ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ ತಂಡವು ನ್ಯೂಜಿಲೆಂಡ್ ವಿರುದ್ಧ 21 ರನ್‌ಗಳ ಜಯ ಗಳಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡವು ರಚಿನ್ ರವೀಂದ್ರ (108 ರನ್, 94 ಎಸೆತ, 15 ಬೌಂಡರಿ, 1 ಸಿಕ್ಸರ್), ನಾಯಕ ಕೇನ್ ವಿಲಿಯಮ್ಸನ್ (95 ರನ್, 79 ಎಸೆತ, 10 ಬೌಂಡರಿ, 2 ಸಿಕ್ಸರ್) 180 ರನ್‌ಗಳ ಜತೆಯಾಟದ ಫಲವಾಗಿ 50 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 401 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು.
ಬೃಹತ್ ಗುರಿ ಬೆನ್ನತ್ತಿದ್ದ ಪಾಕಿಸ್ತಾನವು ಆರಂಭಿಕ ಫಕರ್ ಜಮಾನ್ (126 ರನ್, 81 ಎಸೆತ, 8 ಬೌಂಡರಿ, 11 ಸಿಕ್ಸರ್), ನಾಯಕ ಬಾಬರ್ ಅಜಂ (66 ರನ್, 63 ಎಸೆತ, 6 ಬೌಂಡರಿ, 2 ಸಿಕ್ಸರ್) 194 ರನ್‌ಗಳ ಜತೆಯಾಟದ ಫಲವಾಗಿ ಡಿಎಲ್‌ಎಸ್ ನಿಯಮದಡಿ 21ರನ್‌ಗಳ ಜಯಗಳಿಸುವ ಮೂಲಕ ಗೆಲುವಿನ ನಗೆ ಬೀರಿದೆ.
ಬೃಹತ್ ಗುರಿ ಬೆನ್ನತ್ತಿದ್ದ ಪಾಕಿಸ್ತಾನ ತಂಡಕ್ಕೆ ಮಳೆರಾಯ ಕೃಪೆ ತೋರಿದ್ದಾನೆ. ಮೊದಲ ಬಾರಿಗೆ ಮಳೆ ಬಂದು ನಿಂತ ಪರಿಣಾಮ ಪಾಕ್‌ಗೆ 41 ಓವರ್‌ಗಳಿಗೆ 342 ರನ್ ಗುರಿ ನೀಡಲಾಯಿತು. ಎರಡನೇ ಸಲ ಮಳೆ ಬಂದು ಪಂದ್ಯ ನಿಂತ ವೇಳೆಗೆ ಪಾಕಿಸ್ತಾನ ತಂಡ, 25.3 ಓವರ್‌ಗಳಿಗೆ ಒಂದು ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿದೆ. ಪಾಕ್ ಗೆಲ್ಲಲು ಇನ್ನೂ 93 ಎಸೆತಗಳಲ್ಲಿ 143 ರನ್ ಗಳಿಸಬೇಕಾಗಿತ್ತು. ಮಳೆ ನಿಲ್ಲದೆ ಪಂದ್ಯ ಸ್ಥಗಿತಗೊಂಡ ಕಾರಣ ಪಾಕಿಸ್ತಾನ ತಂಡ ಡಿಎಲ್‌ಎಸ್ ನಿಯಮದ ಪ್ರಕಾರ ನ್ಯೂಜಿಲೆಂಡ್ ತಂಡಕ್ಕಿಂತ 21 ರನ್‌ಗಳ ಮುಂದಿದ ಕಾರಣ ಗೆಲುವಿನ ನಗೆ ಬೀರಿದೆ ಈ ಮೂಲಕ ಸೆಮೀಸ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.