ಬೆಂಗಳೂರು: ಎಂಎಸ್ ಧೋನಿ ಟೀಮ್ ಇಂಡಿಯಾಗೆ ಕಾಲಿಟ್ಟಾಗ ಮೊಹಮ್ಮದ್ ಕೈಫ್ ತಂಡದ ಪ್ರಮುಖ ಭಾಗವಾಗಿದ್ದರು. ನಂತರದ ದಿನಗಳಲ್ಲಿ ಧೋನಿ ಭಾರತ ತಂಡದ ಪ್ರಮುಖ ಭಾಗಿವಾಗಿದ್ದಲ್ಲದೆ, ನಾಯಕರೂ ಆದರು. ಅತ್ತ ಮೊಹಮ್ಮದ್ ಕೈಫ್ ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಲು ಸಾಧ್ಯವಾಗದೆ ಹೊರಬಿದ್ದಿದ್ದರು. ಧೋನಿ ನಾಯಕರಾದ ಬಳಿಕವಂತೂ ಕೈಫ್ಗೆ ಭಾರತ ತಂಡಕ್ಕೆ ಮರಳುವುದು ಸಾಧ್ಯವಾಗಲೇ ಇಲ್ಲ. ಇದಕ್ಕೆ ಕಾರಣವೇನೆಂದು ಕೇಳಿದರೆ, ಮೊಹಮ್ಮದ್ ಕೈಫ್ ತಮಾಷೆಯಾಗಿ ಉತ್ತರವೊಂದನ್ನು ನೀಡುತ್ತಾರೆ. ಅದೆಂದರೆ, ಧೋನಿ ತಮ್ಮ ಮನೆಗೆ ಬಂದಿದ್ದಾಗ ಅವರಿಗೆ ಸರಿಯಾಗಿ ಬಿರಿಯಾನಿ ಬಡಿಸದಿರುವುದು!
ಲಾಕ್‌ಡೌನ್ ವೇಳೆ ಮನೆಯಲ್ಲೇ ಬಂಧಿಯಾಗಿರುವ ಹಾಲಿ-ಮಾಜಿ ಕ್ರಿಕೆಟಿಗರು ವೃತ್ತಿಜೀವನದ ವಿಶೇಷ, ತಮಾಷೆಯ ಕ್ಷಣಗಳು, ಗುಟ್ಟುಗಳನ್ನು ಮೆಲುಕುಹಾಕುತ್ತಿದ್ದಾರೆ. ಇದೇ ರೀತಿ ಮೊಹಮ್ಮದ್ ಕೈಫ್ ಕೂಡ ಸಾಮಾಜಿಕ ಜಾಲತಾಣದ ಕಾರ್ಯಕ್ರಮದಲ್ಲಿ ವಿಶೇಷ ಘಟನೆಯೊಂದನ್ನು ಮೆಲುಕು ಹಾಕಿದ್ದಾರೆ.
ಇದನ್ನೂ ಓದಿ: ನಿಂದನೆಗಳಿಗೆ ಬೇಸತ್ತು ಜಪಾನ್ ಕುಸ್ತಿತಾರೆ ಆತ್ಮಹತ್ಯೆ
2006ರಲ್ಲಿ ಭಾರತ ತಂಡದ ಆಟಗಾರರನ್ನು ಕೈಫ್, ನೋಯ್ಡದ ತಮ್ಮ ಮನೆಗೆ ಆಹ್ವಾನಿಸಿದ್ದರಂತೆ. ಆಗ ಸೌರವ್ ಗಂಗೂಲಿ, ಸಚಿನ್ ತೆಂಡುಲ್ಕರ್ ಅವರಂಥ ಹಿರಿಯ ಆಟಗಾರರತ್ತ ಹೆಚ್ಚಿನ ಗಮನ ಹರಿಸಿದ್ದ ಕೈಫ್, ಆಗಷ್ಟೇ ತಂಡಕ್ಕೆ ಕಾಲಿಟ್ಟಿದ್ದ ಧೋನಿ ಮತ್ತು ಸುರೇಶ್ ರೈನಾರಂಥ ಯುವ ಆಟಗಾರರಿಗೆ ಹೆಚ್ಚಿನ ಸಮಯ ನೀಡಿರಲಿಲ್ಲ. ಮೊದಲ ಬಾರಿ ಭಾರತ ತಂಡದ ಆಟಗಾರರಿಗೆ ಆತಿಥ್ಯ ವಹಿಸಿದ್ದ ಕೈಫ್, ‘ಒಂದು ಕೋಣೆಯಲ್ಲಿದ್ದ ಸಚಿನ್, ಗಂಗೂಲಿಯಂಥ ಹಿರಿಯ ಆಟಗಾರರ ಜತೆ ಹೆಚ್ಚಿನ ಸಮಯ ಕಳೆದಿದ್ದೆ. ಇದೇ ವೇಳೆ ಮತ್ತೊಂದು ಕೋಣೆಯಲ್ಲಿದ್ದ ಧೋನಿ, ರೈನಾ ಅವರಂಥ ಕಿರಿಯ ಆಟಗಾರರ ಅತಿಥಿ ಸತ್ಕಾರಕ್ಕೆ ಹೆಚ್ಚಿನ ಆದ್ಯತೆ ನೀಡಿರಲಿಲ್ಲ. ಧೋನಿಗೆ ಬಿರಿಯಾನಿ ಬಡಿಸುವತ್ತ ಗಮನಹರಿಸಿರಲಿಲ್ಲ. ಧೋನಿ ಬೇಸರಿಸಿದಂತಿತ್ತು. ಇದರಿಂದಾಗಿಯೇ, 2007ರಲ್ಲಿ ಅವರು ನಾಯಕರಾದ ಬಳಿಕ ನನಗೆ ಭಾರತ ತಂಡಕ್ಕೆ ಮರಳುವುದು ಸಾಧ್ಯವಾಗದಿರಬಹುದು’ ಎಂದು ತಮಾಷೆಯಾಗಿ ವಿವರಿಸಿದ್ದಾರೆ.
ಇದನ್ನೂ ಓದಿ: ಟೀಮ್ ಇಂಡಿಯಾ ಆಟಗಾರನ ಕುದುರೆ ಪ್ರೀತಿ
‘ನಾನು ನಿಮ್ಮ ಮನೆಗೆ ಬಂದಿದ್ದೆ. ಆದರೆ ನೀವು ನನ್ನನ್ನು ಸರಿಯಾಗಿ ನೋಡಿಕೊಂಡಿರಲಿಲ್ಲ’ ಎಂದು ಧೋನಿ ಆಗಾಗ ರೇಗಿಸುತ್ತಿರುತ್ತಾರೆ ಎಂದೂ ಕೈಫ್ ಮೆಲುಕು ಹಾಕಿದ್ದಾರೆ. 2000ದಿಂದ 2006ರವರೆಗೆ ಅವರು, ಭಾರತ ತಂಡದ ಪರ 13 ಟೆಸ್ಟ್ ಮತ್ತು 125 ಏಕದಿನ ಪಂದ್ಯವಾಡಿದ್ದರು. 2006ರ ನವೆಂಬರ್‌ನಲ್ಲಿ ಅವರು ಭಾರತ ಪರ ಕೊನೆಯ ಪಂದ್ಯ ಆಡಿದ್ದರೆ, 2007ರ ಟಿ20 ವಿಶ್ವಕಪ್ ವೇಳೆ ಧೋನಿಗೆ ಭಾರತ ತಂಡದ ನಾಯಕತ್ವ ಒಲಿದಿತ್ತು. 2006ರ ನಂತರ ಭಾರತ ತಂಡಕ್ಕೆ ಮರಳುವ ಹಲವು ಪ್ರಯತ್ನದಲ್ಲಿ ವಿಫಲರಾಗಿದ್ದ ಕೈಫ್, 2018ರ ಜುಲೈನಲ್ಲಿ ಅಧಿಕೃತವಾಗಿ ವೃತ್ತಿಪರ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು.