More

    ಐಪಿಎಲ್​ ಹರಾಜು ವೇಳೆ ಪ್ರೀತಿ ಝಿಂಟಾ ಮಾಡಿದ ಈ ಒಂದು ಮಿಸ್ಟೇಕ್ ಪಂಜಾಬ್​ ತಂಡಕ್ಕೆ ವರವಾಯ್ತು!​

    ನವದೆಹಲಿ: ಸೋಮವಾರ (ಮಾರ್ಚ್​ 25) ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪ್ರಸಕ್ತ ಐಪಿಎಲ್​ ಟೂರ್ನಿಯ 6ನೇ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್​ ವಿರುದ್ಧ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) 4 ವಿಕೆಟ್​ಗಳ ಗೆಲುವು ಸಾಧಿಸಿತು. ಕೊನೆಯ ಓವರ್‌ವರೆಗೂ ನಡೆದ ಈ ಪಂದ್ಯದಲ್ಲಿ ಆರ್‌ಸಿಬಿ ರೋಚಕ ಜಯ ಸಾಧಿಸಿತು.

    ಇದೇ ಪಂದ್ಯದಲ್ಲಿ ಪಂಜಾಬ್ ಬ್ಯಾಟಿಂಗ್ ಮಾಡುವಾಗ ಆಟಗಾರನೊಬ್ಬನ ಅಬ್ಬರದ ಬ್ಯಾಟಿಂಗ್ ಎಲ್ಲರ ಗಮನ ಸೆಳೆಯಿತು. ಮೊದಲ ಇನ್ನಿಂಗ್ಸ್​ ಕೊನೆಯ ಓವರ್ ಅನ್ನು ಆರ್​ಸಿಬಿ ಸ್ಟಾರ್​ ಬೌಲರ್​ ಅಲ್ಜಾರಿ ಜೋಸೆಫ್ ಎಸೆದರು. ಈ ಓವರ್​ನಲ್ಲಿ ಅಬ್ಬರ ಬ್ಯಾಟಿಂಗ್​ ಮಾಡಿ​ 20 ರನ್ ಗಳಿಸಿದರು. ಆ ಬ್ಯಾಟರ್ ಹೆಸರು ಶಶಾಂಕ್ ಸಿಂಗ್. ಐಪಿಎಲ್ 2024ರ ಆವೃತ್ತಿಗಾಗಿ 2023, ಡಿಸೆಂಬರ್ 19ರಂದು ದುಬೈನಲ್ಲಿ ನಡೆದ ಹರಾಜಿನಲ್ಲಿ 32 ವರ್ಷದ ಆಲ್​ರೌಂಡರ್​ ಶಶಾಂಕ್​ ಸಿಂಗ್​ರನ್ನು ಪಂಜಾಬ್ ಕಿಂಗ್ಸ್ ಮ್ಯಾನೇಜ್‌ಮೆಂಟ್ ತಪ್ಪಾಗಿ ಖರೀದಿಸಿತು. ಆದರೆ ಈಗ ಪಂಜಾಬ್​ ಪಾಲಿಗೆ ಶಶಾಂಕ್​ ಬಲಿಷ್ಠ ಆಟಗಾರನಂತೆ ಕಾಣುತ್ತಿದ್ದಾರೆ.

    ದೇಶೀಯ ಆಟಗಾರರ ಮಾರಾಟದ ಕೊನೇ ಸುತ್ತಿನಲ್ಲಿ ಶಶಾಂಕ್​ ಸಿಂಗ್​ ಎಂಬ ಆಟಗಾರ ಹರಾಜಿಗೆ ಬಂದಾಗ ಪಂಜಾಬ್​ ಕಿಂಗ್ಸ್​ ತಂಡದ ಸಹ-ಮಾಲಕಿ ಪ್ರೀತಿ ಝಿಂಟಾ 20 ಲಕ್ಷ ರೂ. ಮೂಲಬೆಲೆಗೆ ಬಿಡ್​ ಸಲ್ಲಿಸಿದರು. ಆದರೆ ಆ ಶಶಾಂಕ್​ ಸಿಂಗ್​ ತಾನು ಕಣ್ಣಿಟ್ಟಿದ್ದ ಆಟಗಾರ ಅಲ್ಲ ಎಂಬುದು ಪಂಜಾಬ್​ ತಂಡಕ್ಕೆ ಬಿಡ್​ ಪ್ರಕ್ರಿಯೆ ಮುಗಿದ ನಂತರ ಗೊತ್ತಾಯಿತು. ಹರಾಜುಗಾರ್ತಿ ಮಲ್ಲಿಕಾ ಸಾಗರ್​ಗೆ ಪಂಜಾಬ್​ ತಂಡ ಈ ಬಗ್ಗೆ ಮಾಹಿತಿ ನೀಡಿದರೂ, ಅವರು ಬಿಡ್​ ವಾಪಸ್​ ಪಡೆಯಲು ಅಥವಾ ಶಶಾಂಕ್​ ಸಿಂಗ್​ರನ್ನು ಮರು ಹರಾಜಿಗೆ ಒಳಪಡಿಸಲು ನಿರಾಕರಿಸಿದರು.

    ಅಂದಹಾಗೆ ಪಂಜಾಬ್​ ತಂಡ ಬಿಡ್​ ಸಲ್ಲಿಸಿದ್ದು ಛತ್ತೀಸ್​ಗಢದ 32 ವರ್ಷದ ಆಲ್ರೌಂಡರ್​ ಶಶಾಂಕ್​ ಸಿಂಗ್​ಗೆ ಆಗಿತ್ತು. ಆದರೆ ಅದು ಖರೀದಿಸಲು ಬಯಸಿದ್ದು ಬಂಗಾಳದ 20 ವರ್ಷದ ಬ್ಯಾಟರ್​ ಶಶಾಂಕ್​ ಸಿಂಗ್​ ಆಗಿತ್ತು. ಅವರೂ 20 ಲಕ್ಷ ರೂ. ಮೂಲಬೆಲೆ ಹೊಂದಿದ್ದರು. ಆದರೆ ಹರಾಜಿನಲ್ಲಿ ಗೊಂದಲ ಮಾಡಿಕೊಂಡಿರುವ ವರದಿಯನ್ನು ತಳ್ಳಿಹಾಕಿದ ಪಂಜಾಬ್​ ಕಿಂಗ್ಸ್​ ಫ್ರಾಂಚೈಸಿ, ತನಗೆ ಬೇಕಾದ ಆಟಗಾರನನ್ನೇ ಖರೀದಿಸಿರುವುದಾಗಿ ಸ್ಪಷ್ಟನೆ ನೀಡುವ ಮೂಲಕ ಮುಜಗರಕ್ಕೀಡಾಗುವುದನ್ನು ತಪ್ಪಸಿಕೊಂಡಿತು.

    ಇದೇ ಶಶಾಂಕ್​ ಸಿಂಗ್​ರನ್ನು 2019ರಲ್ಲಿ ರಾಜಸ್ಥಾನ ರಾಯಲ್ಸ್​ 30 ಲಕ್ಷ ರೂ.ಗೆ ಖರೀದಿ ಮಾಡಿತ್ತು. 2020 ಆವೃತ್ತಿಯಲ್ಲೂ ಅದೇ ತಂಡದಲ್ಲಿ ಮುಂದುವರಿದಿದ್ದರು. ಆದರೆ, ಎರಡೂ ಸೀಸನ್​ನಲ್ಲೂ ಶಶಾಂಕ್​ಗೆ ಆಡಲು ಅವಕಾಶ ಸಿಗಲಿಲ್ಲ. 2022ರಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ತಂಡ 20 ಲಕ್ಷಕ್ಕೆ ಶಶಾಂಕ್​ರನ್ನು ಖರೀದಿ ಮಾಡಿತ್ತು. ಈ ಸೀಸನ್​ನಲ್ಲಿ 10 ಪಂದ್ಯಗಳನ್ನು ಆಡಿದ್ದ ಶಶಾಂಕ್​ ಕೇವಲ 69 ರನ್ ಗಳಿಸಿದ್ದರು. ಈ ವಿಚಾರ ತಿಳಿದು ಪಂಜಾಬ್​ ಕೂಡ ಬೇಸರ ಮಾಡಿಕೊಂಡಿದೆ. ಆದರೆ, ಅದನ್ನು ಹೊರಗೆ ತೋರಿಸಿಕೊಂಡಿಲ್ಲ.

    ಪ್ರಸಕ್ತ ಐಪಿಎಲ್​ ಹರಾಜಿನಲ್ಲಿ ಶಶಾಂಕ್​ ತಪ್ಪಾಗಿ ಪಂಜಾಬ್ ತಂಡಕ್ಕೆ ಸೇರಿದರು. ಆದರೆ, ಸೋಮವಾರ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಧೂಳೆಬ್ಬಿಸಿದರು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ 19 ಓವರ್​ಗಳ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿತ್ತು. ಇದು ದೊಡ್ಡ ಸ್ಕೋರ್ ಅಲ್ಲ. ಆದರೆ, ಆರ್‌ಸಿಬಿ ಸ್ಟಾರ್ ಬೌಲರ್ ಅಲ್ಜಾರಿ ಜೋಸೆಫ್ ಎಸೆದ ಕೊನೆಯ ಓವರ್​ನ ಮೊದಲ ಮತ್ತು ಮೂರನೇ ಎಸೆತದಲ್ಲಿ ಶಶಾಂಕ್​ ಸಿಕ್ಸರ್ ಸಿಡಿಸಿದರು. ಅಲ್ಲದೆ, ನಾಲ್ಕನೇ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಪಂಜಾಬ್‌ ತಂಡ ಬೃಹತ್ ಸ್ಕೋರ್ ಗಳಿಸುವ ನೆರವಾದರು. ಶಶಾಂಕ್ ಒಂದೇ ಓವರ್​ನಲ್ಲಿ 20 ರನ್​ ಗಳಿಸಿದರು. ವೈಯಕ್ತಿಕವಾಗಿ 21 ರನ್​ ಗಳಿಸಿ ಅಜೇಯರಾಗಿ ಉಳಿದರು.

    ಇದೀಗ ಬೈ ಮಿಸ್ಟೇಕ್​ ಆಗಿ ಖರೀದಿಸಿದರೂ ಒಳ್ಳೆಯದೇ ಆಯಿತು ಎಂದು ಪಂಜಾಬ್ ಕಿಂಗ್ಸ್ ಖುಷಿಯಾಗಿದೆ. ಆದರೆ, ಆರ್​ಸಿಬಿ ವಿರುದ್ಧ ಗೆಲುವು ಸಾಧಿಸಿದ್ದರೆ ಶಶಾಂಕ್ ಆಡಿದ ಇನ್ನಿಂಗ್ಸ್ ಇನ್ನೂ ಫೇಮಸ್ ಆಗುತ್ತಿತ್ತು. (ಏಜೆನ್ಸೀಸ್​)

    ಐಪಿಎಲ್​ ಹರಾಜಿನಲ್ಲಿ ಯಾಮಾರಿತೇ ಪಂಜಾಬ್​ ಕಿಂಗ್ಸ್​? ತಪ್ಪಾಗಿ ಬೇರೆ ಆಟಗಾರನಿಗೆ ಬಿಡ್​; ಒಂದೇ ಹೆಸರಿನಿಂದ ಗೊಂದಲ!

    ಕ್ರಿಕೆಟ್​ ಬಿಟ್ಟು 2 ತಿಂಗಳು ಕೊಹ್ಲಿ ಹೇಗಿದ್ರು ಗೊತ್ತಾ? ನಿಜಕ್ಕೂ ಅದ್ಭುತ ಅನುಭವ ಎಂದ ವಿರಾಟ್​

    ರೋಹಿತ್​ಗೆ ವರವಾಯ್ತು ಮುಂಬೈ ಇಂಡಿಯನ್ಸ್​ ನಾಯಕತ್ವ ಬದಲಾವಣೆ! ಇದಕ್ಕಿಂತ ಸಾಕ್ಷಿ ಬೇಕಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts