ಪಲ್ಲೆಕೆಲೆ: ಇಲ್ಲಿನ ಪಲ್ಲೆಕೆಲೆ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ಹಾಗೂ ಶ್ರೀಲಂಕ ಆನಡುವಿನ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ 43 ರನ್ಗಳ ಭರ್ಜರಿ ಜಯ ಕಂಡಿದ್ದು, ಈ ಮೂಲಕ ನೂತನ ಕೋಚ್ ಗೌತಮ್ ಗಂಭೀರ್, ಚುಟುಕು ಮಾದರಿಗೆ ಪೂರ್ಣಪ್ರಮಾಣದ ನಾಯಕನಾಗಿ ಅಧಿಕಾರ ವಹಿಸಿಕೊಂಡ ಸೂರ್ಯಕುಮಾರ್ ಯಾದವ್ಗೆ ಗೆಲುವಿನ ಆರಂಭ ಸಿಕ್ಕಿದ್ದು, ವಿನ್ನಿಂಗ್ ಸ್ಟ್ರೀಕ್ ಮುಂದುವರೆಸಲು ಈ ಜೋಡಿ ಸಜ್ಜಾಗಿದೆ.
ಪಂದ್ಯದಲ್ಲಿ ಮೊದಲು ಟಾಸ್ ಗೆದ್ದ ಆತಿಥೇಯರು ಪ್ರವಾಸಿ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿದರು. ಅದರಂತೆ ಬ್ಯಾಟಿಂಗ್ ಮಾಡಿದ ಭಾರತ ತಂಡವು ನಾಯಕ ಸೂರ್ಯಕುಮಾರ್ ಯಾದವ್ (58 ರನ್, 26 ಎಸೆತ, 8 ಬೌಂಡರಿ, 2 ಸಿಕ್ಸರ್), ರಿಷಭ್ ಪಂತ್ (49 ರನ್, 33 ಎಸೆತ. 6 ಬೌಂಡರಿ, 1 ಸಿಕ್ಸರ್), ಯಶಸ್ವಿ ಜೈಸ್ವಾಲ್ (40 ರನ್, 21 ಎಸೆತ, 5 ಬೌಂಡರಿ, 2 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಫಲವಾಗಿ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 213 ರನ್ ಕಲೆಹಾಕಿತು.
ಬೃಹತ್ ಗುರಿ ಬೆನ್ನತ್ಇದ್ದ ಶ್ರೀಲಂಕಾಕ್ಕೆ ಆರಂಭಿಕರಾದ ಪತುಮ್ ನಿಸ್ಸಂಕ (79 ರನ್, 48 ಎಸೆತ, 7 ಬೌಂಡರಿ, 4 ಸಿಕ್ಸರ್), ಕುಸಾಲ್ ಮೆಂಡಿಸ್ (45 ರನ್, 27 ಎಸೆತ, 7 ಬೌಂಡರಿ, 1 ಸಿಕ್ಸರ್) ಕೆಲಕಾಲ ತಂಡಕ್ಕೆ ಆಸರೆಯಾದ ಈ ಜೋಡಿಯನ್ನು ಅಕ್ಷರ್ ಪಟೇಲ್ ಬೇರ್ಪಡಿಸಿದರು. ಇದಾದ ನಂತರ ಭಾರತೀಯ ಬೌಲರ್ಗಳ ಬಿಗಿ ದಾಳಿಗೆ ತತ್ತರಿಸಿದ ಲಂಕಾ ಬ್ಯಾಟ್ಸ್ಮನ್ಗಳು ಅಂತಿಮವಾಗಿ ಯಾವುದೇ ಪ್ರತಿರೋಧ ತೋರದೆ ಆಲೌಟ್ ಆಗುವ ಮೂಲಕ 43 ರನ್ಗಳ ಸೋಲೊಪ್ಪಿಕೊಂಡರು.
ಇನ್ನೂ ಪಂದ್ಯದ ಬಳಿಕ ಈ ಕುರಿತು ಮಾತನಾಡಿದ ಸುರ್ಯಕುಮಾರ್ ಯಾದವ್, ಉತ್ತಮ ಆರಂಭದ ಹೊರತಾಗಿಯೂ ಪಂದ್ಯವನ್ನು ನಾವು ಗೆಲ್ಲುತ್ತೇವೆ ಎಂಬ ವಿಶ್ವಾಸ ನನಗಿತ್ತು. ಇಬ್ಬನಿ ಬೀಳದೆ ಇರುವುದು ನಮಗೆ ಹೆಚ್ಚು ಸಹಕಾರಿಯಾಯ್ತು. ವಿಶ್ವಕಪ್ನಲ್ಲಿ ನಾವು ಆಡಿದ ರೀತಿ ನೋಡಿ ಆಟವೂ ಇನ್ನೂ ತುಂಬಾ ದೂರದಲ್ಲಿದೆ ಎಂದು ನಮಗೆ ನೆನೆಪಿಸಿತು.
ಮೊದಲ ಎಸೆತದಿಂದಲೂ ಅವರು ಆಡಿದ ರೀತಿ ನನಗೆ ತುಂಬಾ ಇಷ್ಟವಾಯಿತು. ಪವರ್ಪ್ಲೇನಲ್ಲಿ ನಿರೀಕ್ಷಿಸಿದ ರೀತಿ ಆಡಲು ಸಾಧ್ಯವಾಗಲಿಲ್ಲ. ಆದರೆ, ನಮ್ಮ ಬೌಲರ್ಗಳು ಆ ಬಳಿಕ ಕಮ್ಬ್ಯಾಕ್ ಮಾಡಿದ ರೀತಿ ನಿಜಕ್ಕೂ ಪ್ರಶಂಸನೀಯ. ತಪ್ಪುಗಳನ್ನು ಸರಿಪಡಿಸಿಕೊಂಡು ಮುಂದಿನ ಪಂದ್ಯದಲ್ಲಿ ಕಣಕ್ಕಿಳಿಯುತ್ತೇವೆ ಎಂದು ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.