ಪಾಕಿಸ್ತಾನ: ಟಿ20 ವಿಶ್ವಕಪ್ ಇದೇ ಜೂನ್ 01ರಿಂದ ವೆಸ್ಟ್ ಇಂಡೀಸ್ (West Indies) ಮತ್ತು ಅಮೆರಿಕಾದಲ್ಲಿ (USA) ನಡೆಯಲಿದ್ದು, ಈಗಾಗಲೇ ಸ್ಪರ್ಧಿಸಲಿರುವ ಆಯಾ ದೇಶದ ತಂಡಗಳು ತಮ್ಮ ಆಟಗಾರರ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಈ ಸಾಲಿನಲ್ಲಿ ಟೀಂ ಇಂಡಿಯಾ ಕೂಡ ಇದೆ. ಆದರೆ, ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಮಾತ್ರ ಇಲ್ಲಿಯವರೆಗೂ ತಮ್ಮ ಟೀಮ್ನಲ್ಲಿ ಯಾರೆಲ್ಲಾ ಇದ್ದಾರೆ? ಯಾರನ್ನು ಆಯ್ಕೆ ಮಾಡಿದ್ದೇವೆ ಎಂಬುದರ ಪಟ್ಟಿಯನ್ನು ಇನ್ನೂ ಅಧಿಕೃತಗೊಳಿಸಿಲ್ಲ. ಸದ್ಯ ಈ ಬೆನ್ನಲ್ಲೇ ಶಾಕಿಂಗ್ ಸಂಗತಿಯೊಂದು ಪಾಕ್ ಕ್ರಿಕೆಟ್ ಮಂಡಳಿಯಿಂದ ಹೊರಬಿದ್ದಿದ್ದು, ಈ ಬಾರಿಯ ವಿಶ್ವಕಪ್ ಟ್ರೋಫಿ ಗೆದ್ದರೆ, ಪ್ರತಿ ಆಟಗಾರರಿಗೂ ತಾವು ನಿಗದಿಪಡಿಸಿದ ಹಣವನ್ನು ಬಹುಮಾನವಾಗಿ ಕೊಡ್ತೇವೆ ಎಂದು ಭರವಸೆ ನೀಡಿದೆ.
ಪಿಸಿಬಿ ಅಧ್ಯಕ್ಷ ಮೋಸಿನ್ ನಾಕ್ವಿ ಮಾತನಾಡಿ, "ತಮ್ಮ ತಂಡವೇನಾದರೂ ಈ ಬಾರಿ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿದರೆ, ಪ್ರಮಾಣ ಮಾಡಿ ಹೇಳ್ತೀನಿ, ತಂಡದ ಪ್ರತಿ ಆಟಗಾರನಿಗೂ $100,000 ಹಣವನ್ನು ಬಹುಮಾನದ ರೂಪದಲ್ಲಿ ಕೊಡ್ತೀವಿ" ಎಂದು ಭರವಸೆ ನೀಡಿದ್ದಾರೆ. ಈ ವಿಷಯ ಹೊರಬೀಳುತ್ತಿದ್ದಂತೆ ಇದೀಗ ಅನೇಕರ ಕಣ್ಣು ಪಾಕ್ ಕ್ರಿಕೆಟ್ ಮಂಡಳಿ ಮೇಲೆ ಬಿದ್ದಿದ್ದು, ಇಂತಹ ನಿರ್ಧಾರದ ಹಿಂದಿರುವ ಅಸಲಿ ಕಾರಣವೇನು ಎಂದು ಪ್ರಶ್ನಿಸಿದ್ದಾರೆ.
2009ರಲ್ಲಿ ತಮ್ಮ ಮೊದಲ ಟಿ20 ವಿಶ್ವಕಪ್ ಅನ್ನು ಲಾರ್ಡ್ಸ್ ಮೈದಾನದಲ್ಲಿ ಶ್ರೀಲಂಕಾ ತಂಡವನ್ನು ಮಣಿಸುವ ಮೂಲಕ ಗೆದ್ದು ಬೀಗಿದ್ದ ಪಾಕ್ಗೆ ಇದೀಗ ಗ್ಯಾರಿ ಕರ್ಸ್ಟನ್ ತಂಡಕ್ಕೆ ನೂತನ ಕೋಚ್ ಆಗಿ ನೇಮಕಗೊಂಡಿರುವುದು ಆನೆಬಲ ತುಂಬಿದಂತಾಗಿದೆ. ಮುಂಬರುವ ಪಂದ್ಯಗಳಲ್ಲಿ ಇಡೀ ತಂಡವನ್ನು ಅವರೇ ತಯಾರು ಮಾಡಲಿದ್ದು, ಗ್ಯಾರಿ ನೇಮಕ ವಿಶ್ವಕಪ್ ಟ್ರೋಫಿ ಗೆಲ್ಲಲು ಸಹಾಯ ಮಾಡಲಿದೆಯಾ? ಎಂಬ ನಿರೀಕ್ಷೆಗಳು ಸದ್ಯ ಹೆಚ್ಚಾಗಿಯೇ ಇದೆ.
ಇನ್ನು ತಮ್ಮ ತಂಡದ ಆಟಗಾರರಿಗೆ ಕೆಲವು ಮಹತ್ವದ ಸಲಹೆ ನೀಡಿದ ನಾಕ್ವಿ, "ನೀವು ಮತ್ತಿತ್ತರ ವಿಷಯಗಳಿಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ಕೇವಲ ಆಟದ ಬಗ್ಗೆ ಮಾತ್ರ ಇರಲಿ ನಿಮ್ಮ ಗಮನ. ಈ ಬಾರಿ ಇಡೀ ದೇಶಕ್ಕೆ ನಮ್ಮ ಮೇಲೆ ಭಾರೀ ನಿರೀಕ್ಷೆಗಳು ಇವೆ" ಎಂದು ಹೇಳಿದ್ದಾರೆ,(ಏಜೆನ್ಸೀಸ್).