ಕ್ರೀಡೆ

ಅವರು ಅಧ್ಯಕ್ಷರಾದರೆ ನಮಗೇನು; ಐಸಿಸಿಗೆ ಜಯ್​ ಷಾ ಆಯ್ಕೆ ಕುರಿತು ಶಾಕಿಂಗ್​ ಹೇಳಿಕೆ ಕೊಟ್ಟ ಪಿಸಿಬಿ ಮುಖ್ಯಸ್ಥ

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿಯ ನೂತನ ಅಧ್ಯಕ್ಷರಾಗಿ ಜಯ್​ ಷಾ ಅವಿರೋಧವಾಗಿ ಆಯ್ಕೆಯಾಗಿದ್ದು, ಪಾಕಿಸ್ತಾನ ಸೇರಿದಂತೆ ಎಲ್ಲಾ ದೇಶಗಳ ಕ್ರಿಕೆಟ್​ ಮಂಡಳಿಗಳು ಜಯ್​ ಷಾ ಆಯ್ಕೆಯನ್ನು ಬೆಂಬಲಿಸಿದ್ದು, ಡಿಸೆಂಬರ್​ 01ರಂದು ಅಧ್ಯಕ್ಷರಾಗಿ ಪದಗ್ರಹಣ ಮಾಡಲಿದ್ದಾರೆ. ಜಯ್​ ಷಾ ಅವರ ಆಯ್ಕೆ ಬೆನ್ನಲ್ಲೇ ಪಾಕಿಸ್ತಾನದ ಮಾಜಿ ಕ್ರಿಕೆಟಿಗರು ಅಲ್ಲಿನ ಕ್ರಿಕೆಟ್​ ಮಂಡಳಿ ಸದಸ್ಯರು ಹೇಳಿಕೆಗಳನ್ನು ಕೊಡುತ್ತಿದ್ದು, ಇದೀಗ ಪಿಸಿಬಿ ಅಧ್ಯಕ್ಷ ಮೊಹ್ನಿನ್​ ನಖ್ವಿ ಕೂಡ ಮಾತನಾಡಿದ್ದಾರೆ.

ಏಕೆಂದರೆ ಮುಂದಿನ ವರ್ಷ ಫೆಬ್ರವರಿ-ಮಾರ್ಚ್​ ತಿಂಗಳಲ್ಲಿ ಹಾಲಿ ಚಾಂಪಿಯನ್ಸ್​ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯುತ್ತಿದ್ದು, ಭದ್ರತೆಯ ಕಾರಣದಿಂದಾಗಿ ಭಾರತ ಪಾಕ್​ಗೆ ಕಾಲಿಡುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದೆ. ಆದರೆ, ಭಾರತ ಪಾಕಿಸ್ತಾನಕ್ಕೆ ಆಡಲು ಬರುತ್ತದೆ ಎಂಬ ನಂಬಿಕೆಯಿಂದ ಐಸಿಸಿ ಅಧ್ಯಕ್ಷ ಹುದ್ದೆಗೆ ಜಯ್​ ಷಾ ಆಯ್ಕೆಯನ್ನು ಪಿಸಿಬಿ ಬೆಂಬಲ ಸೂಚಿಸಿದ್ದು, ಈ ಒಂದು ಕಾರಣಕ್ಕಾಗಿಯೇ ಎಂದು ಹೇಳಲಾಗಿದೆ.

ಈ ಕುರಿತು ಮಾತನಾಡಿರುವ ಪಿಸಿಬಿ ಅಧ್ಯಕ್ಷ ಮೊಹ್ಸಿನ್​ ನಖ್ವಿ, ನಾವು ಜಯ್​ ಷಾ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಅವರು ಅಧ್ಯಕ್ಷರಾಗಿರುವ ಬಗ್ಗೆ ನಮಗೇನು ಕಾಳಜಿ ಇಲ್ಲ. ಸೆಪ್ಟೆಂಬರ್​ 8 ಮತ್ತು 9ರಂದು ನಡೆಯಲಿದ್ದು, ನನ್ನ ಬದಲಾಗಿ ಪಿಸಿಬಿ ವತಿಯಿಂದ ಬೇರೊಬ್ಬರು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಸಭೆಯಲ್ಲಿ ನೂತನ ಅಧ್ಯಕ್ಷರಿಗೆ ಸಂಬಂಧಿಸಿದ ವಿಷಯಗಳನ್ನು ಅಂತಿಮಗೊಳಿಸಲಾಗುವುದು ಎಂದು ನಖ್ವಿ ಹೇಳಿದ್ದಾರೆ.

ಆರ್ಥಿಕ ಸಂಕಷ್ಟದ ಭಯ

ಭಾರತ ತಂಡ ಚಾಂಪಿಯನ್ಸ್ ಟ್ರೋಫಿ ಆಡಲು ಪಾಕಿಸ್ತಾನಕ್ಕೆ ತೆರಳದಿದ್ದರೆ ಆ ದೇಶದ ಕ್ರಿಕೆಟ್ ಮಂಡಳಿಗೆ ಭಾರಿ ನಷ್ಟವಾಗುವ ಸಾಧ್ಯತೆ ಇದೆ. ಈಗಾಗಲೇ ಪಾಕಿಸ್ತಾನ ನಷ್ಟದ ಹಾದಿಯಲ್ಲಿದ್ದು, ಕ್ರಿಕೆಟ್​ನಲ್ಲಿ ಟೀಮ್​ ಇಂಡಿಯಾಗೆ ಇರುವ ಕ್ರೇಜ್​ ಬೇರೆ ಯಾವ ದೇಶಕ್ಕೂ ಇಲ್ಲ. ಹೀಗಾಗಿ ಟೀಮ್​ ಇಂಡಿಯಾ ಪಾಕಿಸ್ತಾನಕ್ಕೆ ಹೋದಲ್ಲಿ ಅದರಿಂದ ಆರ್ಥಿಕವಾಗಿಯೂ ಲಾಭವಾಗಲಿದೆ ಮತ್ತು ಪಾಕ್​ ಮೇಲೆ ಇರುವ ಕಳಂಕವೂ ದೂರವಾಗಲಿದೆ ಎಂಬ ನಂಬಿಕೆಯಲ್ಲಿ ಅಲ್ಲಿನ ಕ್ರಿಕೆಟ್​ ಮಂಡಳಿ ಕಾದು ಕುಳಿತಿದೆ. ಅಲ್ಲದೇ, ಉಭಯ ದೇಶಗಳ ನಡುವಿನ ಸಂಬಂಧವೂ ಕೂಡ ಕ್ರಿಕೆಟ್​ ಮೂಲಕ ಮತ್ತೆ ಚಿಗುರಲಿದೆ ಎಂಬ ನಿರೀಕ್ಷೆಯಲ್ಲಿದೆ. ಆದರೆ, ಪಿಸಿಬಿ ನಿರೀಕ್ಷೆಗೆ ಬಿಸಿಸಿಐ ಆಘಾತ ನೀಡಿದ್ದು, ಬಹುತೇಕ ಟೀಮ್​ ಇಂಡಿಯಾ ಪಾಕಿಸ್ತಾನ ತೆರಳುವುದು ಅನುಮಾನವಾಗಿದೆ.

ಇದಲ್ಲದೆ ಭದ್ರತೆಯ ಕಾರಣದಿಂದಾಗಿ ಭಾರತದ ಪಂದ್ಯಗಳನ್ನು ಲಾಹೋರ್​ನ ಗಡಾಫಿ ಕ್ರೀಡಾಂಗಣದಲ್ಲಿ ನಡೆಸುವುದಾಗಿ ತಿಳಿಸಿದ್ದು, ಇದಕ್ಕಾಗಿ ಕ್ರೀಡಾಂಗಣದ ಪಕ್ಕದಲ್ಲಿರುವ ಐದು ಎಕರೆ ಜಮೀನನ್ನು ಸ್ವಾದೀನಪಡಿಸಿಕೊಳ್ಳಲಾಗಿದ್ದು, ಭಾರತದ ಆಟಗಾರರು ಹಾಗೂ ಸಿಬ್ಬಂದಿ ಉಳಿದುಕೊಳ್ಳಲು 5 ಸ್ಟಾರ್​ ಹೋಟೆಲ್​ ನಿರ್ಮಿಸುತಿವುದಾಗಿ ಪಿಸಿಬಿ ತಿಳಿಸಿದೆ. ಇದಲ್ಲದೆ ಭಾರತ ತಂಡ ಪಾಕಿಸ್ತಾನಕ್ಕೆ ಬರುವುದರಿಂದ ಉಭಯ ದೇಶಗಳ ನಡುವಿನ ಸಂಬಂಧ ಸ್ವಲ್ಪಮಟ್ಟಿಗೆ ಸರಿಹೋಗಬಹುದು ಎಂದು ಪಿಸಿಬಿ ಆಶಿಸಿದೆ. ಆದರೆ, ಮುಂದಿನ ದಿನಗಳಲ್ಲಿ ಭಾರತ ಸರ್ಕಾರ ಇದಕ್ಕೆ ಹೇಗೆ ಪ್ರತಿಕ್ರಿಯಿಸಲಿದೆ ಎಂದು ಕಾದು ನೋಡಬೇಕಿದೆ.