ನವದೆಹಲಿ: 2025ರ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ (Champions Trophy) ಸಂಬಂಧಿಸಿದಂತೆ ಎದ್ದಿರುವ ಊಹಾಪೋಹಗಳಿಗೆ ತೆರೆ ಬಿದ್ದಿದ್ದು, ಹೈಬ್ರಿಡ್ ಮಾದರಿಯಲ್ಲಿ (Hybrid Model) ಟೂರ್ನಿ ನಡೆಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಸೂಚಿಸಿರುವುದಾಗಿ ವರದಿಯಾಗಿದೆ. ಟೂರ್ನಿ ಸಲುವಾಗಿ ಉಭಯ ದೇಶಗಳ ನಡುವೆ ಏರ್ಪಟ್ಟಿದ್ದ ಹಗ್ಗಜಗ್ಗಾಟ್ಟ ಸಂಬಂಧ ಐಸಿಸಿ (ICC) ಏರ್ಪಡಿಸಿದ್ದ ಸಭೆಯಲ್ಲಿ ಪಾಕಿಸ್ತಾನ ಒಪ್ಪಿಗೆ ಸೂಚಿಸಿದ್ದು, ಮೂರು ಷರತ್ತುಗಳನ್ನು ವಿಧಿಸಿದೆ.
ಅದರಂತೆ, ಭಾರತದ ಎಲ್ಲಾ ಪಂದ್ಯಗಳು ದುಬೈನಲ್ಲಿ ನಡೆಯಲಿದ್ದು, ಒಂದು ವೇಳೆ ಭಾರತ ಫೈನಲ್ಗೆ ಲಗ್ಗೆ ಇಟ್ಟರೆ ಆ ಪಂದ್ಯ ಕೂಡ ದುಬೈನಲ್ಲಿ ನಡೆಸಲಾಗುತ್ತದೆ. ಒಂದು ವೇಳೆ ಭಾರತ ಗ್ರೂಪ್ ಸ್ಟೇಜ್ನಲ್ಲೇ ನಿರ್ಗಮಿಸಿದರೆ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯ ಪಾಕಿಸ್ತಾನದಲ್ಲೇ ನಡೆಯಲಿದೆ. ಭಾರತವು ಭವಿಷ್ಯದಲ್ಲಿ ಯಾವುದೇ ಐಸಿಸಿ ಕಾರ್ಯಕ್ರಮಗಳನ್ನು ಆಯೋಜಿಸಿದರೆ, ಪಾಕಿಸ್ತಾನವು ತಟಸ್ಥ ಸ್ಥಳಗಳಲ್ಲಿ ತನ್ನ ಪಂದ್ಯಗಳನ್ನು ಆಡುತ್ತದೆ ಎಂದು ಪಿಸಿಬಿ ಐಸಿಸಿ ನಡೆಸಿದ ಸಭೆಯಲ್ಲಿ ತನ್ನ ಷರತ್ತುಗಳನ್ನು ವಿಧಿಸಿದೆ.
ಇದಲ್ಲದೆ ವಾರ್ಷಿಕ ಆದಾಯದಲ್ಲಿ ತನ್ನ ಪಾಲನ್ನು ಹೆಚ್ಚಿಸುವ ಷರತ್ತನ್ನೂ ಪಿಸಿಬಿ (PCB) ಮುಂದಿಟ್ಟಿದೆ. ಐಸಿಸಿಯ ಪ್ರಸ್ತುತ ಆದಾಯ ಮಾದರಿಯ ಅಡಿಯಲ್ಲಿ, ಬಿಸಿಸಿಐ (BCCI) ಗರಿಷ್ಠ ಹಣವನ್ನು ಅಂದರೆ ಶೇ, 39 ಪ್ರತಿಶತ ಹಣವನ್ನು ಪಡೆಯುತ್ತದೆ. ಆದರೆ ಪಾಕ್ ಕ್ರಿಕೆಟ್ ಮಂಡಳಿ ಕೇವಲ 5.75 ಪ್ರತಿಶತ ಹಣವನ್ನು ಪಡೆಯುತ್ತದೆ. ಇದೀಗ ಇದನ್ನೂ ಹೆಚ್ಚಿಸುವಂತೆ ಪಿಸಿಬಿ ಐಸಿಸಿ ನಡೆಸಿದ ಸಭೆಯಲ್ಲಿ ಆಗ್ರಹಿಸಿದೆ.
ಚಾಂಪಿಯನ್ಸ್ ಟ್ರೋಫಿ (Champions Trophy) ಸಂಬಂಧ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಎಮಿರೇಟ್ಸ್ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ಮುಬಾಶಿರ್ ಉಸ್ಮಾನಿಯನ್ನು ದುಬೈನಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಚಾಂಪಿಯನ್ಸ್ ಟ್ರೋಫಿಯನ್ನು ಆಯೋಜಿಸಲು ಪಾಕಿಸ್ತಾನ ಸಿದ್ಧವಾಗಿದೆ ಮತ್ತು ಹೈಬ್ರಿಡ್ ಮಾದರಿಯಲ್ಲಿ ನಡೆಸುವ ಸಲುವಾಗಿ ವೇಳಾಪಟ್ಟಿ ಸಿದ್ದಪಡಿಸಲಾಗಿದೆ ಎಂದು ಹೇಳಲಾಗಿದೆ.