ಕ್ರೀಡೆ

'ಪಾಕಿಸ್ತಾನಕ್ಕೆ ಜಿಂದಾಬಾದ್ ಹೇಳದೆ ಇನ್ನೇನು ಹೇಳಲಿ?': ಬೆಂಗಳೂರು ಪೊಲೀಸರ ಜತೆ ಪಾಕ್​ ಯುವಕನ ವಾಗ್ವಾದ

ಬೆಂಗಳೂರು: ಪಾಕಿಸ್ತಾನ್ ಜಿಂದಾಬಾದ್ ಎಂದು ಹೇಳಬೇಕು ಎಂದು ಪಾಕಿಸ್ತಾನಿ ಯುವಕನೊಬ್ಬ ಬೆಂಗಳೂರು ಪೊಲೀಸರ ಜತೆ ವಾಗ್ವಾದ ನಡೆಸಿದ ಪ್ರಕರಣವೊಂದು ನಡೆದಿದೆ. ವಿಶ್ವಕಪ್ ಏಕದಿನ ಕ್ರಿಕೆಟ್ ಪಂದ್ಯ ನಡೆಯುತ್ತಿರುವ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಪ್ರಕರಣ ನಡೆದಿದೆ.

ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ತಂಡಗಳ ಮಧ್ಯೆ ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿಶ್ವಕಪ್ ಕ್ರಿಕೆಟ್ ಪಂದ್ಯದ ಸಂದರ್ಭದಲ್ಲಿ ಪಾಕಿಸ್ತಾನಿ ಯುವಕನೊಬ್ಬ ಪಾಕಿಸ್ತಾನ್ ಜಿಂದಾಬಾದ್ ಎಂದಿದ್ದಾನೆ. ಆಗ ಪೊಲೀಸರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಆ ಯುವಕ ಕೂಡ ಆಕ್ಷೇಪ ವ್ಯಕ್ತಪಡಿಸಿದ್ದು, ಪಾಕಿಸ್ತಾನಕ್ಕೆ ಜಿಂದಾಬಾದ್ ಹೇಳಲೇಬೇಕು ಎಂದು ವಾಗ್ವಾದ ನಡೆಸಿದ್ದಾನೆ. ನಾನು ಪಾಕಿಸ್ತಾನದಿಂದ ಬಂದಿದ್ದು, ಪಾಕಿಸ್ತಾನಕ್ಕೆ ಜಿಂದಾಬಾದ್ ಹೇಳದೆ ಇನ್ನೇನು ಹೇಳಲಿ? ಎಂದೂ ಆತ ಪ್ರಶ್ನೆ ಮಾಡಿದ್ದು, ಸಾರ್ವಜನಿಕರೊಬ್ಬರ ವಿಡಿಯೋದಲ್ಲಿ ಅದು ಸೆರೆಯಾಗಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.