ನವದೆಹಲಿ: ಏಕದಿನ ವಿಶ್ವಕಪ್ ಪಂದ್ಯಗಳಲ್ಲಿ ಸೋಲು ಕಂಡು ಹೊರಬಿದ್ದಿರುವ ಪಾಕಿಸ್ತಾನ ತಂಡದಲ್ಲಿ ಭಾರಿ ಬದಲಾವಣೆಗಳು ಆಗಲಿವೆ ಸಾಧ್ಯತೆಗಳಿವೆ ಎನ್ನಲಾಗಿದೆ. ಅದರಲ್ಲೂ ತಂಡದ ವಿದೇಶಿ ಕೋಚ್ಗಳಿಗೆ ಕುತ್ತುಂಟಾಗಲಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಪಾಕಿಸ್ತಾನ ಕ್ರಿಕೆಟ್ ತಂಡದ ಹೆಡ್ ಕೋಚ್ ಗ್ರ್ಯಾಂಟ್ ಬ್ರ್ಯಾಡ್ಬರ್ನ್, ಟೀಮ್ ಡೈರೆಕ್ಟರ್ ಮಿಕ್ಕಿ ಆರ್ಥರ್ ಮತ್ತು ಬ್ಯಾಟಿಂಗ್ ಕೋಚ್ ಆ್ಯಂಡ್ರ್ಯೂ ಪುಟಿಕ್ ಅವರನ್ನು ಆ ಸ್ಥಾನಗಳಿಂದ ಮುಕ್ತಗೊಳಿಸುವ ಸಾಧ್ಯತೆ ಇದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
ಇಷ್ಟು ಮಾತ್ರವಲ್ಲದೆ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ ನಾಯಕತ್ವ ಕೂಡ ಡೋಲಾಯಮಾನ ಸ್ಥಿತಿಯಲ್ಲಿದೆ ಎಂದೂ ಹೇಳಲಾಗುತ್ತಿದೆ. ಇವೆಲ್ಲವೂ ವಿಶ್ವಕಪ್ ಪಂದ್ಯಾವಳಿಗಳಲ್ಲಿ ಪಾಕಿಸ್ತಾನ ತಂಡ ತೋರಿದ ಕಳಪೆ ಪ್ರದರ್ಶನದ ಪರಿಣಾಮ ಎಂದು ಹೇಳಲಾಗುತ್ತಿದೆ.
ವಿಶ್ವಕಪ್ ಪಂದ್ಯಾವಳಿಯ 9 ಪಂದ್ಯಗಳ ಪೈಕಿ ಐದು ಪಂದ್ಯಗಳಲ್ಲಿ ಸೋತ ಪಾಕಿಸ್ತಾನ ಸೆಮಿಫೈನಲ್ ಪ್ರವೇಶದಿಂದ ವಂಚಿತಗೊಂಡಿದೆ. ಪಾಕ್ ತಂಡದ ಕಳಪೆ ಪ್ರದರ್ಶನದ ಕುರಿತ ಪರಾಮರ್ಶೆಯ ಸಭೆಯನ್ನು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ನಡೆಸಲಿದೆ ಎನ್ನಲಾಗಿದೆ.