ಕ್ರೀಡೆ

ಟಿ20 ಕ್ರಿಕೆಟ್​ನಲ್ಲಿ ಅತಿ ವೇಗದ ಶತಕ ಬಾರಿಸಿದ ಯುವ ಬ್ಯಾಟ್ಸ್​ಮನ್​; ಹಳೇ ದಾಖಲೆಗಳು ಉಡೀಸ್​

ಕೀರ್ತಿಪುರ: ಇಲ್ಲಿನ ತ್ರಿಭುವನ್​ ಯುನಿವರ್ಸಿಟಿ ಅಂತರಾಷ್ಟ್ರೀತಯ ಕ್ರೀಡಾಂಗಣದಲ್ಲಿ ನಡೆದ ನೇಪಾಳ ಹಾಗೂ ನಮೀಬಿಯಾ ವಿರುದ್ಧದ ಟಿ-20 ಪಂದ್ಯ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದು, ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ ಹೊಸ ದಾಖಲೆಯನ್ನು ನಿರ್ಮಿಸಲಾಗಿದೆ.

ಅತಿಥೇಯ ನೇಪಾಳ ಹಾಗೂ ಪ್ರವಾಸಿ ನಮೀಬಿಯಾ ನಡುವೆ ನಡೆದ ಟಿ-20 ಪಂದ್ಯ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದು, ಟಿ-20 ಕ್ರಿಕೆಟ್​ನಲ್ಲಿ ಅತಿ ವೇಗದ ಶತಕ ದಾಖಲಾದ ಪಂದ್ಯ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ನಮೀಬಿಯಾ ತಂಡವು ಆರಂಭಿಕ ಮಲನ್​ ಕ್ರೂಗರ್​ (59 ರನ್, 48 ಎಸೆತ, 6 ಬೌಂಡರಿ, 2 ಸಿಕ್ಸರ್) ಅರ್ಧಶತಕದ ಫಲವಾಗಿ ಉತ್ತಮ ಆರಂಭ ಪಡೆದುಕೊಂಡಿತ್ತು. ಆದರೆ, ತಂಡದ ಮೊತ್ತ 62 ಆಗುವಷ್ಟರಲ್ಲೇ ನಮೀಬಿಯಾ ಪ್ರಮುಖ 3 ವಿಕೆಟ್​ ಕಳೆದುಕೊಂಡಿತ್ತು.

5ನೇ ಕ್ರಮಾಂಕದಲ್ಲಿ ಕ್ರೀಸ್​ಗಿಳಿದ ಜಾನ್​ ನಿಕೋಲ್ ಲಾಫ್ಟಿ ಪಂದ್ಯದ ಚಿತ್ರಣವನ್ನೇ ಬದಲಿಸಿದರು. 11ನೇ ಓವರ್​ನಲ್ಲಿ ಬ್ಯಾಟಿಂಗ್​​ಗೆ ಇಳಿದ ಲಾಫ್ಟಿ 33 ಎಸೆತಗಳಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ಬೃಹತ್​ ಮೊತ್ತ ಪೇರಿಸುವಲ್ಲಿ ತಂಡಕ್ಕೆ ಆಸರೆಯಾದರು. ಅಂತಿಮವಾಗಿ 36 ಎಸೆತಗಳನ್ನು ಎದುರಿಸಿದ ನಿಕೋಲ್ ಲಾಫ್ಟಿ 8 ಭರ್ಜರಿ ಸಿಕ್ಸ್ ಹಾಗೂ 11 ಫೋರ್​ಗಳೊಂದಿಗೆ 101 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

ಈ ಮೂಲಕ ಲಾಫ್ಟಿ ಅಂತರಾಷ್ಟ್ರೀಯ ಟಿ-20 ಕ್ರಿಕೆಟ್​ನಲ್ಲಿ ಅತಿ ವೇಗದ ಶತಕ ಬಾರಿಸಿದ ಬ್ಯಾಟ್ಸ್​ಮನ್​ ಎಂಬ ಹೆಗ್ಗಳಿಕೆಗೆ ಜಾನ್​ ನಿಕೋಲ್ ಲಾಫ್ಟಿ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ನೇಪಾಳದ ಬ್ಯಾಟ್ಸ್​ಮನ್​ ಕುಶಾಲ ಮಲ್ಲ ಹೆಸರಿನಲ್ಲಿತ್ತು. ಏಷ್ಯನ್ ಗೇಮ್ಸ್ ಪಂದ್ಯದಲ್ಲಿ ಮಂಗೋಲಿಯಾ ವಿರುದ್ಧ ಕುಶಾಲ್ ಕೇವಲ 34 ಎಸೆತಗಳಲ್ಲಿ ಶತಕ ಸಿಡಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು.