ಕ್ರೀಡೆ

ಈ ದಿಗ್ಗಜರಿಗೆ ಒಲಿಯಲೇ ಇಲ್ಲ ಖೇಲ್‌ರತ್ನ...

ಬೆಂಗಳೂರು: ರಾಜೀವ್ ಗಾಂಧಿ ಖೇಲ್‌ರತ್ನ ಪ್ರಶಸ್ತಿ ಭಾರತೀಯ ಕ್ರೀಡಾ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿ. ಹಾಕಿ ಮಾಂತ್ರಿಕ ಧ್ಯಾನ್‌ಚಂದ್ ಹುಟ್ಟುಹಬ್ಬದ ಅಂಗವಾಗಿ ಪ್ರತಿ ವರ್ಷ ಆಗಸ್ಟ್ 29 ರಂದು ಕ್ರೀಡಾ ದಿನಾಚರಣೆ ಆಚರಿಸಲಾಗುತ್ತದೆ. ಹಾಲಿ ವರ್ಷದಲ್ಲಿ ಉತ್ತಮ ನಿರ್ವಹಣೆ ತೋರುವ ಒಬ್ಬ ಕ್ರೀಡಾಪಟುವಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ಪ್ರತಿಷ್ಠಿತ ಪ್ರಶಸ್ತಿಗೆ ದಿಗ್ಗಜ ಆಟಗಾರರು ವೃತ್ತಿಜೀವನದ ವೇಳೆ ಉತ್ತಮ ನಿರ್ವಹಣೆ ನಡುವೆಯೂ ವಂಚಿತರಾಗಿದ್ದರು.ದಿಗ್ಗಜರಾದ ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ, ವಿವಿಎಸ್ ಲಕ್ಷ್ಮಣ್‌ರಂಥ ದಿಗ್ಗಜರಿಗೆ ಈ ಪ್ರಶಸ್ತಿ ಒಲಿಯಲೇ ಇಲ್ಲ. ಈ ವರ್ಷ ಕ್ರಿಕೆಟ್‌ನಿಂದ ರೋಹಿತ್ ಶರ್ಮ ಹೆಸರನ್ನು ಬಿಸಿಸಿಐ ಶಿಫಾರಸು ಮಾಡಿದೆ.

ಕ್ರೀಡಾಪಟುಗಳಿಗೆ ಮೈದಾನದಲ್ಲಿ ತೋರುವ ನಿರ್ವಹಣೆ ಎಷ್ಟು ಮುಖ್ಯವೋ, ಪ್ರೋತ್ಸಾಹ ಕೂಡ ಅಷ್ಟೇ ಮುಖ್ಯವಾಗುತ್ತದೆ. ನೌಕರಿ, ತರಬೇತಿ, ಪುರಸ್ಕಾರಗಳು ಇದರಲ್ಲಿ ಸೇರಿರುತ್ತವೆ. ವಿವಿಧ ಕ್ರೀಡೆಗಳಲ್ಲಿ ಉತ್ತಮ ನಿರ್ವಹಣೆ ತೋರಿದ ಕ್ರೀಡಾಪಟುಗಳಿಗೆ ಕ್ರೀಡಾಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಇತರ ಕ್ರೀಡೆಗಳಲ್ಲಿ ಪ್ರಶಸ್ತಿ ಕೈತಪ್ಪಿದರೆ ದೊಡ್ಡ ವಿವಾದವಾದರೂ ಈ ದಿಗ್ಗಜರು ಮಾತ್ರ ಪ್ರಶಸ್ತಿ ಕೈತಪ್ಪಿದ್ದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಕ್ರಿಕೆಟ್ ವಿಭಾಗದಿಂದ ಇದುವರೆಗೂ ಸಚಿನ್ ತೆಂಡುಲ್ಕರ್, ಎಂಎಸ್ ಧೋನಿ ಹಾಗೂ ವಿರಾಟ್ ಕೊಹ್ಲಿಗೆ ಮಾತ್ರ ಈ ಪ್ರಶಸ್ತಿ ದಕ್ಕಿದೆ. ಈ ಪ್ರಶಸ್ತಿಗೆ ಈ ದಿಗ್ಗಜರು ಆರ್ಹರಲ್ಲ ಎಂಬ ವಾದವಿಲ್ಲ, ಆದರೆ, ಪ್ರಶಸ್ತಿ ಆಯ್ಕೆ ವೇಳೆ ಇದ್ದ ತೀವ್ರ ಪೈಪೋಟಿಯಿಂದಾಗಿಯೇ ಇವರಿಗೆ ಪ್ರಶಸ್ತಿ ಕೈತಪ್ಪಿದೆ ಎನ್ನುತ್ತಾರೆ ಕ್ರೀಡಾ ತಜ್ಞರು.

ಕ್ರಿಕೆಟ್ ವಿಭಾಗದಿಂದ ಕೇವಲ ಈ ಮೂರು ದಿಗ್ಗಜರಿಗೆ ಪ್ರಶಸ್ತಿ ಕೈತಪ್ಪಿದೆ ಎಂದು ಹೇಳಲಾಗದು. ಕನ್ನಡಿಗ ಅನಿಲ್ ಕುಂಬ್ಳೆ, ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಹರ್ಭಜನ್ ಸಿಂಗ್ ಅವರುಗಳ ಸಾಧನೆ ಮೇರೆಗೆ ಎಲ್ಲರೂ ಪ್ರಶಸ್ತಿ ಆರ್ಹರೆ. 1991-92ರಲ್ಲಿ ಆರಂಭಗೊಂಡ ಈ ಪ್ರಶಸ್ತಿಯನ್ನು ಚೆಸ್ ಮಾಂತ್ರಿಕ ವಿಶ್ವನಾಥನ್ ಆನಂದ್‌ಗೆ ಮೊದಲ ಪ್ರಶಸ್ತಿ ನೀಡಲಾಯಿತು. 1997-98ರಲ್ಲಿ ಸಚಿನ್ ತೆಂಡುಲ್ಕರ್, 2007ರಲ್ಲಿ ಎಂಎಸ್ ಧೋನಿ ಹಾಗೂ 2018ರಲ್ಲಿ ವಿರಾ ಕೊಹ್ಲಿಗೆ ನೀಡಲಾಗಿದೆ.