

ಮುಂಬೈ: ಬೆಂಗಳೂರು ಸಹಿತ ದೇಶದ 6 ನಗರಗಳ ಬಯೋ-ಬಬಲ್ ವಾತಾವರಣದಲ್ಲಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ದೇಶೀಯ ಟಿ20 ಟೂರ್ನಿಯ ಲೀಗ್ ಹಂತದ ಪಂದ್ಯಗಳು ನಡೆಯಲಿವೆ. ಮರುನಿರ್ಮಾಣಗೊಂಡಿರುವ ಅಹಮದಾಬಾದ್‌ನ ಸರ್ದಾರ್ ಪಟೇಲ್ ಕ್ರೀಡಾಂಗಣದಲ್ಲಿ ಟೂರ್ನಿಯ ಫೈನಲ್ ಸಹಿತ ನಾಕೌಟ್ ಪಂದ್ಯಗಳು ನಡೆಯಲಿವೆ ಎಂದು ಬಿಸಿಸಿಐ ತಿಳಿಸಿದೆ.
ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ಎಲ್ಲ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಕಳುಹಿಸಿರುವ ಪತ್ರದ ಅನ್ವಯ, ಟೂರ್ನಿಯಲ್ಲಿ ಆಡುವ 38 ತಂಡಗಳನ್ನು 6 ಗುಂಪುಗಳಲ್ಲಿ ವಿಭಾಗಿಸಲಾಗಿದ್ದು, ಇದರಲ್ಲಿ ತಲಾ 6 ತಂಗಳ 5 ಎಲೈಟ್ ಮತ್ತು 8 ತಂಡಗಳ 1 ಪ್ಲೇಟ್ ಗುಂಪು ಇರುತ್ತದೆ. ಬೆಂಗಳೂರಿನ ಜತೆಗೆ ಮುಂಬೈ, ಚೆನ್ನೈ, ಕೋಲ್ಕತ, ಇಂದೋರ್, ವಡೋದರದಲ್ಲಿ ಈ ಗುಂಪು ಹಂತದ ಪಂದ್ಯಗಳು ನಡೆಯಲಿವೆ.
ಕರೊನಾ ಹಾವಳಿಯಿಂದಾಗಿ ಮುಂದೂಡಲ್ಪಟ್ಟಿರುವ 2020-21ರ ಸಾಲಿನ ದೇಶೀಯ ಕ್ರಿಕೆಟ್ ಋತುವಿಗೆ ಜನವರಿ 10ರಂದು ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಮೂಲಕ ಚಾಲನೆ ದೊರೆಯಲಿದೆ. ಇದಕ್ಕಾಗಿ ಎಲ್ಲ ತಂಡಗಳು ಜನವರಿ 2ರೊಳಗಾಗಿ ಆತಿಥೇಯ ನಗರದಲ್ಲಿ ಕರೊನಾ ಪರೀಕ್ಷೆ ಮತ್ತು ಆಯಾ ರಾಜ್ಯಗಳ ಕ್ವಾರಂಟೈನ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಬಯೋ-ಬಬಲ್ ವಲಯವನ್ನು ಪ್ರವೇಶಿಸಬೇಕು ಎಂದು ಬಿಸಿಸಿಐ ತಿಳಿಸಿದೆ.
ಚೆನ್ನೈನಲ್ಲಿ ಪ್ಲೇಟ್ ಗುಂಪಿನ ಪಂದ್ಯಗಳು ನಡೆಯಲಿವೆ. ಇದರಿಂದ ತಮಿಳುನಾಡಿಗೆ ಟೂರ್ನಿಯ ಆತಿಥ್ಯ ವಹಿಸಿದರೂ, ತವರಿನಲ್ಲಿ ಪಂದ್ಯಗಳನ್ನು ಆಡುವ ಅದೃಷ್ಟವಿಲ್ಲ. ಉಳಿದಂತೆ ಹಾಲಿ ಚಾಂಪಿಯನ್ ಕರ್ನಾಟಕ (ಬೆಂಗಳೂರು), ಬಂಗಾಳ (ಕೋಲ್ಕತ), ಬರೋಡ (ವಡೋದರ), ಮಧ್ಯಪ್ರದೇಶ (ಇಂದೋರ್), ಮುಂಬೈ ತಂಡಗಳು ತವರಿನಲ್ಲೇ ಗುಂಪು ಹಂತದ ಪಂದ್ಯಗಳನ್ನು ಆಡುವ ಅವಕಾಶ ಪಡೆದಿವೆ.
ಜನವರಿ 26ರಿಂದ ನಾಕೌಟ್
ನಾಕೌಟ್ ಪಂದ್ಯಗಳು ಜನವರಿ 26ರಿಂದ ಅಹಮದಾಬಾದ್‌ನಲ್ಲಿ ನಡೆಯಲಿವೆ. ಜನವರಿ 26 ಮತ್ತು 27ರಂದು ಕ್ವಾರ್ಟರ್ಫೈನಲ್, ಜನವರಿ 29ರಂದು ಸೆಮಿಫೈನಲ್ಸ್ ಮತ್ತು ಜನವರಿ 31ರಂದು ಫೈನಲ್ ಪಂದ್ಯ ನಡೆಯಲಿದೆ. ಮೊಟೆರಾದ ಸರ್ದಾರ್ ಕ್ರೀಡಾಂಗಣ ಸುಸಜ್ಜಿತವಾಗಿ ಮರುನಿರ್ಮಾಣಗೊಂಡ ಬಳಿಕ ಇದೇ ಮೊದಲ ಬಾರಿಗೆ ಸ್ಪರ್ಧಾತ್ಮಕ ಕ್ರಿಕೆಟ್ ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ. ಮುಂದಿನ ವರ್ಷ ಇಲ್ಲಿ ನಡೆಯಲಿರುವ ಭಾರತ-ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟಿ20 ಸರಣಿಗೆ ಇದು ಪೂರ್ವಾಭ್ಯಾಸವೂ ಆಗಿರುತ್ತದೆ.
ಮೂರು ಬಾರಿ ಕರೊನಾ ಪರೀಕ್ಷೆ
ಟೂರ್ನಿಯಲ್ಲಿ ಆಡಲಿರುವ ಎಲ್ಲ ಆಟಗಾರರು ಮತ್ತು ತರಬೇತಿ ಸಿಬ್ಬಂದಿ ಜನವರಿ 2, 4 ಮತ್ತು 6ರಂದು 3 ಬಾರಿ ಕೋವಿಡ್-19 ಪರೀಕ್ಷೆಗೆ ಒಳಪಡಬೇಕಾಗಿದೆ. ಆಯಾ ಪರೀಕ್ಷೆಗಳ ವರದಿಗಳು ಮರುದಿನವೇ ಪ್ರಕಟಗೊಳ್ಳಲಿವೆ. ಬಳಿಕ ನಾಕೌಟ್ ಪಂದ್ಯಗಳಿಗೆ ಮುನ್ನವೂ ಜನವರಿ 20 ಮತ್ತು 22ರಂದು ಆಟಗಾರರು ಮತ್ತೊಮ್ಮೆ ಕೋವಿಡ್-19 ಪರೀಕ್ಷೆಗೆ ಒಳಗಾಗಬೇಕಾಗಿದೆ.
ಗುಂಪುಗಳು:
ಎಲೈಟ್ ಎ: ಕರ್ನಾಟಕ, ಪಂಜಾಬ್, ಉತ್ತರ ಪ್ರದೇಶ, ಜಮ್ಮು-ಕಾಶ್ಮೀರ, ರೈಲ್ವೇಸ್, ತ್ರಿಪುರ; ಸ್ಥಳ: ಬೆಂಗಳೂರು.
ಎಲೈಟ್ ಬಿ: ಒಡಿಶಾ, ಬಂಗಾಳ, ಜಾರ್ಖಂಡ್, ತಮಿಳುನಾಡು, ಅಸ್ಸಾಂ, ಹೈದರಾಬಾದ್; ಸ್ಥಳ: ಕೋಲ್ಕತ.
ಎಲೈಟ್ ಸಿ: ಗುಜರಾತ್, ಮಹಾರಾಷ್ಟ್ರ, ಛತ್ತೀಸ್‌ಗಢ, ಹಿಮಾಚಲ ಪ್ರದೇಶ, ಬರೋಡ, ಉತ್ತರಾಖಂಡ; ಸ್ಥಳ: ವಡೋದರ.
ಎಲೈಟ್ ಡಿ: ಸರ್ವಿಸಸ್, ಸೌರಾಷ್ಟ್ರ, ವಿದರ್ಭ, ರಾಜಸ್ಥಾನ, ಮಧ್ಯಪ್ರದೇಶ, ಗೋವಾ; ಸ್ಥಳ: ಇಂದೋರ್.
ಎಲೈಟ್ ಇ: ಹರಿಯಾಣ, ಆಂಧ್ರ ಪ್ರದೇಶ, ದೆಹಲಿ, ಮುಂಬೈ, ಕೇರಳ, ಪುದುಚೇರಿ; ಸ್ಥಳ: ಮುಂಬೈ.
ಪ್ಲೇಟ್: ಚಂಡೀಗಢ, ಮೇಘಾಲಯ, ಬಿಹಾರ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ಸಿಕ್ಕಿಂ, ಅರುಣಾಚಲ ಪ್ರದೇಶ; ಸ್ಥಳ: ಚೆನ್ನೈ.