ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ಶುರುವಾಗುವ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ನಿನ್ನೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅದ್ಧೂರಿ ಅನ್‌ಬಾಕ್ಸ್ ಈವೆಂಟ್ ಆಯೋಜನೆ ಮಾಡಿತ್ತು. ಸಾವಿರಾರು ಅಭಿಮಾನಿಗಳು ಈ ಕಾರ್ಯಕ್ರಮಲ್ಲಿ ಭಾಗವಹಿಸಿ ಯಶಸ್ಸಿಗೊಳಿಸಿದರು. ತಮ್ಮ ನೆಚ್ಚಿನ ಆಟಗಾರರನ್ನು ನೋಡಿ ಕ್ರೀಡಾಂಗಣದ ಹೊರಗೆ ಸಾಕಷ್ಟು ಅಭಿಮಾನಿಗಳು ಸಹ ಕಿಕ್ಕಿರಿದು ನಿಂತಿದ್ದರು. ಸ್ಮೃತಿ ಮಂದಾನ ಪಡೆ ಡಬ್ಲ್ಯುಪಿಎಲ್ನಲ್ಲಿ ಟ್ರೋಫಿ ಜಯಿಸಿರುವು ಆರ್‌ಸಿಬಿ ಪುರುಷರ ತಂಡಕ್ಕೆ ಹೊರ ಹುರುಪು ನೀಡಿದೆ. ನಿನ್ನೆಯ ಕಾರ್ಯಕ್ರಮದಲ್ಲಿ ಆರ್‌ಸಿಬಿ ಹೊಸ ಜರ್ಸಿಯನ್ನು ಸಹ ಅನಾವರಣ ಮಾಡಲಾಯಿತು. ಅಲ್ಲದೆ, ರಾಯಲ್ ಚಾಲೆಂಜರ್ಸ್ ಬ್ಯಾಂಗಲೋರ್ನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂತಾ ಹೆಸರನ್ನು ಸಹ ಬದಲಾಯಿಸಲಾಯಿತು. ಈ ಬಾರಿ ಕಪ್ ಗೆದ್ದ ಆರ್‌ಸಿಬಿ ಮಹಿಳಾ ತಂಡವನ್ನು ಸನ್ಮಾನಿಸಿ, ಗೌರವಿಸಲಾಯಿತು. ಆದರೆ, ಈ ಕಾರ್ಯಕ್ರಮದಲ್ಲಿ ವಿರಾಟ್ ಕೊಹ್ಲಿ ಮಾಡಿದ ಕಾಮೆಂಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದಯವಿಟ್ಟು ಈ ರೀತಿ ಕರೆಯುವುದನ್ನು ನಿಲ್ಲಿಸಿ ಎಂದು ಅಭಿಮಾನಿಗಳಲ್ಲಿ ಕೊಹ್ಲಿ ಮನವಿ ಮಾಡಿರುವುದು ಇದೀಗ ಚರ್ಚೆಯ ವಿಷಯವಾಗಿದೆ. ಆರ್‌ಸಿಬಿ ಅನ್‌ಬಾಕ್ಸ್ ಈವೆಂಟ್‌ನಲ್ಲಿ ಕೊಹ್ಲಿ ತಮ್ಮ ಹೊಸ ಕೇಶ ವಿನ್ಯಾಸದೊಂದಿಗೆ ಕಾಣಿಸಿಕೊಂಡರು. ಹೊಸ ಹೇರ್ ಸ್ಟೈಲ್ನಲ್ಲಿ ಹಾಲಿವುಡ್ ಹೀರೋ ರೀತಿ ಕೊಹ್ಲಿ ಎಂಟ್ರಿ ಕೊಟ್ಟರು. ಅನ್‌ಬಾಕ್ಸ್ ಕಾರ್ಯಕ್ರಮ ಸಾಕಷ್ಟು ಸಂಭ್ರಮದಿಂದ ಕೂಡಿತ್ತು. ಜರ್ಸಿ ಅನಾವರಣ ಸಂದರ್ಭದಲ್ಲಿ ಕೊಹ್ಲಿ ಅವರನ್ನು ವೇದಿಕೆಗೆ ಕರೆಯಲಾಯಿತು. ಈ ವೇಳೆ ಕಾರ್ಯಕ್ರಮಕ್ಕೆ ಬಂದಿದ್ದ ಅಭಿಮಾನಿಗಳಿಗೆ ವಿರಾಟ್ ಕೊಹ್ಲಿ ವಿಶೇಷ ಮನವಿ ಮಾಡಿದರು. ತನ್ನನ್ನು ಕಿಂಗ್ (ರಾಜ) ಎಂದು ಕರೆಯಬೇಡಿ ಎಂದು ಕೊಹ್ಲಿ ಕೇಳಿಕೊಂಡರು. ಬದಲಾಗಿ ಕೇವಲ ವಿರಾಟ್ ಎಂದು ಕರೆದರೆ ಸಾಕು ಎಂದರು.
ವೇದಿಕೆ ಮೇಲೆ ಬಂದ ಕೊಹ್ಲಿಗೆ ಆ್ಯಂಕರ್ ಪ್ರಶ್ನೆಯೊಂದನ್ನು ಕೇಳಿದರು. ರಾಜನಿಗೆ ಏನು ಅನಿಸುತ್ತಿದೆ ಎಂದರು. ಇದೇ ಸಂದರ್ಭದಲ್ಲಿ ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳೆಲ್ಲ ಕಿಂಗ್ ಕೊಹ್ಲಿ.. ಕೊಹ್ಲಿ ಎಂದು ಕೂಗಿದರು. ಈ ಪ್ರತಿಕ್ರಿಯಿಸಿ ಕೊಹ್ಲಿ, ಎಲ್ಲ ಪ್ರೇಕ್ಷಕರು ಸುಮ್ಮನಿರಬೇಕು. ಇಲ್ಲಿಂದ ನಾವು ಬೇಗ ಚೆನ್ನೈಗೆ ಹೊರಡಬೇಕು. ನೀವೆಲ್ಲರೂ ನನ್ನನ್ನು ರಾಜ ಎಂದು ಕರೆಯುವಾಗ ನನಗೆ ತುಂಬಾ ಮುಜುಗರವಾಗುತ್ತದೆ. ದಯವಿಟ್ಟು ನನ್ನನ್ನು ವಿರಾಟ್ ಎಂದು ಕರೆಯಿರಿ ಎಂದರು. ಆದರೆ ತನ್ನನ್ನು ಕಿಂಗ್ ಎಂದು ಕರೆಯಬಾರದು ಎಂದು ಕೊಹ್ಲಿ ಗಂಭೀರವಾಗಿ ಹೇಳಲಿಲ್ಲ. ಅಭಿಮಾನಿಗಳನ್ನು ನಗೆಗಡಲಲ್ಲಿ ತೇಲಿಸುವ ಉದ್ದೇಶದಿಂದ ಕೂಲ್ ಆಗಿ ನಗುತ್ತಲೇ ಹೇಳಿದರು.
ಕೊಹ್ಲಿಯ ಈ ಕಾಮೆಂಟ್ ಇದೀಗ ವೈರಲ್ ಆಗಿದೆ. ವಿರಾಟ್ ಏನೇ ಹೇಳಲಿ ಅಭಿಮಾನಿಗಳಿಗೆ ಮಾತ್ರ ಕೊಹ್ಲಿ ಯಾವತ್ತಿದ್ರೂ ಕಿಂಗ್. ಕಿಂಗ್ ಕೊಹ್ಲಿ ಎಂದು ಕರೆಯುವುದನ್ನು ಮಾತ್ರ ಎಂದಿಗೂ ನಿಲ್ಲಿಸುವುದಿಲ್ಲ. (ಏಜೆನ್ಸೀಸ್)