ಕ್ರೀಡೆ

ಮೊದಲ ಟಿ20 ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಸೋಲುಣಿಸಿದ ನ್ಯೂಜಿಲೆಂಡ್

ಆಕ್ಲೆಂಡ್: ಪದಾರ್ಪಣೆಯ ಪಂದ್ಯದಲ್ಲೇ ಮಿಂಚಿದ ವೇಗಿ ಜೇಕಬ್ ಡಫಿ (33ಕ್ಕೆ 4) ಮಾರಕ ಬೌಲಿಂಗ್‌ಯ ನೆರವಿನಿಂದ ನ್ಯೂಜಿಲೆಂಡ್ ತಂಡ ಪ್ರವಾಸಿ ಪಾಕಿಸ್ತಾನ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 5 ವಿಕೆಟ್‌ಗಳಿಂದ ಸುಲಭ ಗೆಲುವು ದಾಖಲಿಸಿದೆ. ಈ ಮೂಲಕ ಕಿವೀಸ್ ತಂಡ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಸರಣಿಯ 2ನೇ ಪಂದ್ಯ ಭಾನುವಾರ ಹ್ಯಾಮಿಲ್ಟನ್‌ನಲ್ಲಿ ನಡೆಯಲಿದೆ.

ಈಡರ್ನ್ ಪಾರ್ಕ್‌ನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಪಾಕಿಸ್ತಾನ ತಂಡ ಒಂದು ಹಂತದಲ್ಲಿ 39 ರನ್‌ಗೆ 5 ವಿಕೆಟ್ ಕಳೆದುಕೊಂಡು ತತ್ತರಿಸಿತ್ತು. ಆಗ ನಾಯಕ ಶಾದಾಬ್ ಖಾನ್ (42) ಮತ್ತು ಫಹೀಮ್ ಅಶ್ರಫ್​ (31) ಉಪಯುಕ್ತ ಆಟವಾಡಿ ಪಾಕ್ ಮೊತ್ತವನ್ನು 150ರ ಗಡಿ ದಾಟಿಸಿದರು. ಅಂತಿಮವಾಗಿ ಪಾಕ್ 9 ವಿಕೆಟ್‌ಗೆ 153 ರನ್ ಪೇರಿಸಿತು. ಆದರೆ ಈ ಮೊತ್ತ ಕಿವೀಸ್ ತಂಡಕ್ಕೆ ಸವಾಲೆನಿಸಲಿಲ್ಲ. 18.5 ಓವರ್‌ಗಳಲ್ಲಿ 5 ವಿಕೆಟ್‌ಗೆ 156 ರನ್ ಪೇರಿಸಿ ಜಯಿಸಿತು.

ವಿಕೆಟ್ ಕೀಪರ್-ಆರಂಭಿಕ ಟಿಮ್ ಸೀಫರ್ಟ್ (57 ರನ್, 43 ಎಸೆತ, 6 ಬೌಂಡರಿ, 1 ಸಿಕ್ಸರ್) ಅರ್ಧಶತಕ ಸಿಡಿಸಿ ಕಿವೀಸ್ ಚೇಸಿಂಗ್‌ಗೆ ಬಲ ತುಂಬಿದರು. ಅವರಿಗೆ ಗ್ಲೆನ್ ಫಿಲಿಪ್ಸ್ (23) ಮತ್ತು ಮಾರ್ಕ್ ಚಾಪ್‌ಮನ್ (34) ಉತ್ತಮ ಬೆಂಬಲ ಒದಗಿಸಿದರು.

ಡಫಿ ಭರ್ಜರಿ ಪದಾರ್ಪಣೆ

ಒಟಾಗೋದ ಬಲಗೈ ವೇಗಿ ಜೇಕಬ್ ಡಫಿ ಸ್ವಿಂಗ್ ಮತ್ತು ಬೌನ್ಸ್ ದಾಳಿಯಿಂದ ಪಾಕಿಸ್ತಾನ ತಂಡವನ್ನು ಕಂಗೆಡಿಸಿದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎಸೆದ 4ನೇ ಎಸೆತದಲ್ಲೇ ಮೊದಲ ವಿಕೆಟ್ ಸಂಪಾದಿಸಿದ ಡಫಿ, ಬಳಿಕ 2ನೇ ಓವರ್‌ನ 5 ಮತ್ತು 6ನೇ ಎಸೆತದಲ್ಲೂ ವಿಕೆಟ್ ಕಬಳಿಸಿದರು. 3ನೇ ಓವರ್‌ನ ಮೊದಲ ಎಸೆತದಲ್ಲಿ ಹ್ಯಾಟ್ರಿಕ್ ಸಾಧಿಸುವ ಅವಕಾಶದಿಂದ ವಂಚಿತರಾದರು. ಇನಿಂಗ್ಸ್ 18ನೇ ಓವರ್‌ನಲ್ಲಿ ಶಾದಾಬ್ ಖಾನ್‌ರನ್ನು ಔಟ್ ಮಾಡುವ ಮೂಲಕ ಡಫಿ 4ನೇ ವಿಕೆಟ್ ಗಳಿಸಿದರು.

ಪಾಕಿಸ್ತಾನ: 9 ವಿಕೆಟ್‌ಗೆ 153 (ರಿಜ್ವಾನ್ 17, ಹೈದರ್ ಅಲಿ 3, ಹಫೀಜ್ 0, ಶಾದಾಬ್ ಖಾನ್ 42, ಇಮಾದ್ ವಾಸಿಂ 19, ಫಹೀಮ್ ಅಶ್ರಫ್​ 31, ರಿಯಾಜ್ 9, ಶಹೀದ್ ಅಫ್ರಿದಿ 10*, ಜೇಕಬ್ ಡಫಿ 33ಕ್ಕೆ 3, ಸ್ಕಾಟ್ ಕಗ್ಗಿಲಿನ್ 27ಕ್ಕೆ 3, ಸೋಧಿ 37ಕ್ಕೆ 1), ನ್ಯೂಜಿಲೆಂಡ್: 18.5 ಓವರ್‌ಗಳಲ್ಲಿ 5 ವಿಕೆಟ್‌ಗೆ 156 (ಗುಪ್ಟಿಲ್ 6, ಸೀರ್ಟ್ 57, ಕಾನ್‌ವೇ 5, ಫಿಲಿಪ್ಸ್ 23, ಚಾಪ್‌ಮನ್ 34, ನೀಶಾಮ್ 15*, ಸ್ಯಾಂಟ್ನರ್ 12*, ಅಫ್ರಿದಿ 27ಕ್ಕೆ 2, ರವೂಫ್​ 29ಕ್ಕೆ 3), ಪಂದ್ಯಶ್ರೇಷ್ಠ: ಜೇಕಬ್ ಡಫಿ.