ಲಾಹೋರ್: ನಿನ್ನೆ (ಏ.27) ಪಾಕಿಸ್ತಾನದ ಲಾಹೋರ್ನ ಗಢಾಫಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಫೈನಲ್ ಟಿ-20 ಸರಣಿಯ ಐದನೇ ಪಂದ್ಯವು ನೋಡುಗರ ಹುಬ್ಬೇರುವಂತೆ ಮಾಡಿತು. ಪಾಕ್ ನೀಡಿದ ಗುರಿಯನ್ನು ಚೇಸ್ ಮಾಡುವ ವೇಳೆ ಕಿವೀಸ್ ಪಡೆಯ ಬ್ಯಾಟ್ಸ್ಮನ್ ಟಿಮ್ ಸಿಫರ್ಟ್ ಸಿಕ್ಸರ್ ಸಿಡಿಸಲು ಹೋಗಿ ಗಾಳಿಯಲ್ಲಿ ಹಾರಿದ ದೃಶ್ಯವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
20 ಓವರ್ಗಳಲ್ಲಿ 179 ರನ್ಗಳ ಗುರಿಯನ್ನು ಚೇಸ್ ಮಾಡುವಂತೆ ನ್ಯೂಜಿಲೆಂಡ್ಗೆ ಸವಾಲು ಎಸೆದ ಪಾಕ್ಗೆ ತಕ್ಕ ಪಾಠ ಕಲಿಸಬೇಕು ಎಂದು ಮುಂದಾದ ಕಿವೀಸ್ನ ಓಪನಿಂಗ್ ಬ್ಯಾಟ್ಸ್ಮನ್ ಟಿಮ್ ಸಿಫರ್ಟ್, 6ನೇ ಓವರ್ನಲ್ಲಿ ಪಾಕ್ನ ವೇಗಿ ಮೊಹಮ್ಮದ್ ಅಮಿರ್ ಬೌಲಿಂಗ್ನಲ್ಲಿ ಸಿಕ್ಸ್ ಸಿಡಿಸಲು ದಾಪುಗಾಲು ಇಟ್ಟರು.
ಆದರೆ, ಬಾಲ್ ಕೊಂಚ ವೈಡ್ನತ್ತ ಹೋಗುತ್ತಿದ್ದಂತೆ ಕೈತಪ್ಪಬಾರದೆಂದು ಗಾಳಿಯಲ್ಲಿ ಜಿಗಿದರೂ ಸಹ ಸಿಕ್ಸ್ ಬಾರಿಸಲು ವಿಫಲರಾದರು. ಟಿಮ್ ಅವರ ಈ ವಿಭಿನ್ನ ಪ್ರಯತ್ನದ ಶಾಟ್ ಕ್ಯಾಮರಾಮ್ಯಾನ್ ಕಣ್ಣಿನಲ್ಲಿ ಸೆರೆಯಾಗಿದ್ದು, ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದೆ.
ಇದನ್ನೂ ಓದಿ: ಶುಕ್ರವಾರ ಅಪ್ಪರ್ ಸರ್ಕ್ಯೂಟ್ ಹಿಟ್ ಆದ ಪೆನ್ನಿ ಸ್ಟಾಕ್ಗಳು: ಸೋಮವಾರದಂದು ಲಾಭ ನೀಡಲಿವೆ ಈ ಷೇರುಗಳು
33 ಎಸೆತಗಳಲ್ಲಿ 52 ರನ್ ಬಾರಿಸಿದ ಟಿಮ್, 7 ಫೋರ್ಸ್ ಮತ್ತು ಎರಡು ಸಿಕ್ಸರ್ ಸಿಡಿಸಿ, 157.58 ಸ್ಟ್ರೈಕ್ ರೇಟ್ ಉಳಿಸಿಕೊಂಡರು. ಆದರೆ, ಅಮಿರ್ನ ಓವರ್ನಲ್ಲಿ ವಿನೂತನ ಪ್ರಯತ್ನಕ್ಕೆ ಮುಂದಾದ ಟಿಮ್ಗೆ ಸದ್ಯ ಕ್ರಿಕೆಟ್ ಅಭಿಮಾನಿಗಳು ಫಿದಾ ಆಗಿದ್ದು, ಅದು ಸಿಕ್ಸ್ ಅಥವಾ ಬೌಂಡರಿ ಆಗಿದ್ದರೇ ನೋಡಲು ಮತ್ತಷ್ಟು ರೋಮಾಂಚನಕಾರಿಯಾಗಿ ಇರುತ್ತಿತ್ತು ಎಂದು ವ್ಯಾಪಕವಾಗಿ ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).