ಕ್ರೀಡೆ

ಪಾಕಿಸ್ತಾನದ ಯುವ ಕ್ರಿಕೆಟಿಗನಿಗೆ ರೋಹಿತ್ ಶರ್ಮ ಅವರಂತೆ ಆಗಬೇಕಂತೆ!

ಕರಾಚಿ: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಮತ್ತು ಫಿಟ್ನೆಸ್ ವಿಶ್ವದೆಲ್ಲೆಡೆಯ ಸಾಕಷ್ಟು ಯುವ ಕ್ರಿಕೆಟಿಗರು ಆರ್ದಶವೆನಿಸಿದೆ. ಆದರೆ ಪಾಕಿಸ್ತಾನದ ಯುವ ಬ್ಯಾಟ್ಸ್‌ಮನ್ ಹೈದರ್ ಅಲಿಗೆ ರೋಹಿತ್ ಶರ್ಮ ಅವರೇ ಸ್ಫೂರ್ತಿಯಂತೆ. ರೋಹಿತ್ ಶರ್ಮ ಅವರಂತೆ ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕದಂಥ ದೊಡ್ಡ ಇನಿಂಗ್ಸ್‌ಗಳನ್ನು ಆಡುವ ಹಂಬಲ ವ್ಯಕ್ತಪಡಿಸಿದ್ದಾರೆ.

ಈ ವರ್ಷ 19 ವಯೋಮಿತಿ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡದ ಪರ ಆಡಿದ್ದ ಹೈದರ್ ಅಲಿ, ಮುಂಬರುವ ಇಂಗ್ಲೆಂಡ್ ಪ್ರವಾಸಕ್ಕೆ ರಾಷ್ಟ್ರೀಯ ತಂಡಕ್ಕೂ ಆಯ್ಕೆಯಾಗಿದ್ದಾರೆ. ‘ನನಗೆ ರೋಹಿತ್ ಶರ್ಮ ಅವರೇ ರೋಲ್ ಮಾಡೆಲ್. ಆಟಗಾರನಾಗಿ ಅವರನ್ನು ನಾನು ಸಾಕಷ್ಟು ಇಷ್ಟಪಡುತ್ತೇನೆ. ಅವರಂತೆ ಅಗ್ರ ಕ್ರಮಾಂಕದಲ್ಲಿ ತಂಡಕ್ಕೆ ಬಿರುಸಿನ ಆರಂಭ ಒದಗಿಸಲು ಬಯಸಿದ್ದೇನೆ. ರೋಹಿತ್ ಎಲ್ಲ 3 ಪ್ರಕಾರದಲ್ಲೂ ಮಿಂಚುವ ಆಟಗಾರ. ಎಲ್ಲ ಪ್ರಕಾರಕ್ಕೂ ಅವರು ಹೊಂದಿಕೊಂಡಿದ್ದಾರೆ’ ಎಂದು 19 ವರ್ಷದ ಹೈದರ್ ಅಲಿ ಹೇಳಿದ್ದಾರೆ.

‘ರೋಹಿತ್ ಶರ್ಮ ಅರ್ಧಶತಕದ ಗಡಿ ದಾಟಿದ ಬಳಿಕ ಅತ್ಯುತ್ತಮವಾಗಿ ಆಡಲಾರಂಭಿಸುತ್ತಾರೆ. 100 ರನ್ ದಾಟಿದ ಬಳಿಕ 150ರ ಆಲೋಚನೆಯಲ್ಲಿರುತ್ತಾರೆ. ಬಳಿಕ 200ರತ್ತ ಮುನ್ನಡೆಯುತ್ತಾರೆ. ನಾನೂ ಅದೇ ರೀತಿಯ ದೊಡ್ಡ ಇನಿಂಗ್ಸ್‌ಗಳನ್ನು ಆಡಬೇಕು’ ಎಂದು ಹೈದರ್ ಅಲಿ ವಿವರಿಸಿದ್ದಾರೆ. ಇದುವರೆಗೆ 7 ಪ್ರಥಮ ದರ್ಜೆ ಪಂದ್ಯ ಆಡಿರುವ ಅವರು 1 ಶತಕ ಸಿಡಿಸಿದ್ದಾರೆ.