ನವದೆಹಲಿ: ಐಪಿಎಲ್ ಹರಾಜಿನ ಸಂದರ್ಭದಲ್ಲಿ ಭಾರಿ ಸದ್ದು ಮಾಡಿದ್ದ ಹಾಗೂ ತಂಡ ಸೋಲಿನ ದವಡೆಯಲ್ಲಿದ್ದಾಗ ಸ್ಫೋಟಕ ಆಟವಾಡಿ ಗೆಲುವು ತಂದುಕೊಡುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿರುವ ಶಶಾಂಕ್ ಸಿಂಗ್ ಬಗ್ಗೆ ಪಂಜಾಬ್ ಕಿಂಗ್ಸ್ ಒಡತಿ ಪ್ರೀತಿ ಝಿಂಟಾ ಕೊನೆಗೂ ಮೌನ ಮುರಿದಿದ್ದಾರೆ.
ಐಪಿಎಲ್ ಹರಾಜಿನಲ್ಲಿ ಶಶಾಂಕ್ ಸಿಂಗ್ ಪಂಜಾಬ್ ತಂಡಕ್ಕೆ ಬಿಕರಿಯಾಗಿದ್ದು ವಿವಾದ ಹುಟ್ಟುಹಾಕಿತ್ತು. ಐಪಿಎಲ್ 2024ರ ಆವೃತ್ತಿಗಾಗಿ 2023, ಡಿಸೆಂಬರ್ 19ರಂದು ದುಬೈನಲ್ಲಿ ನಡೆದ ಹರಾಜಿನಲ್ಲಿ 32 ವರ್ಷದ ಆಲ್ರೌಂಡರ್ ಶಶಾಂಕ್ ಸಿಂಗ್ರನ್ನು ಪಂಜಾಬ್ ಕಿಂಗ್ಸ್ ಮ್ಯಾನೇಜ್‌ಮೆಂಟ್ ತಪ್ಪಾಗಿ ಖರೀದಿಸಿತು. ಆದರೆ ಈಗ ಪಂಜಾಬ್ ಪಾಲಿಗೆ ಶಶಾಂಕ್ ವರವಾಗಿದ್ದಾರೆ. ದೇಶೀಯ ಆಟಗಾರರ ಮಾರಾಟದ ಕೊನೇ ಸುತ್ತಿನಲ್ಲಿ ಶಶಾಂಕ್ ಸಿಂಗ್ ಎಂಬ ಆಟಗಾರ ಹರಾಜಿಗೆ ಬಂದಾಗ ಪಂಜಾಬ್ ಕಿಂಗ್ಸ್ ತಂಡದ ಸಹ-ಮಾಲಕಿ ಪ್ರೀತಿ ಝಿಂಟಾ 20 ಲಕ್ಷ ರೂ. ಮೂಲಬೆಲೆಗೆ ಬಿಡ್ ಸಲ್ಲಿಸಿದರು. ಆದರೆ ಆ ಶಶಾಂಕ್ ಸಿಂಗ್ ತಾನು ಕಣ್ಣಿಟ್ಟಿದ್ದ ಆಟಗಾರ ಅಲ್ಲ ಎಂಬುದು ಪಂಜಾಬ್ ತಂಡಕ್ಕೆ ಬಿಡ್ ಪ್ರಕ್ರಿಯೆ ಮುಗಿದ ನಂತರ ಗೊತ್ತಾಯಿತು. ಹರಾಜುಗಾರ್ತಿ ಮಲ್ಲಿಕಾ ಸಾಗರ್ಗೆ ಪಂಜಾಬ್ ತಂಡ ಈ ಬಗ್ಗೆ ಮಾಹಿತಿ ನೀಡಿದರೂ, ಅವರು ಬಿಡ್ ವಾಪಸ್ ಪಡೆಯಲು ಅಥವಾ ಶಶಾಂಕ್ ಸಿಂಗ್ರನ್ನು ಮರು ಹರಾಜಿಗೆ ಒಳಪಡಿಸಲು ನಿರಾಕರಿಸಿದರು.
ಅಂದಹಾಗೆ ಪಂಜಾಬ್ ತಂಡ ಬಿಡ್ ಸಲ್ಲಿಸಿದ್ದು ಛತ್ತೀಸ್ಗಢದ 32 ವರ್ಷದ ಆಲ್ರೌಂಡರ್ ಶಶಾಂಕ್ ಸಿಂಗ್ಗೆ ಆಗಿತ್ತು. ಆದರೆ ಅದು ಖರೀದಿಸಲು ಬಯಸಿದ್ದು ಬಂಗಾಳದ 20 ವರ್ಷದ ಬ್ಯಾಟರ್ ಶಶಾಂಕ್ ಸಿಂಗ್ ಆಗಿತ್ತು. ಅವರೂ 20 ಲಕ್ಷ ರೂ. ಮೂಲಬೆಲೆ ಹೊಂದಿದ್ದರು. ಆದರೆ ಹರಾಜಿನಲ್ಲಿ ಗೊಂದಲ ಮಾಡಿಕೊಂಡಿರುವ ವರದಿಯನ್ನು ತಳ್ಳಿಹಾಕಿದ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ, ತನಗೆ ಬೇಕಾದ ಆಟಗಾರನನ್ನೇ ಖರೀದಿಸಿರುವುದಾಗಿ ಸ್ಪಷ್ಟನೆ ನೀಡುವ ಮೂಲಕ ಮುಜಗರಕ್ಕೀಡಾಗುವುದನ್ನು ಆ ಸಂದರ್ಭದಲ್ಲಿ ತಪ್ಪಿಸಿಕೊಂಡಿತು.
ಪಂಜಾಬ್ ಬೇಸರಕ್ಕೂ ಕಾರಣವಿತ್ತು
ಇದೇ ಶಶಾಂಕ್ ಸಿಂಗ್ರನ್ನು 2019ರಲ್ಲಿ ರಾಜಸ್ಥಾನ ರಾಯಲ್ಸ್ 30 ಲಕ್ಷ ರೂ.ಗೆ ಖರೀದಿ ಮಾಡಿತ್ತು. 2020 ಆವೃತ್ತಿಯಲ್ಲೂ ಅದೇ ತಂಡದಲ್ಲಿ ಮುಂದುವರಿದಿದ್ದರು. ಆದರೆ, ಎರಡೂ ಸೀಸನ್ನಲ್ಲೂ ಶಶಾಂಕ್ಗೆ ಆಡಲು ಅವಕಾಶ ಸಿಗಲಿಲ್ಲ. 2022ರಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡ 20 ಲಕ್ಷಕ್ಕೆ ಶಶಾಂಕ್ರನ್ನು ಖರೀದಿ ಮಾಡಿತ್ತು. ಈ ಸೀಸನ್ನಲ್ಲಿ 10 ಪಂದ್ಯಗಳನ್ನು ಆಡಿದ್ದ ಶಶಾಂಕ್ ಕೇವಲ 69 ರನ್ ಗಳಿಸಿದ್ದರು. ಈ ವಿಚಾರ ತಿಳಿದು ಪಂಜಾಬ್ ಕೂಡ ಬೇಸರ ಮಾಡಿಕೊಂಡಿತ್ತು.
ಕೊನೆಗೂ ಮೌನ ಮುರಿದ ಪ್ರೀತಿ ಝಿಂಟಾ
ಇದೀಗ ಐಪಿಎಲ್ನಲ್ಲಿ ಶಶಾಂಕ್ ಸಿಂಗ್ ಉತ್ತಮ ಪ್ರದರ್ಶನ ನೀಡುತ್ತಿರುವುದರಿಂದ ಈ ವಿಚಾರ ಪದೇಪದೆ ಚರ್ಚೆಯಾಗುತ್ತಿದೆ. ಇದೀಗ ತಂಡದ ಒಡತಿ ಪ್ರೀತಿ ಝಿಂಟಾ ಕೊನೆಗೂ ಮೌನ ಮುರಿದು ಶಶಾಂಕ್ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಹರಾಜಿನಲ್ಲಿ ನಮ್ಮ ಬಗ್ಗೆ ಈ ಹಿಂದೆ ಹೇಳಿದ ಎಲ್ಲ ವಿಷಯಗಳ ಬಗ್ಗೆ ಅಂತಿಮವಾಗಿ ಮಾತನಾಡಲು ಇಂದು ಪರಿಪೂರ್ಣ ದಿನವೆಂದು ನನಗೆ ತೋರುತ್ತದೆ. ಇದೇ ರೀತಿಯ ಸಂದರ್ಭಗಳಲ್ಲಿ ಬಹಳಷ್ಟು ಜನರು ಆತ್ಮವಿಶ್ವಾಸ ಕಳೆದುಕೊಂಡಿರುತ್ತಾರೆ, ಒತ್ತಡದಲ್ಲಿ ಸಿಲುಕಿಕೊಂಡಿರುತ್ತಾರೆ ಅಥವಾ ಪ್ರೇರಣೆ ಇಲ್ಲದವರಂಥಾಗುತ್ತಾರೆ.
ಆದರೆ, ಶಶಾಂಕ್ ಆ ರೀತಿ ಅಲ್ಲ! ಅವನು ಬಹಳಷ್ಟು ಜನರಂತೆ ಅಲ್ಲ. ಅವನು ನಿಜವಾಗಿಯೂ ವಿಶೇಷ ವ್ಯಕ್ತಿ. ಓರ್ವ ಆಟಗಾರನಾಗಿ ಅವರ ಕೌಶಲ್ಯದಿಂದಾಗಿ ಮಾತ್ರವಲ್ಲದೆ ಅವರ ಸಕಾರಾತ್ಮಕ ಮನೋಭಾವದಿಂದಾಗಿ ಎಲ್ಲರ ಗಮನ ಸೆಳೆದಿದ್ದಾನೆ. ತನ್ನ ಕುರಿತ ಎಲ್ಲ ಕಾಮೆಂಟ್‌ಗಳು ಹಾಗೂ ಜೋಕ್‌ಗಳನ್ನು ಕ್ರೀಡಾ ಸ್ಫೂರ್ತಿಯಿಂದಲೇ ತೆಗೆದುಕೊಂಡರು ಮತ್ತು ಎಂದಿಗೂ ಬಲಿಪಶುವಾಗಲಿಲ್ಲ. ಆತ ತನ್ನನ್ನು ತಾನೇ ಬೆಂಬಲಿಸಿಕೊಂಡನು. ಇದಿಷ್ಟೇ ಅಲ್ಲದೆ, ತಾನು ಏನು ಮಾಡಲು ಹೊರಟಿದ್ದೇನೆ ಎಂಬುದನ್ನು ನಮಗೆ ತೋರಿಸಿದನು ಮತ್ತು ಅದಕ್ಕಾಗಿ ನಾನು ಅವನನ್ನು ಶ್ಲಾಘಿಸುತ್ತೇನೆ. ಅವನಿಗೆ ನನ್ನ ಮೆಚ್ಚುಗೆ ಮತ್ತು ನನ್ನ ಗೌರವವಿದೆ.
ಜೀವನವು ವಿಭಿನ್ನ ತಿರುವು ಪಡೆದಾಗ ಮತ್ತು ಸ್ಕ್ರಿಪ್ಟ್ ಪ್ರಕಾರ ಆಟವಾಡದಿದ್ದಾಗ ಶಶಾಂಕ್ ನಿಮ್ಮೆಲ್ಲರಿಗೂ ಉದಾಹರಣೆಯಾಗಬಹುದು ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಜನರು ನಿಮ್ಮ ಬಗ್ಗೆ ಏನು ಯೋಚಿಸುತ್ತಾರೆ ಎಂಬುದು ಮುಖ್ಯವಲ್ಲ, ಆದರೆ ನಿಮ್ಮ ಬಗ್ಗೆ ನೀವು ಏನು ಯೋಚಿಸುತ್ತೀರಿ ಎಂಬುದೇ ಮುಖ್ಯ. ಆದ್ದರಿಂದ ಶಶಾಂಕ್‌ನಂತೆ ನಿಮ್ಮ ಮೇಲೆ ನಂಬಿಕೆ ಇಡುವುದನ್ನು ಎಂದಿಗೂ ನಿಲ್ಲಿಸಬೇಡಿ ಮತ್ತು ಜೀವನದ ಆಟದಲ್ಲಿ ನೀವು ಮ್ಯಾನ್ ಆಫ್ ದಿ ಮ್ಯಾಚ್ ಆಗುತ್ತೀರಿ ಎಂದು ನನಗೆ ಖಾತ್ರಿಯಿದೆ ಎಂದು ಶಶಾಂಕ್ರನ್ನು ಉದಾಹರಣೆ ತೆಗೆದುಕೊಂಡು ಇತರರಿಗೆ ಉತ್ಸಾಹ ತುಂಬುವ ಮಾತುಗಳನ್ನು ಪ್ರೀತಿ ಝಿಂಟಾ ಆಡಿದ್ದಾರೆ.
ಶಶಾಂಕ್ ಅಮೋಘ ಪ್ರದರ್ಶನ
ಅಂದಹಾಗೆ ಏಪ್ರಿಲ್ 04ರಂದು ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪ್ರಸಕ್ತ ಐಪಿಎಲ್ ಟೂರ್ನಿಯ 17ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ 3 ವಿಕೆಟ್ಗಳ ರೋಚಕ ಗೆಲುವು ಸಾಧಿಸಿತು. ಛತ್ತೀಸ್ಗಢದ ಬ್ಯಾಟರ್ ಶಶಾಂಕ್ ಸಿಂಗ್ (61*ರನ್, 29 ಎಸೆತ, 6 ಬೌಂಡರಿ, 4 ಸಿಕ್ಸರ್) ಗೆಲುವಿನ ರೂವಾರಿಯಾಗಿ ಹೊರ ಹೊಮ್ಮಿದರು. ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ಶಶಾಂಕ್ ಸಿಂಗ್ ಸ್ಫೋಟಕ ಬ್ಯಾಟಿಂಗ್ ಮೂಲಕ ಪಂಜಾಬ್ ಗೆಲುವಿನಾಸೆಗೆ ಮರುಜೀವ ತುಂಬಿದರು. 5ನೇ ವಿಕೆಟ್ಗೆ ಸಿಕಂದರ್ ರಾಜಾ (12) ಜತೆ 22 ಎಸೆತಗಳಲ್ಲಿ 41, 6ನೇ ವಿಕೆಟ್ಗೆ ಜಿತೇಶ್ ಶರ್ಮ (16) ಜತೆ 19 ಎಸೆತಗಳಲ್ಲಿ 39 ಮತ್ತು 7ನೇ ವಿಕೆಟ್ಗೆ ಇಂಪ್ಯಾಕ್ಟ್ ಆಟಗಾರ ಆಶುತೋಷ್ ಶರ್ಮ (31) 22 ಎಸೆತಗಳಲ್ಲಿ 43 ರನ್ ಸಿಡಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಕೊನೇ ಓವರ್ನಲ್ಲಿ 7 ರನ್ ಬೇಕಿದ್ದಾಗ ಯುವ ಬೌಲರ್ ದರ್ಶನ್ ನಲ್ಕಂಡೆ ದಾಳಿಗಿಳಿದರು. ಮೊದಲ ಎಸೆತದಲ್ಲೇ ಆಶುತೋಷ್ ಔಟಾದರೂ, ಶಶಾಂಕ್ ಇನ್ನೊಂದು ಎಸೆತ ಬಾಕಿ ಇರುವಂತೆಯೇ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು.
ಆರ್‌ಸಿಬಿ ವಿರುದ್ಧವೂ ರೋಚಕ ಆಟ
ಮಾರ್ಚ್ 25ರಂದು ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿಯೂ ಶಶಾಂಕ್ ಧೂಳೆಬ್ಬಿಸಿದರು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ 19 ಓವರ್ಗಳ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿತ್ತು. ಇದು ದೊಡ್ಡ ಸ್ಕೋರ್ ಅಲ್ಲ. ಆದರೆ, ಆರ್‌ಸಿಬಿ ಸ್ಟಾರ್ ಬೌಲರ್ ಅಲ್ಜಾರಿ ಜೋಸೆಫ್ ಎಸೆದ ಕೊನೆಯ ಓವರ್ನ ಮೊದಲ ಮತ್ತು ಮೂರನೇ ಎಸೆತದಲ್ಲಿ ಶಶಾಂಕ್ ಸಿಕ್ಸರ್ ಸಿಡಿಸಿದರು. ಅಲ್ಲದೆ, ನಾಲ್ಕನೇ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಪಂಜಾಬ್ ತಂಡ ಬೃಹತ್ ಸ್ಕೋರ್ ಗಳಿಸುವ ನೆರವಾದರು. ಶಶಾಂಕ್ ಒಂದೇ ಓವರ್ನಲ್ಲಿ 20 ರನ್ ಗಳಿಸಿದರು. ವೈಯಕ್ತಿಕವಾಗಿ 21 ರನ್ ಗಳಿಸಿ ಅಜೇಯರಾಗಿ ಉಳಿದರು. ಈ ಪಂದ್ಯವನ್ನು ಗೆದ್ದಿದ್ದರೆ ಶಶಾಂಕ್ ಹೆಸರು ಆಗಲೇ ಮುನ್ನೆಲೆಗೆ ಬರುತ್ತಿತ್ತು.
ಅಂದಹಾಗೆ ಬೈ ಮಿಸ್ಟೇಕ್ ಆಗಿ ಶಶಾಂಕ್ ಸಿಂಗ್ರನ್ನು ಖರೀದಿಸಿದರೂ ಒಳ್ಳೆಯದೇ ಆಯಿತು ಎಂದು ಪಂಜಾಬ್ ಕಿಂಗ್ಸ್ ಖುಷಿಯಾಗಿದೆ. (ಏಜೆನ್ಸೀಸ್)