ಕ್ರೀಡೆ

ಪಾಕಿಸ್ತಾನ ಕ್ರಿಕೆಟ್ ತಂಡದ ಕೋಚ್ ಮಿಸ್ಬಾ ಉಲ್ ಹಕ್‌ಗೆ ಕರೊನಾ ಸೋಂಕು

ಕಿಂಗ್‌ಸ್ಟನ್: ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯ ಬೆನ್ನಲ್ಲೇ ಪಾಕಿಸ್ತಾನ ತಂಡದ ಮುಖ್ಯ ಕೋಚ್ ಮಿಸ್ಬಾ ಉಲ್ ಹಕ್ ಕರೊನಾ ಸೋಂಕಿತರಾಗಿದ್ದಾರೆ. ಇದರಿಂದಾಗಿ ಅವರು ತಂಡದ ಜತೆಗೆ ತವರಿಗೆ ಮರಳದೆ, ಇನ್ನು 10 ದಿನಗಳ ಕಾಲ ಜಮೈಕಾದಲ್ಲೇ ಕ್ವಾರಂಟೈನ್‌ನಲ್ಲಿರಲಿದ್ದಾರೆ. ಲಾಹೋರ್‌ಗೆ ಪ್ರಯಾಣಿಸುವುದಕ್ಕೆ ಮುನ್ನ ನಡೆಸಲಾದ ತಂಡದ ಸದಸ್ಯರ ಕೋವಿಡ್ ಪರೀಕ್ಷೆಯಲ್ಲಿ ಮಿಸ್ಬಾ ಮಾತ್ರ ಪಾಸಿಟಿವ್ ಆಗಿದ್ದಾರೆ.

2ನೇ ಟೆಸ್ಟ್ ಸೋತ ವಿಂಡೀಸ್, ಸರಣಿ ಸಮಬಲ

ಶಹೀನ್ ಷಾ ಅಫ್ರಿದಿ (ಪಂದ್ಯದಲ್ಲಿ 94 ರನ್ನಿಗೆ 10 ವಿಕೆಟ್) ಮಾರಕ ದಾಳಿಗೆ ನಲುಗಿದ ವೆಸ್ಟ್ ಇಂಡೀಸ್ ತಂಡ 2ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಪಾಕಿಸ್ತಾನ ವಿರುದ್ಧ 109 ರನ್‌ಗಳಿಂದ ಸೋಲು ಕಂಡಿದೆ. ಇದರಿಂದ ಸರಣಿ 1-1 ಸಮಬಲದಲ್ಲಿ ಅಂತ್ಯಗೊಂಡಿತು.

329 ರನ್ ಸವಾಲಿಗೆ ಪ್ರತಿಯಾಗಿ ಅಂತಿಮ ದಿನವಾದ ಮಂಗಳವಾರ 1 ವಿಕೆಟ್‌ಗೆ 49 ರನ್‌ನಿಂದ ಚೇಸಿಂಗ್ ಮುಂದುವರಿಸಿದ ವಿಂಡೀಸ್ 219 ರನ್‌ಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತು. ಶಹೀನ್ ಷಾ ಅಫ್ರಿದಿ ಸರಣಿ ಮತ್ತು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಪಾಕಿಸ್ತಾನ: 9 ವಿಕೆಟ್‌ಗೆ 302 ಡಿಕ್ಲೇರ್ ಮತ್ತು 6 ವಿಕೆಟ್‌ಗೆ 176 ಡಿಕ್ಲೇರ್, ವೆಸ್ಟ್ ಇಂಡೀಸ್: 150 ಮತ್ತು 219 (ಬ್ರಾಥ್‌ವೇಟ್ 39, ಮೇಯರ್ಸ್‌ 32, ಹೋಲ್ಡರ್ 47, ಅಫ್ರಿದಿ 43ಕ್ಕೆ 4, ನೌಮಾನ್ ಅಲಿ 52ಕ್ಕೆ 3).