ಕ್ರೀಡೆ

ಐಪಿಎಲ್​-17 ಆರಂಭಕ್ಕೆ ಮುಹೂರ್ತ ಫಿಕ್ಸ್​!

ನವದೆಹಲಿ: ಭಾರತದ ಆತಿಥ್ಯದಲ್ಲಿ ನಡೆದ ಏಕದಿನ ವಿಶ್ವಕಪ್​ ಟೂರ್ನಿಯನ್ನು ಯಶಸ್ವಿಯಾಗಿ ಆಯೋಜಿಸಿದ ಬಿಸಿಸಿಐ ಇದೀಗ 2024ರಲ್ಲಿ ನಡೆಯುವ ಇಂಡಿಯನ್​ ಪ್ರೀಮಿಯರ್​ ಲೀಗ್​ಗೆ ತಯಾರಿ ಆರಂಭಿಸಿದೆ. ಮಂಗಳವಾರ ದುಬೈನಲ್ಲಿ ನಡೆಯಲಿರುವ ಮಿನಿ ಹರಾಜು ಪ್ರಕ್ರಿಯೆಗೂ ಮುನ್ನ ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ.

ಸುದ್ದಿ ಮೂಲಗಳ ಪ್ರಕಾರ 17ನೇ ಆವೃತ್ತಿಯ ಐಪಿಎಲ್​ ಮಾರ್ಚ್​ 22ರಂದು ಆರಂಭವಾಗಲಿದ್ದು, ಮೇ ಕೊನೆಯ ವಾರದಲ್ಲಿ ಮುಕ್ತಾಯಗೊಳ್ಳಲಿದೆ. 2024ರಲ್ಲಿ ನಡೆಯುವ ಟಿ-20 ವಿಶ್ವಕಪ್​ ಅನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ಐಪಿಎಲ್​ ವೇಳಾಪಟ್ಟಿಯನ್ನು ಸಿದ್ದಪಡಿಸಲಿದೆ ಎಂದು ವರದಿಯಾಗಿದೆ.

2024ರಲ್ಲಿ ಭಾರತದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಇದು ಐಪಿಎಲ್​ ಮೇಲೆ ಪರಿಣಾಮ ಬೀರಲಿದೆ. ಈ ಕಾರಣಕ್ಕಾಗಿ ಸಂಪೂರ್ಣ ವೇಳಾಪಟ್ಟಿಯನ್ನು ಈವರೆಗೆ ಸಿದ್ದಪಡಿಸಿಲ್ಲ. ರಾಷ್ಟ್ರೀಯ ಚುನಾವಣಾ ಆಯೋಗ ದಿನಾಂಕ ಘೋಷಿಸುವುದರ ಮೇಲೆ ಮತ್ತು ಮಿನಿ ಹರಾಜು ಪ್ರಕ್ರಿಯೆ ಮುಗಿದ ಬಳಿಕ ಬಿಸಿಸಿಐ ವೇಳಾಪಟ್ಟಿಯನ್ನು ಸಿದ್ದಪಡಿಸಲಿದೆ ಎಂದು ತಿಳಿದು ಬಂದಿದೆ.

ಕ್ರಿಕ್‌ಬಜ್ ವರದಿ ಮಾಡಿರುವ ಪ್ರಕಾರ, ಎಲ್ಲವೂ ಸರಿಯಾಗಿ ನಡೆದರೆ ಐಪಿಎಲ್-17 ಅನ್ನು ಮಾರ್ಚ್ 22 ರಿಂದ ಮೇ ಅಂತ್ಯದವರೆಗೆ ಆಯೋಜಿಸಬಹುದು. ಬಿಸಿಸಿಐ ಐಪಿಎಲ್ 2024ಕ್ಕೆ ವಿಂಡೋವನ್ನು ನಿಗದಿಪಡಿಸಿದೆ. ಹರಾಜು ಪ್ರಕ್ರಿಯೆ ಮುಗಿದ ಬಳಿಕ ವೇಳಾಪಟ್ಟಿಗೆ ಸಂಬಂಧಿಸಿದ ಸಿದ್ಧತೆಗಳು ಆರಂಭವಾಗಲಿವೆ ಎಂದು ಕ್ರಿಕ್​ಬಜ್​ ವರದಿ ಮಾಡಿದೆ.