ಪೊಲೀಸರು ಮೈದಾನಕ್ಕೆ ಧಾವಿಸಿ, ರೋಹಿತ್​ ಅಭಿಮಾನಿಯ ಜತೆ ಹೀನಾಯವಾಗಿ ನಡೆದುಕೊಂಡತು. ಅಭಿಮಾನಿಯನ್ನು ನೆಲಕ್ಕೆ ಕೆಡವಿ, ಆತನ ಮೇಲೆ ಕುಳಿತು, ಕೈಗೆ ಬೇಡಿ ಹಾಕಿ ಎಳೆದೊಯ್ದರು. ಈ ವೇಳೆ ರೋಹಿತ್​, ಯುಎಸ್​ ಪೊಲೀಸ್​ ಅಧಿಕಾರಿಗಳನ್ನು ಬೇಡಿಕೊಂಡರು ಅಧಿಕಾರಿಗಳು ಮಾತ್ರ ರೋಹಿತ್​ ಮಾತಿಗೆ ಕ್ಯಾರೆ ಎನ್ನಲಿಲ್ಲ.

ಅಭಿಮಾನಿಗೆ ಏನನ್ನು ಮಾಡಬೇಡಿ ಮತ್ತು ಏನೂ ಹೇಳಬೇಡಿ ಎಂದು ರೋಹಿತ್​, ಮನವಿ ಮಾಡಿಕೊಂಡರು. ಆದರೂ, ಪೊಲೀಸರು ಸರಿಯಾಗಿ ಸ್ಪಂದಿಸಲಿಲ್ಲ, ಅಷ್ಟರಲ್ಲಿ ಪಂದ್ಯದ ಆಯೋಜಕರೊಬ್ಬರು ಬಂದು ರೋಹಿತ್‌ನ ಮನವಿಯನ್ನು ಪೊಲೀಸರಿಗೆ ತಿಳಿಸಿದರು. ತಕ್ಷಣ ಅಭಿಮಾನಿಯನ್ನು ಮೇಲೆತ್ತಿ ಮೈದಾನದಿಂದ ಹೊರಗೆ ಕರೆದೊಯ್ದರು.

ರೋಹಿತ್ ಶರ್ಮ ಅವರು ತಮ್ಮ ಅಭಿಮಾನಿಯ ಬಗ್ಗೆ ಪೊಲೀಸರಿಗೆ ಮನವಿ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಭಿಮಾನಿಯನ್ನು ರಕ್ಷಿಸಲು ರೋಹಿತ್ ಮಾಡಿದ ಪ್ರಯತ್ನ ಎಲ್ಲರ ಮನಗೆದ್ದಿದೆ. ನಿಜಕ್ಕೂ ರೋಹಿತ್ ಅವರದ್ದು ಮುತ್ತಿನಂತ ಗುಣ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಎಂಎಸ್ ಧೋನಿ, ವಿರಾಟ್ ಕೊಹ್ಲಿ ಮತ್ತು ರೋಹಿತ್ ತಮ್ಮ ಅಭಿಮಾನಿಗಳ ಬೆನ್ನಿಗೆ ಯಾವಾಗಲೂ ನಿಲ್ಲುತ್ತಾರೆ ಎಂದು ಮೆಚ್ಚುಗೆ ಸೂಚಿಸುತ್ತಿದ್ದಾರೆ. (ಏಜೆನ್ಸೀಸ್​)