More

    ಆಗೋದೆಲ್ಲ ಒಳ್ಳೆಯದಕ್ಕೇ… ಪ್ರೀತಿ ಝಿಂಟಾ ಪಾಲಿಗೆ ಈ ಮಾತು ನಿಜವಾಯ್ತು, ಆಕೆಯ ಎಡವಟ್ಟೇ ವರವಾಯ್ತು

    ನವದೆಹಲಿ: ಗುರುವಾರ (ಏಪ್ರಿಲ್​ 04) ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪ್ರಸಕ್ತ ಐಪಿಎಲ್​ ಟೂರ್ನಿಯ 17ನೇ ಪಂದ್ಯದಲ್ಲಿ ಗುಜರಾತ್​ ಟೈಟಾನ್ಸ್​ ವಿರುದ್ಧ ಪಂಜಾಬ್​ ಕಿಂಗ್ಸ್​ 3 ವಿಕೆಟ್​ಗಳ ರೋಚಕ ಗೆಲುವು ಸಾಧಿಸಿತು. ಛತ್ತೀಸ್​ಗಢದ ಬ್ಯಾಟರ್ ಶಶಾಂಕ್​ ಸಿಂಗ್​ (61*ರನ್​, 29 ಎಸೆತ, 6 ಬೌಂಡರಿ, 4 ಸಿಕ್ಸರ್​) ಗೆಲುವಿನ ರೂವಾರಿಯಾಗಿ ಹೊರ ಹೊಮ್ಮಿದರು. ಈ ಗೆಲುವಿನ ಮೂಲಕ ಶಿಖರ್​ ಧವನ್​ ಬಳಗ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ. ಗುಜರಾತ್​ ತಂಡ ತವರು ಅಂಗಣದಲ್ಲಿ ಮೊದಲ ಸೋಲು ಅನುಭವಿಸಿತು.

    ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದ ಶಶಾಂಕ್​ ಸಿಂಗ್​ ಸ್ಫೋಟಕ ಬ್ಯಾಟಿಂಗ್​ ಮೂಲಕ ಪಂಜಾಬ್​ ಗೆಲುವಿನಾಸೆಗೆ ಮರುಜೀವ ತುಂಬಿದರು. 5ನೇ ವಿಕೆಟ್​ಗೆ ಸಿಕಂದರ್​ ರಾಜಾ (12) ಜತೆ 22 ಎಸೆತಗಳಲ್ಲಿ 41, 6ನೇ ವಿಕೆಟ್​ಗೆ ಜಿತೇಶ್​ ಶರ್ಮ (16) ಜತೆ 19 ಎಸೆತಗಳಲ್ಲಿ 39 ಮತ್ತು 7ನೇ ವಿಕೆಟ್​ಗೆ ಇಂಪ್ಯಾಕ್ಟ್​ ಆಟಗಾರ ಆಶುತೋಷ್​ ಶರ್ಮ (31) 22 ಎಸೆತಗಳಲ್ಲಿ 43 ರನ್​ ಸಿಡಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಕೊನೇ ಓವರ್​ನಲ್ಲಿ 7 ರನ್​ ಬೇಕಿದ್ದಾಗ ಯುವ ಬೌಲರ್​ ದರ್ಶನ್​ ನಲ್ಕಂಡೆ ದಾಳಿಗಿಳಿದರು. ಮೊದಲ ಎಸೆತದಲ್ಲೇ ಆಶುತೋಷ್​ ಔಟಾದರೂ, ಶಶಾಂಕ್​ ಇನ್ನೊಂದು ಎಸೆತ ಬಾಕಿ ಇರುವಂತೆಯೇ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು.

    ಆ ಒಂದು ಮಿಸ್ಟೇಕ್​ ಮತ್ತೆ ವರವಾಯ್ತು
    ಐಪಿಎಲ್ 2024ರ ಆವೃತ್ತಿಗಾಗಿ 2023, ಡಿಸೆಂಬರ್ 19ರಂದು ದುಬೈನಲ್ಲಿ ನಡೆದ ಹರಾಜಿನಲ್ಲಿ 32 ವರ್ಷದ ಆಲ್​ರೌಂಡರ್​ ಶಶಾಂಕ್​ ಸಿಂಗ್​ರನ್ನು ಪಂಜಾಬ್ ಕಿಂಗ್ಸ್ ಮ್ಯಾನೇಜ್‌ಮೆಂಟ್ ತಪ್ಪಾಗಿ ಖರೀದಿಸಿತು. ಆದರೆ ಈಗ ಪಂಜಾಬ್​ ಪಾಲಿಗೆ ಶಶಾಂಕ್​ ವರವಾಗಿದ್ದಾರೆ. ದೇಶೀಯ ಆಟಗಾರರ ಮಾರಾಟದ ಕೊನೇ ಸುತ್ತಿನಲ್ಲಿ ಶಶಾಂಕ್​ ಸಿಂಗ್​ ಎಂಬ ಆಟಗಾರ ಹರಾಜಿಗೆ ಬಂದಾಗ ಪಂಜಾಬ್​ ಕಿಂಗ್ಸ್​ ತಂಡದ ಸಹ-ಮಾಲಕಿ ಪ್ರೀತಿ ಝಿಂಟಾ 20 ಲಕ್ಷ ರೂ. ಮೂಲಬೆಲೆಗೆ ಬಿಡ್​ ಸಲ್ಲಿಸಿದರು. ಆದರೆ ಆ ಶಶಾಂಕ್​ ಸಿಂಗ್​ ತಾನು ಕಣ್ಣಿಟ್ಟಿದ್ದ ಆಟಗಾರ ಅಲ್ಲ ಎಂಬುದು ಪಂಜಾಬ್​ ತಂಡಕ್ಕೆ ಬಿಡ್​ ಪ್ರಕ್ರಿಯೆ ಮುಗಿದ ನಂತರ ಗೊತ್ತಾಯಿತು. ಹರಾಜುಗಾರ್ತಿ ಮಲ್ಲಿಕಾ ಸಾಗರ್​ಗೆ ಪಂಜಾಬ್​ ತಂಡ ಈ ಬಗ್ಗೆ ಮಾಹಿತಿ ನೀಡಿದರೂ, ಅವರು ಬಿಡ್​ ವಾಪಸ್​ ಪಡೆಯಲು ಅಥವಾ ಶಶಾಂಕ್​ ಸಿಂಗ್​ರನ್ನು ಮರು ಹರಾಜಿಗೆ ಒಳಪಡಿಸಲು ನಿರಾಕರಿಸಿದರು.

    ಅಂದಹಾಗೆ ಪಂಜಾಬ್​ ತಂಡ ಬಿಡ್​ ಸಲ್ಲಿಸಿದ್ದು ಛತ್ತೀಸ್​ಗಢದ 32 ವರ್ಷದ ಆಲ್ರೌಂಡರ್​ ಶಶಾಂಕ್​ ಸಿಂಗ್​ಗೆ ಆಗಿತ್ತು. ಆದರೆ ಅದು ಖರೀದಿಸಲು ಬಯಸಿದ್ದು ಬಂಗಾಳದ 20 ವರ್ಷದ ಬ್ಯಾಟರ್​ ಶಶಾಂಕ್​ ಸಿಂಗ್​ ಆಗಿತ್ತು. ಅವರೂ 20 ಲಕ್ಷ ರೂ. ಮೂಲಬೆಲೆ ಹೊಂದಿದ್ದರು. ಆದರೆ ಹರಾಜಿನಲ್ಲಿ ಗೊಂದಲ ಮಾಡಿಕೊಂಡಿರುವ ವರದಿಯನ್ನು ತಳ್ಳಿಹಾಕಿದ ಪಂಜಾಬ್​ ಕಿಂಗ್ಸ್​ ಫ್ರಾಂಚೈಸಿ, ತನಗೆ ಬೇಕಾದ ಆಟಗಾರನನ್ನೇ ಖರೀದಿಸಿರುವುದಾಗಿ ಸ್ಪಷ್ಟನೆ ನೀಡುವ ಮೂಲಕ ಮುಜಗರಕ್ಕೀಡಾಗುವುದನ್ನು ತಪ್ಪಸಿಕೊಂಡಿತು.

    ಇದೇ ಶಶಾಂಕ್​ ಸಿಂಗ್​ರನ್ನು 2019ರಲ್ಲಿ ರಾಜಸ್ಥಾನ ರಾಯಲ್ಸ್​ 30 ಲಕ್ಷ ರೂ.ಗೆ ಖರೀದಿ ಮಾಡಿತ್ತು. 2020 ಆವೃತ್ತಿಯಲ್ಲೂ ಅದೇ ತಂಡದಲ್ಲಿ ಮುಂದುವರಿದಿದ್ದರು. ಆದರೆ, ಎರಡೂ ಸೀಸನ್​ನಲ್ಲೂ ಶಶಾಂಕ್​ಗೆ ಆಡಲು ಅವಕಾಶ ಸಿಗಲಿಲ್ಲ. 2022ರಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ತಂಡ 20 ಲಕ್ಷಕ್ಕೆ ಶಶಾಂಕ್​ರನ್ನು ಖರೀದಿ ಮಾಡಿತ್ತು. ಈ ಸೀಸನ್​ನಲ್ಲಿ 10 ಪಂದ್ಯಗಳನ್ನು ಆಡಿದ್ದ ಶಶಾಂಕ್​ ಕೇವಲ 69 ರನ್ ಗಳಿಸಿದ್ದರು. ಈ ವಿಚಾರ ತಿಳಿದು ಪಂಜಾಬ್​ ಕೂಡ ಬೇಸರ ಮಾಡಿಕೊಂಡಿದೆ. ಆದರೆ, ಅದನ್ನು ಹೊರಗೆ ತೋರಿಸಿಕೊಂಡಿಲ್ಲ.

    ಪ್ರಸಕ್ತ ಐಪಿಎಲ್​ ಹರಾಜಿನಲ್ಲಿ ಶಶಾಂಕ್​ ತಪ್ಪಾಗಿ ಪಂಜಾಬ್ ತಂಡಕ್ಕೆ ಸೇರಿದರು. ಆದರೆ, ಮಾರ್ಚ್​ 25ರಂದು ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿಯೂ ಶಶಾಂಕ್​ ಧೂಳೆಬ್ಬಿಸಿದರು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ 19 ಓವರ್​ಗಳ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿತ್ತು. ಇದು ದೊಡ್ಡ ಸ್ಕೋರ್ ಅಲ್ಲ. ಆದರೆ, ಆರ್‌ಸಿಬಿ ಸ್ಟಾರ್ ಬೌಲರ್ ಅಲ್ಜಾರಿ ಜೋಸೆಫ್ ಎಸೆದ ಕೊನೆಯ ಓವರ್​ನ ಮೊದಲ ಮತ್ತು ಮೂರನೇ ಎಸೆತದಲ್ಲಿ ಶಶಾಂಕ್​ ಸಿಕ್ಸರ್ ಸಿಡಿಸಿದರು. ಅಲ್ಲದೆ, ನಾಲ್ಕನೇ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಪಂಜಾಬ್‌ ತಂಡ ಬೃಹತ್ ಸ್ಕೋರ್ ಗಳಿಸುವ ನೆರವಾದರು. ಶಶಾಂಕ್ ಒಂದೇ ಓವರ್​ನಲ್ಲಿ 20 ರನ್​ ಗಳಿಸಿದರು. ವೈಯಕ್ತಿಕವಾಗಿ 21 ರನ್​ ಗಳಿಸಿ ಅಜೇಯರಾಗಿ ಉಳಿದರು.

    ಇದೀಗ ಬಲಿಷ್ಠ ಗುಜರಾತ್​ ಟೈಟಾನ್ಸ್​ ವಿರುದ್ಧವೂ ಶಶಾಂಕ್​ ಸಿಂಗ್​ ಅಬ್ಬರಿಸಿ ಬೊಬ್ಬಿರಿವ ಮೂಲಕ ಐಪಿಎಲ್​ನಲ್ಲಿ ಭರವಸೆ ಮೂಡಿಸುತ್ತಿದ್ದಾರೆ. ಎಲ್ಲರ ಕಣ್ಣು ಇದೀಗ ಶಶಾಂಕ್​ ಸಿಂಗ್​ ಮೇಲೆ ಬೀಳುತ್ತಿದೆ.

    ನಿನ್ನೆಯ ಪಂದ್ಯದ ವಿಚಾರಕ್ಕೆ ಬಂದರೆ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಕಾದಾಟದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಗುಜರಾತ್​ ತಂಡ, ಇನಿಂಗ್ಸ್​ ಪೂರ್ತಿ ನಿಂತು ಆಸರೆಯಾದ ನಾಯಕ ಶುಭಮಾನ್​ ಗಿಲ್​ (89*ರನ್​, 48 ಎಸೆತ, 6 ಬೌಂಡರಿ, 4 ಸಿಕ್ಸರ್​) ಆಟ ಮತ್ತು ಇತರ ಬ್ಯಾಟರ್​ಗಳ ಬೆಂಬಲದಿಂದ 4 ವಿಕೆಟ್​ಗೆ 199 ರನ್​ ಪೇರಿಸಿತು. ಪ್ರತಿಯಾಗಿ ಪಂಜಾಬ್​ ತಂಡ ಮೊದಲ 9 ಓವರ್​ನೊಳಗೆ ಅಗ್ರ 4 ವಿಕೆಟ್​ ಕಳೆದುಕೊಂಡರೂ, ಶಶಾಂಕ್​ ಸಿಂಗ್​ ವೀರೋಚಿತ ಸಾಹಸದಿಂದ 19.5 ಓವರ್​ಗಳಲ್ಲಿ 7 ವಿಕೆಟ್​ಗೆ 200 ರನ್​ ಸೇರಿಸಿ ರೋಚಕ ಗೆಲುವು ಒಲಿಸಿಕೊಂಡಿತು.

    ಬೈ ಮಿಸ್ಟೇಕ್​ ಆಗಿ ಶಶಾಂಕ್​ ಸಿಂಗ್​ರನ್ನು ಖರೀದಿಸಿದರೂ ಒಳ್ಳೆಯದೇ ಆಯಿತು ಎಂದು ಪಂಜಾಬ್ ಕಿಂಗ್ಸ್ ಖುಷಿಯಾಗಿದೆ. (ಏಜೆನ್ಸೀಸ್​)

    ಐಪಿಎಲ್​ ಹರಾಜು ವೇಳೆ ಪ್ರೀತಿ ಝಿಂಟಾ ಮಾಡಿದ ಈ ಒಂದು ಮಿಸ್ಟೇಕ್ ಪಂಜಾಬ್​ ತಂಡಕ್ಕೆ ವರವಾಯ್ತು!​

    IPL 2024: ಶಶಾಂಕ್​ ಶೈನಿಂಗ್​; ಗುಜರಾತ್​ ಎದುರು ಪಂಜಾಬ್​ಗೆ ರೋಚಕ ಜಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts