ಕ್ರೀಡೆ

ಆತನಿಗೆ ಇವರ್‍ಯಾರು‌ ಬೆಂಬಲ ಕೊಡಲಿಲ್ಲ! MIನ ಅತ್ಯುತ್ತಮ ಆಟಗಾರನ ಬಗ್ಗೆ ನಮನ್ ಧಿರ್​​ ಬಿಚ್ಚುಮಾತು

ನವದೆಹಲಿ: ಈ ಬಾರಿಯ ಐಪಿಎಲ್ 17ನೇ ಆವೃತ್ತಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ ಹಾರ್ದಿಕ್ ಪಾಂಡ್ಯ ನೇತೃತ್ವದ ಐದು ಬಾರಿ ಚಾಂಪಿಯನ್ಸ್​​ ತಂಡ ಮುಂಬೈ ಇಂಡಿಯನ್ಸ್​, ಈ ಲೀಗ್​ ಅಂತ್ಯಗೊಳ್ಳುವ ಮುನ್ನ ಕೇವಲ ಒಂದೇ ಒಂದು ಪಂದ್ಯವನ್ನು ಆಡುವ ಮೂಲಕ 17ನೇ ಸೀಸನ್​ನಿಂದ ಸಂಪೂರ್ಣವಾಗಿ ಹೊರಗುಳಿಯಲಿದೆ. ಈಗಾಗಲೇ ಪ್ಲೇಆಫ್ ಕನಸಿನಿಂದಲೇ ಬಹಳ ದೂರ ಉಳಿದಿರುವ ಮುಂಬೈಗೆ, ಇನ್ನೇನಿದ್ದರೂ ಪ್ಲೇಆಫ್​ ಪ್ರವೇಶಿಸಲಿರುವ ತಂಡಗಳ ಪಂದ್ಯ ನೋಡವುದಷ್ಟೇ ಬಾಕಿ.

ನಾಯಕನ ಸ್ಥಾನದಿಂದ ರೋಹಿತ್ ಶರ್ಮಾರನ್ನು ಕೆಳಗಿಳಿಸಿ, ಆ ಸ್ಥಾನವನ್ನು ಹಾರ್ದಿಕ್ ಪಾಂಡ್ಯ ತನ್ನದಾಗಿಸಿಕೊಂಡಿದ್ದೇ ತಡ, ಮುಂಬೈಗೆ ಸತತ ಸೋಲುಗಳು ಎದುರಾಯಿತು. ಹೀನಾಯ ಸೋಲಿನ ಮೂಲಕ ಅಂಕಪಟ್ಟಿಯಲ್ಲಿ 10ನೇ ಸ್ಥಾನ ಗಳಿಸಿ, ಈಗ ಲೀಗ್​ನಿಂದ ಹೊರಗುಳಿದಿದೆ. ಅತ್ಯಂತ ಕಳಪೆ ಪ್ರದರ್ಶನ ನೀಡಿದರ ಬಗ್ಗೆ ಮುಕ್ತವಾಗಿ ಮಾತನಾಡಿದ ತಂಡದ ಆಲ್​ರೌಂಡರ್​ ನಮನ್ ಧೀರ್​, ತಮ್ಮ ಟೀಮ್​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರನಿಗೆ ಯಾರು ಒಳ್ಳೆಯ ಪ್ರೋತ್ಸಾಹ ನೀಡಲಿಲ್ಲ ಎಂದು ನೇರ ಆರೋಪ ಎಸಗಿದ್ದಾರೆ.

"ಅನುಭವಕ್ಕಿಂತ ನಮ್ಮ ತಪ್ಪುಗಳು ನಮಗೆ ಹೆಚ್ಚು ಪಾಠ ಕಲಿಸುತ್ತದೆ ಎಂಬುದನ್ನು ನಾನು ಅರಿತಿದ್ದೇನೆ. ಈ ಸೀಸನ್​ನಲ್ಲಿ ಆಡಿದ ಒಂದಷ್ಟು ಪಂದ್ಯಗಳಿಂದ ಸಾಕಷ್ಟು ಕಲಿತುಕೊಂಡಿದ್ದೇನೆ. ಎಷ್ಟು ಕೂಲ್ ಆಗಿರಬೇಕು, ಹೇಗೆ ನನ್ನ ಆಟದ ಬಗ್ಗೆ ಗಮನಹರಿಸಬೇಕು ಎಂಬ ಹಲವಾರು ವಿಷಯಗಳನ್ನು ಚೆನ್ನಾಗಿ ತಿಳಿದಿದ್ದೇನೆ. ಖಂಡಿತವಾಗಿ ಈ ಸೀಸನ್​ ನಮ್ಮದಾಗಿರಲಿಲ್ಲ" ಎಂದರು.

ಇನ್ನು ಮುಕ್ತವಾಗಿ ಮಾತನಾಡಿದ ಧೀರ್​, "ನಮ್ಮ ತಂಡದ ಬಲಿಷ್ಠ ವೇಗಿ ಜಸ್ಪ್ರೀತ್​ ಬುಮ್ರಾ ಅವರಿಗೆ ತಂಡದ ಇತರೆ ಬೌಲರ್​ಗಳಿಂದ ಉತ್ತಮ ಬೆಂಬಲ ಸಿಗಲಿಲ್ಲ. ನಿಜಕ್ಕೂ ಅವರೊಬ್ಬ ಅತ್ಯುತ್ತಮ ಬೌಲರ್ ಎಂಬುದರಲ್ಲಿ ಅನುಮಾನವೇ ಇಲ್ಲ. ಇದೆಲ್ಲದರಿಂದ ಕಲಿತು, ಮುಂದಿನ ಸೀಸನ್​ನಲ್ಲಿ ಒಳ್ಳೆಯ ಪ್ರದರ್ಶನ ನೀಡುವ ಭರವಸೆ ಹೊಂದಿದ್ದೇವೆ" ಎಂದು ಹೇಳಿದ್ದಾರೆ,(ಏಜೆನ್ಸೀಸ್).