ಕ್ರೀಡೆ

ವಿರಾಟ್​ ಶತಕ ಸಿಡಿಸದೆ ನಿರಾಸೆ ಮೂಡಿಸಿದ್ದಾರೆ; ವೈರಲ್​ ಆಗುತ್ತಿದೆ ಪಾಕ್​ ಮಹಿಳಾ ಅಭಿಮಾನಿಯ ಹೇಳಿಕೆ

ಕ್ಯಾಂಡಿ: ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಕ್ರಿಕೆಟ್​ ಪಂದ್ಯವನ್ನು ವೀಕ್ಷಿಸಲು ಕ್ರೀಡಾಭಿಮಾನಿಗಳು ತುದಿಗಾಲಲ್ಲಿ ನಿಂತಿರುತ್ತಾರೆ. ಉಭಯ ತಂಡಗಳು ನೆರೆಹೊರೆಯ ದೇಶಗಳಾಗಿದ್ದರು ಬದ್ದ ವೈರಿಗಳಂತೆ ಬಿಂಬಿತವಾಗಿವೆ.

ಭಾರತ ಹಾಗೂ ಪಾಕಿಸ್ತಾನ ತಂಡಗಳು ಮೈದಾನದಲ್ಲಿ ಮುಖಾಮುಖಿಯಾಗುತ್ತಾವೆ ಎಂದರೆ ಆಟಗಾರರಷ್ಟೇ ಅಲ್ಲದೇ ಪ್ರೇಕ್ಷಕರಲ್ಲೂ ಕ್ರೇಜ್​ ದುಪ್ಪಟ್ಟಾಗಿರುತ್ತದೆ. ಹೀಗಿರುವಾಗಲೇ ಪಾಕಿಸ್ತಾನದ ಮಹಿಳೆಯೊಬ್ಬರು ವಿರಾಟ್​ ಕೊಹ್ಲಿ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇದರ ವಿಡಿಯೋ ವೈರಲ್​ ಆಗಿದೆ.

ವೈರಲ್​ ಆಗಿರುವ ವಿಡಿಯೋದಲ್ಲಿ ಮಾತನಾಡಿರುವ ಪಾಕಿಸ್ತಾನದ ಮಹಿಳೆ ವಿರಾಟ್​ ಕೊಹ್ಲಿಯನ್ನು ನೋಡಲು ನಾನು ಇಲ್ಲಿಗೆ ಬಂದಿದ್ದೇನೆ. ಅವರು ಶತಕ ಸಿಡಿಸುತ್ತಾರೆ ಎಂಬ ಆಸೆಯೊಂದಿಗೆ ನಾನು ಪಂದ್ಯವನ್ನು ವೀಕ್ಷಿಸಲು ಲಂಕಾಗೆ ಬಂದೆ. ಆದರೆ, ಅವರು ಬೇಗನೆ ವಿಕೆಟ್​ ಒಪ್ಪಿಸುವ ಮೂಲಕ ತುಂಬಾ ನಿರಾಸೆ ಮೂಡಿಸಿದ್ದಾರೆ. ಕೊಹ್ಲಿ ನನ್ನ ನೆಚ್ಚಿನ ಆಟಗಾರ ಎಂದು ಮಹಿಳೆ ಹೇಳಿದ್ದಾರೆ.

ನಾನು ಪಾಕಿಸ್ತಾನ ಹಾಗೂ ಭಾರತವನ್ನೂ ಬೆಂಬಲಿಸುತ್ತೇನೆ. ನೆರೆಹೊರೆಯವರನ್ನು ಪ್ರೀತಿಸುವುದರಲ್ಲಿ ತಪ್ಪೇನು ಇಲ್ಲ ಎಂದಿದ್ದಾರೆ. ಒಂದು ವೇಳೆ ವಿರಾಟ್ ಕೊಹ್ಲಿ ಹಾಗೂ ಬಾಬರ್ ಅಜಂ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಿ ಎಂದರೆ ಯಾರನ್ನು ಆಯ್ಕೆ ಮಾಡುತ್ತೀರಿ ಎನ್ನುವ ಪ್ರಶ್ನೆಗೆ ಪಾಕಿಸ್ತಾನದ ಮಹಿಳಾ ಅಭಿಮಾನಿ ವಿರಾಟ್ ಕೊಹ್ಲಿ ಎಂದು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಪಾಕ್​ ಮಹಿಳಾ ಅಭಿಮಾನಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಕ್ರಿಕೆಟ್​ ಪ್ರೇಮಿಗಳ ಮನ ಗೆಲ್ಲುತ್ತಿದೆ. ಈ ರೀತಿಯ ಹೇಳಿಕೆ ನೀಡುವ ಮೂಲಕ ನೀವು ಭಾರತೀಯರ ಹೃದಯ ಗೆದ್ದಿದ್ದೀರಾ ಎಂದು ಹಲವರು ಕಮೆಂಟ್​ ಮಾಡಿದ್ದಾರೆ.

ಶ್ರೀಲಂಕಾದ ಪಲೀಕೆಲೆಯಲ್ಲಿ ನಡೆದ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಮಳೆಯಿಂದಾಗಿ ಅರ್ಧಕ್ಕೆ ರದ್ದಾಯಿತು. ಉಭಯ ತಂಡಗಳಿಗೆ ತಲಾ ಒಂದು ಅಂಕವನ್ನು ನೀಡಲಾಗಿದೆ. 3 ಅಂಕ ಗಳಿಸುವ ಮೂಲಕ ಪಾಕಿಸ್ತಾನ ಸೂಪರ್​-4 ಸ್ಟೇಜ್​ ಪ್ರವೇಶಿಸಿದೆ.