ಕ್ರೀಡೆ

ಬ್ಯಾಟ್ ಬೀಸಿ ನೆಲದ ಮೇಲೆ ಬೋರಲು ಬಿದ್ದ ಎಂಎಲ್​ಎ!

Webdesk - Narayanaswamy

ಭುವನೇಶ್ವರ: ಶಾಸಕರೊಬ್ಬರು ಕ್ರಿಕೆಟ್ ಪಂದ್ಯಕ್ಕೆ ಚಾಲನೆ ನೀಡಿದ್ದು, ಅವರು ತಮ್ಮಲ್ಲಿನ ಕ್ರೀಡಾಪಟುವನ್ನು ಎಲ್ಲರಿಗೂ ತೋರಿಸಲು ಬಯಸಿ ಫೀಲ್ಡ್​ನಲ್ಲಿ ಬ್ಯಾಟ್​ ಬೀಸಿದರು. ಅವರ ಬ್ಯಾಟಿಂಗ್‌ ಪ್ರತಾಪ ಹೇಗಿತ್ತೆಂದರೆ ಆಯತಪ್ಪಿ ನೆಲದ ಮೇಲೆ ಬೋರಲು ಬಿದ್ದರು. ಬಳಿಕ ಗಾಯಗೊಂಡ ಅವರು ಆಸ್ಪತ್ರೆ ಪಾಲಾದರು.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಒಡಿಶಾದ ಕಲಹಂಡಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ನಾರ್ಲಾ ಕ್ಷೇತ್ರದ ಶಾಸಕ ಭೂಪೇಂದ್ರ ಸಿಂಗ್ ಇತ್ತೀಚೆಗೆ ಕಲಹಂಡಿಯಲ್ಲಿ ಕ್ರಿಕೆಟ್ ಪಂದ್ಯವನ್ನು ಉದ್ಘಾಟಿಸಿದರು. ಯುವಕರ ಪ್ರತಿಭೆ, ಕ್ರಿಕೆಟ್ ಪಿಚ್ ನೋಡಿ ಬ್ಯಾಟ್ ಹಿಡಿಯದೇ ಇರಲಾಗಲಿಲ್ಲ.

ಯುವಕನೊಬ್ಬ ಚೆಂಡನ್ನು ಎಸೆದಾಗ ಶಾಸಕ ಭೂಪೇಂದ್ರ ಸಿಂಗ್ ಬ್ಯಾಟ್‌ನಿಂದ ದೊಡ್ಡ ಹೊಡೆತವನ್ನು ಹೊಡೆಯಲು ಪ್ರಯತ್ನಿಸಿದರು. ಆದರೆ ಚೆಂಡು ಬ್ಯಾಟ್​ಗೆ ತಾಗಲಿಲ್ಲ. ಶಾಸಕ ಭೂಪೇಂದ್ರ ಸಿಂಗ್ ನಿಯಂತ್ರಣ ತಪ್ಪಿ ನೆಲದ ಮೇಲೆ ಬಿದ್ದುಬಿಟ್ಟರು. ಇದರಿಂದ ತಲೆ, ಮುಖ, ಕೈಗಳಿಗೆ ಗಾಯಗಳಾದವು. ಈ ಹಿನ್ನೆಲೆಯಲ್ಲಿ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು.

ಏತನ್ಮಧ್ಯೆ, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋಗೆ ನೆಟಿಜನ್‌ಗಳು ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ. ರಾಜಕಾರಣಿಗಳು ರಾಜಕೀಯಕ್ಕೆ ಸೀಮಿತವಾದರೆ ಒಳ್ಳೆಯದು ಎಂದು ಕೆಲವರು ಸಲಹೆ ನೀಡಿದ್ದಾರೆ. ಇನ್ನು ಕೆಲವರು ಕ್ರೀಡೆಯಲ್ಲೂ ರಾಜಕೀಯ ಮಾಡಬೇಕೆಂದರೆ ಅಂತಹ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.