ಕ್ರೀಡೆ

ಆತನ ವೃತ್ತಿ ಜೀವನವನ್ನೇ ಮುಗಿಸಿಬಿಟ್ಟರು... ಗೌತಮ್​ ಗಂಭೀರ್​, ಅಜಿತ್​ ಅಗರ್ಕರ್​ ವಿರುದ್ಧ ಭಾರಿ ಟೀಕೆ! Team India

ನವದೆಹಲಿ: ದೇಶೀಯ ಕ್ರಿಕೆಟ್‌ನಲ್ಲಿ ಅದ್ಭುತ ಫಾರ್ಮ್‌ ಕಂಡುಕೊಳ್ಳುವ ಮೂಲಕ ಮತ್ತೆ ಭಾರತ ತಂಡಕ್ಕೆ ವಾಪಾಸ್ಸಾಗುವ ಆತ್ಮವಿಶ್ವಾಸ ಹೊಂದಿದ್ದ ಅನುಭವಿ ವೇಗಿ ಮೊಹಮ್ಮದ್ ಶಮಿ ಅವರಿಗೆ ಮತ್ತೆ ಆಘಾತವಾಗಿದೆ. ಮುಂಬರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್‌ ಸರಣಿಗೆ ನಿನ್ನೆಯಷ್ಟೇ (ನ.05) ಘೋಷಣೆಯಾದ ಭಾರತ ತಂಡದಲ್ಲಿ ( Team India ) ಶಮಿ ಅವರಿಗೆ ಯಾವುದೇ ಸ್ಥಾನ ಸಿಕ್ಕಿಲ್ಲ.

ಶಮಿ ಅವರನ್ನು ಆಯ್ಕೆ ಮಾಡದಿದ್ದಕ್ಕೆ ಭಾರತೀಯ ತಂಡದ ಆಡಳಿತ ಮಂಡಳಿ ಮತ್ತೊಮ್ಮೆ ತೀವ್ರ ಟೀಕೆಗಳನ್ನು ಎದುರಿಸುತ್ತಿದೆ. ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಮತ್ತು ಮುಖ್ಯ ತರಬೇತುದಾರ ಗೌತಮ್ ಗಂಭೀರ್ ಉದ್ದೇಶಪೂರ್ವಕವಾಗಿ ಶಮಿ ವೃತ್ತಿಜೀವನವನ್ನು ಕೊನೆಗೊಳಿಸುತ್ತಿದ್ದಾರೆ ಎಂದು ಶಮಿ ಅಭಿಮಾನಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ. ಅಂದಹಾಗೆ, ಶಮಿ ಅವರು ಎರಡು ವರ್ಷಗಳ ಹಿಂದೆ ಕೊನೆಯ ಬಾರಿ ಭಾರತ ಪರ ಟೆಸ್ಟ್ ಆಡಿದ್ದರು.

ಪಾದದ ಗಾಯದಿಂದಾಗಿ ನಾಲ್ಕು ವರ್ಷಗಳ ಕಾಲ ತಂಡದಿಂದ ಹೊರಗುಳಿದಿದ್ದ ಶಮಿ, ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಏಕದಿನ ಪಂದ್ಯಾವಳಿಯಲ್ಲಿ ಟೀಮ್​ ಇಂದಿಯಾ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯಗಳಿಗೆ ಈ ಬಲಗೈ ವೇಗಿಯನ್ನು ಆಯ್ಕೆ ಸಮಿತಿ ಆಯ್ಕೆ ಮಾಡಲಿಲ್ಲ. ಈ ಸಂದರ್ಭದಲ್ಲಿ ಮಾತನಾಡಿದ್ದ ಮುಖ್ಯ ಆಯ್ಕೆದಾರ ಅಗರ್ಕರ್, ಶಮಿ ಅವರ ಫಿಟ್​ನೆಸ್​ ಬಗ್ಗೆ ನಮಗೆ ಯಾವುದೇ ಮಾಹಿತಿ ಇರಲಿಲ್ಲ. ಅದಕ್ಕಾಗಿಯೇ ಅವರನ್ನು ಆಯ್ಕೆ ಮಾಡಲಿಲ್ಲ ಎಂದಿದ್ದರು. ಇದಕ್ಕೆ ಖಾರವಾಗಿ‘ ಪ್ರತಿಕ್ರಿಯಿಸಿದ ಶಮಿ, ರಣಜಿ ಆಡಲು ಫಿಟ್ ಆಗಿರುವಾಗ ಏಕದಿನ ಪಂದ್ಯಗಳನ್ನು ಆಡಲು ನನ್ನಿಂದ ಸಾಧ್ಯವಿಲ್ಲವೇ ಎಂದು ಪ್ರಶ್ನೆ ಮಾಡಿದ್ದರು.

ಆಟದ ಮೂಲಕ ಉತ್ತರ

ಭಾರಿ ಟೀಕೆಗಳು ಕೇಳಿಬಂದಾಗ, ಶಮಿ ಫಿಟ್ ಆಗಿಲ್ಲದ ಕಾರಣ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆ ಮಾಡಲಿಲ್ಲ ಎಂದು ಅಜಿತ್​ ಅಗರ್ಕರ್​ ಅವರು ಮತ್ತೊಮ್ಮೆ ಪುನರುಚ್ಚರಿಸಿದರು. ಈ ಸಂದರ್ಭದಲ್ಲಿ, ಗುಜರಾತ್ ವಿರುದ್ಧದ ರಣಜಿ ಪಂದ್ಯದಲ್ಲಿ ಬಂಗಾಳ ಪರ ಕೊನೆಯ ಪಂದ್ಯವನ್ನು ಆಡಿದ ಶಮಿ, ಅಗರ್ಕರ್‌ಗೆ ತಮ್ಮ ಆಟದ ಮೂಲಕವೇ ಖಡಕ್​ ಉತ್ತರ ನೀಡಿದರು. ಗುಜರಾತ್ ವಿರುದ್ಧದ ಪಂದ್ಯದಲ್ಲಿ, ಶಮಿ ಅವರು ಒಟ್ಟು ಎಂಟು ವಿಕೆಟ್‌ಗಳನ್ನು (3/44, 5/38) ಕಬಳಿಸಿ ಆಯ್ಕೆದಾರರಿಗೆ ನಾನು ಫಿಟ್​ ಎಂಬ ಸಂದೇಶವನ್ನು ರವಾನಿಸಿದರು.

ನಂಬಿಕೆ ಹುಸಿ

ಪಂದ್ಯದ ಬಳಿಕ ಶಮಿ ಅವರನ್ನು ಮಾಧ್ಯಮದವರು ಮಾತನಾಡಿಸಿದಾಗ, ನಾನು ಏನೇ ಹೇಳಿದರೂ ಅದನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗುತ್ತದೆ ಎನ್ನುವ ಮೂಲಕ ಯೂಟರ್ನ್​ ಹೊಡೆದರು. ಈ ಸಂದರ್ಭದಲ್ಲಿ, ಟೀಮ್ ಇಂಡಿಯಾದ ಹೊಸ ಆಯ್ಕೆದಾರ ಆರ್‌ಪಿ ಸಿಂಗ್ ಅವರ ಸಲಹೆ ಮತ್ತು ಅವರಿಂದ ಪಡೆದ ಭರವಸೆಯ ಮೇರೆಗೆ ಶಮಿ ತಮ್ಮ ಮನಸ್ಸನ್ನು ಬದಲಾಯಿಸಿದ್ದಾರೆಯೇ ಎಂದು ನೆಟ್ಟಿಗರು ಚರ್ಚಿಸಿದ್ದರು. ಅಗರ್ಕರ್ ಮತ್ತು ಶಮಿ ನಡುವಿನ ಮಾತಿನ ಸಮರ ಕೊನೆಗೊಂಡಿದೆ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಸರಣಿಗೆ ಅವರನ್ನು ಆಯ್ಕೆ ಮಾಡಲಾಗುತ್ತದೆ ಎಂದು ನಂಬಿದ್ದರು. ಆದರೆ, ಆ ನಂಬಿಕೆ ಇದೀಗ ಹುಸಿಯಾಗಿದೆ.

ಯಾಕೆ ಇಷ್ಟೊಂದು ಕೋಪ

ಬಂಗಾಳ ತಂಡವನ್ನು ಪ್ರತಿನಿಧಿಸುವ ಮತ್ತೊಬ್ಬ ವೇಗಿ ಆಕಾಶ್ ದೀಪ್ ಅವರನ್ನು ಆಯ್ಕೆ ಮಾಡಿರುವ ಆಯ್ಕೆದಾರರು ಮತ್ತೊಮ್ಮೆ ಶಮಿಯನ್ನು ತಂಡದಿಂದ ಹೊರಗಡೆ ಇಟ್ಟಿದ್ದಾರೆ. ಇಲ್ಲಿಗೆ ಶಮಿ ಅವರ ವೃತ್ತಿ ಜೀವನ ಕೊನೆಗೊಳ್ಳಲಿದೆ. ಶಮಿಯನ್ನು ಇನ್ನು ಮುಂದೆ ಟೀಮ್ ಇಂಡಿಯಾ ಟೆಸ್ಟ್ ಜೆರ್ಸಿಯಲ್ಲಿ ನೋಡಲಾಗುವುದಿಲ್ಲ. ನಿಮ್ಮ 'ಅಹಂ'ನಿಂದಾಗಿ ನೀವು ಶಮಿ ಅವರ ವೃತ್ತಿಜೀವನವನ್ನು ಹಾಳು ಮಾಡುತ್ತಿದ್ದೀರಿ. ಅವರ ಮೇಲೆ ನಿಮಗೆ ಯಾಕೆ ಅಷ್ಟೊಂದು ಕೋಪ? ಎಂದು ಅಗರ್ಕರ್​ ಮತ್ತು ಗಂಭೀರ್​ ಅವರನ್ನು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.

ಅಂದಹಾಗೆ, ಟೀಮ್ ಇಂಡಿಯಾ, ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಇದಕ್ಕಾಗಿ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬುಧವಾರ ಶುಭಮಾನ್ ಗಿಲ್ ನೇತೃತ್ವದ ಹದಿನೈದು ಸದಸ್ಯರ ತಂಡವನ್ನು ಘೋಷಿಸಿದೆ. (ಏಜೆನ್ಸೀಸ್​)