ಕ್ರೀಡೆ

ಸಿಎಸ್​ಕೆ ಅಲ್ಲವೇ ಅಲ್ಲ… ಕೊಹ್ಲಿಯ ಫೇವರಿಟ್​ ಎದುರಾಳಿ ತಂಡ ಇದಂತೆ! ವಿರಾಟ್​ ಕೊಟ್ರು ಅಚ್ಚರಿ ಉತ್ತರ

ನವದೆಹಲಿ: ಟೀಮ್​ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ ಭಾನುವಾರ (ಆಗಸ್ಟ್ 18) 16 ವರ್ಷಗಳನ್ನು ಪೂರೈಸಿದ್ದಾರೆ. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಜನಪ್ರಿಯ ಬ್ರಾಡ್‌ಕಾಸ್ಟರ್ ಸ್ಟಾರ್ ಸ್ಪೋರ್ಟ್ಸ್ ಜೊತೆ ಒಂದಿಷ್ಟು ಮಾತುಕತೆ ನಡೆಸಿದರು.

ಈ ವಿಶೇಷ ಸಂದರ್ಶನದ ಸಂದರ್ಭದಲ್ಲಿ ವಿರಾಟ್​ ಕೊಹ್ಲಿಗೆ ಸ್ಟಾರ್ ಸ್ಪೋರ್ಟ್ಸ್ ಹಲವು ಪ್ರಶ್ನೆಗಳನ್ನು ಕೇಳಿದೆ. ತಮ್ಮ ನೆಚ್ಚಿನ ಕ್ರಿಕೆಟಿಗರನ್ನು ಆಯ್ಕೆ ಮಾಡುವಂತೆ ಹೇಳಿ ಎಂ.ಎಸ್. ಧೋನಿ ಮತ್ತು ಎ.ಬಿ. ಡಿವಿಲಿಯರ್ಸ್ ಅವರ ಹೆಸರನ್ನು ಆಯ್ಕೆಗಳನ್ನು ನೀಡಲಾಯಿತು. ಇಬ್ಬರೂ ನನ್ನ ನೆಚ್ಚಿನ ಕ್ರಿಕೆಟಿಗರು ಅನ್ನುವ ಮೂಲಕ ಕೊಹ್ಲಿ ಬಹಳ ಬುದ್ಧಿವಂತಿಕೆಯಿಂದ ಉತ್ತರಿಸಿದರು.

ಇದಾದ ಬಳಿಕ ನಿಮ್ಮ ನೆಚ್ಚಿನ ಶಾಟ್​,​ ಫ್ಲಿಕ್ ಅಥವಾ ಕವರ್ ಡ್ರೈವ್? ಎಂದು ಪ್ರಶ್ನಿಸಲಾಯಿತು. ಕವರ್ ಡ್ರೈವ್ ತನ್ನ ನೆಚ್ಚಿನ ಶಾಟ್ ಎಂದು ಕೊಹ್ಲಿ ಉತ್ತರಿಸಿದರು. ಅದೇ ರೀತಿ, ಐಪಿಎಲ್‌ನಲ್ಲಿ ನಿಮ್ಮ ನೆಚ್ಚಿನ ಪ್ರತಿಸ್ಪರ್ಧಿ ತಂಡ ಯಾವುದು ಎಂದು ಕೇಳಲಾಯಿತು. ಮುಂಬೈ ಇಂಡಿಯನ್ಸ್​ ಮತ್ತು ಕೆಕೆಆರ್​ ತಂಡವನ್ನು ಆಯ್ಕೆಗಳನ್ನಾಗಿ ನೀಡಲಾಯಿತು. ಈ ಪ್ರಶ್ನೆಗೆ ಉತ್ತರಿಸಲು ಕೊಂಚ ಸಮಯ ತೆಗೆದುಕೊಂಡ ಕೊಹ್ಲಿ, ಕೆಕೆಆರ್​ ನನ್ನ ನೆಚ್ಚಿನ ಎದುರಾಳಿ ತಂಡ ಎಂದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ಟೀಮ್​ ಇಂಡಿಯಾ ಹೊರತಾಗಿ, ವಿರಾಟ್ ಕೊಹ್ಲಿ ಐಪಿಎಲ್ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ತಂಡದಲ್ಲಿ ಸಾಮಾನ್ಯ ಸದಸ್ಯರಾಗಿ ಮುಂದುವರಿದಿದ್ದಾರೆ. 2008ರ ಮೊದಲ ಸೀಸನ್‌ನಿಂದಲೂ ಕೊಹ್ಲಿ ಆರ್‌ಸಿಬಿಯಲ್ಲಿದ್ದಾರೆ. ಆರ್​ಸಿಬಿ ಅನ್ನು ಎಂದೂ ಬಿಡುವುದಿಲ್ಲ ಅಂತಾನೂ ತಿಳಿಸಿದ್ದಾರೆ. ಕರ್ನಾಟಕದಲ್ಲಿ ಕೊಹ್ಲಿ ಬಹುದೊಡ್ಡ ಅಭಿಮಾನಿ ಬಳಗವೇ ಇದೆ. ಅದರಲ್ಲೂ ಬೆಂಗಳೂರು ನನ್ನ ಎರಡನೇ ಮನೆ ಎಂದು ಸ್ವತಃ ಕೊಹ್ಲಿಯೇ ಹೇಳಿದ್ದಾರೆ.

ಅಂದಹಾಗೆ ಐಪಿಎಲ್‌ನಲ್ಲಿ ಕೆಕೆಆರ್-ಆರ್‌ಸಿಬಿ ನಡುವಿನ ಪಂದ್ಯವೆಂದರೆ ಅಭಿಮಾನಿಗಳಿಗೆ ಹಬ್ಬ. ಉಭಯ ತಂಡಗಳ ನಡುವಿನ ಪಂದ್ಯಗಳು ಬಿರುಸಿನಿಂದ ನಡೆಯಲಿವೆ. ಇಲ್ಲಿಯವರೆಗೆ ಎರಡೂ ತಂಡಗಳು 34 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಕೆಕೆಆರ್ 20 ಪಂದ್ಯಗಳನ್ನು ಗೆದ್ದಿದ್ದರೆ, ಆರ್​ಸಿಬಿ 14 ಬಾರಿ ಗೆದ್ದಿದೆ. (ಏಜೆನ್ಸೀಸ್​)