ಕ್ರೀಡೆ

ಬೌಲರ್​​​ ಚೆಂಡೆಸೆದ ಕೂಡಲೇ ಸ್ಟೇಡಿಯಂನಲ್ಲಿ ಲೈಟ್ಸ್​ ಆಫ್​! ಆ ಕತ್ತಲೆಯಲ್ಲಿ ಪಾಕ್​ ಬ್ಯಾಟರ್​ಗೆ ಏನಾಯ್ತು? ವಿಡಿಯೋ ವೈರಲ್​... NZ vs PAK

NZ vs PAK : ನ್ಯೂಜಿಲೆಂಡ್​ನ ಮೌಂಟ್​​ ಮೌಂಗನುಯಿಯಲ್ಲಿ ಪಾಕಿಸ್ತಾನ ವಿರುದ್ಧದ ಮೂರನೇ ಏಕದಿನ ಪಂದ್ಯವನ್ನು ಕಿವೀಸ್​ ಪಡೆ 43 ರನ್‌ಗಳಿಂದ ಗೆಲ್ಲುವ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು 3-0 ಅಂತರದಿಂದ ಗೆದ್ದುಕೊಂಡಿತು. ಆದಾಗ್ಯೂ, ಅಂತಿಮ ಪಂದ್ಯದಲ್ಲಿ ಅನಿರೀಕ್ಷಿತ ಘಟನೆಯೊಂದು ಸಂಭವಿಸಿತು. ಪಾಕಿಸ್ತಾನದ ಇನ್ನಿಂಗ್ಸ್‌ನ 39ನೇ ಓವರ್‌ನಲ್ಲಿ ಜಾಕೋಬ್ ಡಫಿ ಬೌಲಿಂಗ್ ಮಾಡುತ್ತಿದ್ದಾಗ ಫ್ಲಡ್‌ಲೈಟ್‌ಗಳು ಇದ್ದಕ್ಕಿದ್ದಂತೆ ಆಫ್​ ಆದವು.

ಜಾಕೋಬ್ ಡಫಿ ಬೌಲಿಂಗ್​ ಮಾಡಲು ಓಡಿ ಬರುವಾಗ ಈ ಘಟನೆ ನಡೆಯಿತು. ಇದ್ದಕ್ಕಿದ್ದಂತೆ ಫ್ಲಡ್​ಲೈಟ್​ಗಳು ಆಫ್​ ಆಗಿ ಇಡೀ ಮೈದಾನ ಕತ್ತಲೆಯಾಯಿತು. ಅಷ್ಟರಲ್ಲಾಗಲೇ ಡಫಿ ಚೆಂಡನ್ನು ಎಸೆದುಬಿಟ್ಟಿದ್ದರು. ಆದರೆ, ಸ್ಟ್ರೈಕ್‌ನಲ್ಲಿದ್ದ ತಯ್ಯಬ್ ತಾಹಿರ್ ತಕ್ಷಣವೇ ಬದಿಗೆ ಸರಿದಿದ್ದರು.

ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ. ತಾಹಿರ್ ಕ್ರೀಸ್​ ಬಳಿ ನಿಂತಿದ್ದರೆ, ಚೆಂಡು ಅವರಿಗೆ ತಗುಲುತ್ತಿತ್ತು. ಇದರಿಂದ ಗಾಯವಾಗುವ ಸಾಧ್ಯತೆ ಇತ್ತು. ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅಂದಹಾಗೆ ಮಳೆಯಿಂದಾಗಿ ಈ ಪಂದ್ಯವನ್ನು 42 ಓವರ್‌ಗಳಿಗೆ ಸೀಮಿತಗೊಳಿಸಲಾಯಿತು.

ಪಂದ್ಯದ ವಿಚಾರಕ್ಕೆ ಬರುವುದಾದರೆ, ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ನಿಗದಿತ ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 264 ರನ್ ಗಳಿಸಿತು. ಕಿವೀಸ್ ಬ್ಯಾಟ್ಸ್‌ಮನ್‌ಗಳಲ್ಲಿ ರೈಸ್ ಮಾರಿಯೋ (58) ಮತ್ತು ಬ್ರೇಸ್‌ವೆಲ್ (59) ಅರ್ಧಶತಕಗಳೊಂದಿಗೆ ಮಿಂಚಿದರು. ಮಿಚೆಲ್ (49) ರನ್‌ಗಳೊಂದಿಗೆ ಮಿಂಚಿದರು. ನಂತರ, ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ 40 ಓವರ್‌ಗಳಲ್ಲಿ 221 ರನ್‌ಗಳಿಗೆ ಆಲೌಟ್ ಆಯಿತು. (ಏಜೆನ್ಸೀಸ್​)