RCB: ನಿನ್ನೆ (ಏ.25) ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಎಸ್ಆರ್ಎಚ್ ಮತ್ತು ಸಿಎಸ್ಕೆ ನಡುವಿನ ಪಂದ್ಯದಲ್ಲಿ ಪ್ಯಾಟ್ ಕಮ್ಮಿನ್ಸ್ ಪಡೆ 5 ವಿಕೆಟ್ಗಳ ಸುಲಭ ಗೆಲುವನ್ನು ದಾಖಲಿಸಿತು. ಈ ಪಂದ್ಯದಲ್ಲಿ ಉತ್ತಮ ಆಲ್ರೌಂಡ್ ಪ್ರದರ್ಶನ ನೀಡಿದ ಸನ್ರೈಸರ್ಸ್ ತಂಡ ಐಪಿಎಲ್ ಪ್ಲೇಆಫ್ಗೆ ಲಗ್ಗೆಯಿಡುವ ಭರವಸೆಯನ್ನು ಗಟ್ಟಿಯಾಗಿಸಿದೆ.
20 ಓವರ್ನಲ್ಲಿ ಕೇವಲ 154 ರನ್ ಕಲೆಹಾಕಿದ ಸಿಎಸ್ಕೆಗೆ ಡಿವಾಲ್ಡ್ ಬ್ರೇವಿಸ್ ಮತ್ತು ಆಯುಷ್ ಮಾತ್ರೆ ಹೊರತುಪಡಿಸಿ ಉಳಿದ ಬ್ಯಾಟರ್ಗಳು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಇದು ಸಿಎಸ್ಕೆ ಸೋಲಿನಲ್ಲಿ ಪ್ರಮುಖ ಪಾತ್ರ ವಹಿಸಿತು. ಈ ಕುರಿತು ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಕೂಡ ತಮ್ಮ ಬೇಸರವನ್ನು ಹೊರಹಾಕಿದರು. ಬ್ಯಾಟಿಂಗ್ ಯೂನಿಟ್ ಮಾತ್ರವಲ್ಲದೇ ಬೌಲಿಂಗ್ ಕೂಡ ಕಳಪೆಯಾದ ಹಿನ್ನೆಲೆ ಸಿಎಸ್ಕೆ ಪ್ಲೇಆಫ್ ಕನಸು ಸಂಪೂರ್ಣವಾಗಿ ಭಗ್ನಗೊಂಡಿದೆ.
ಇನ್ನು ಗೆಲುವಿನ ಮಂದಹಾಸ ಹೊತ್ತು ಸಾಗಿರುವ ಸನ್ರೈಸರ್ಸ್ ಹೈದರಾಬಾದ್ ಪರ ನಿತೀಶ್ ಕುಮಾರ್ ರೆಡ್ಡಿ ಮಾತನಾಡಿ, "ಈ ಪಂದ್ಯ ಗೆದ್ದಿದ್ದು ನಮಗೆ ಉತ್ಸಾಹ ಹೆಚ್ಚಿದೆ. ಮುಂದಿನ ಐದು ಪಂದ್ಯಗಳನ್ನು ಗೆಲ್ಲಲೇ ಬೇಕಿದೆ. ಈ ವಿಷಯದಲ್ಲಿ ನಮಗೆ ಆರ್ಸಿಬಿ ಸ್ಫೂರ್ತಿ. ಕಳೆದ ಆವೃತ್ತಿಯಲ್ಲಿ ಆರ್ಸಿಬಿ ಇದೇ ಪರಿಸ್ಥಿತಿಯಲ್ಲಿತ್ತು. 10ನೇ ಸ್ಥಾನದಲ್ಲಿದ್ದ ಬೆಂಗಳೂರು ತಂಡ, 7ಕ್ಕೆ 7 ಪಂದ್ಯವನ್ನು ಗೆದ್ದು ಪ್ಲೇಆಫ್ಗೆ ಲಗ್ಗೆಯಿಟ್ಟಿತು. ಅದೇ ರೀತಿ ನಾವು ಕೂಡ ಮುನ್ನುಗ್ಗುತ್ತೇವೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎಸ್ಆರ್ಎಚ್ ನಡುವಿನ ಪಂದ್ಯಕ್ಕೂ ಮೊದಲು ಮಾತನಾಡಿದ್ದ ಸಿಎಸ್ಕೆ ಕೋಚ್ ಸ್ಟೀಫನ್ ಫ್ಲೆಮಿಂಗ್, "ಕಳೆದ ವರ್ಷ ಆರ್ಸಿಬಿ ಬ್ಯಾಕ್ ಟು ಬ್ಯಾಕ್ ಗೆದ್ದ ರೀತಿಯಲ್ಲೇ ನಾವು ಗೆಲ್ಲುತ್ತೇವೆ. ನಮಗಿನ್ನೂ ಅವಕಾಶವಿದೆ. ಆರ್ಸಿಬಿಯಂತೆ ಕಮ್ಬ್ಯಾಕ್ ಮಾಡುತ್ತೇವೆ" ಎಂದು ಹೇಳಿದ್ದರು. ಒಟ್ಟಿನಲ್ಲಿ ಅಂಕಪಟ್ಟಿಯಲ್ಲಿ ಕೆಳಗಿರುವ ತಂಡಗಳಿಗೆ ಆರ್ಸಿಬಿ ಕೊಟ್ಟಿದ್ದ ಅದ್ಭುತ ಪ್ರದರ್ಶನ ಸ್ಫೂರ್ತಿದಾಯಕವಾಗಿದೆ ಎಂದರೆ ಖಂಡಿತ ತಪ್ಪಾಗಲಾರದು,(ಏಜೆನ್ಸೀಸ್).