ಕ್ರೀಡೆ

'ಗಿಲ್​ ಜೊತೆಗಿನ ಫೋಟೋ ವೈರಲ್​: 'ಡೀಪ್‌ಫೇಕ್' ಎಂದು ನೋವು ತೋಡಿಕೊಂಡ ಸಾರಾ..

ಮುಂಬೈ: ಸೆಲೆಬ್ರಿಟಿಗಳ ಡೀಪ್ ಫೇಕ್ ವಿಡಿಯೋಗಳು ಇತ್ತೀಚೆಗೆ ವೈರಲ್ ಆಗುತ್ತಿರುವುದು, ಈ ಮಾರ್ಫಿಂಗ್ ವಿಡಿಯೋಗಳ ಬಗ್ಗೆ ದೇಶಾದ್ಯಂತ ಕಳವಳ ವ್ಯಕ್ತವಾದ್ದರಿಂದ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲು ಮುಂದಾಗಿದೆ. ಪರಿಸ್ಥಿತಿ ಹೀಗಿರುವಾಗಲೇ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ಅವರ ಡೀಪ್‌ಫೇಕ್ ವೀಡಿಯೊಗಳು ವೈರಲ್ ಆಗಿದ್ದು, ಇದಲ್ಲದೆ, ಕೆಲವರು ಅವರ ಹೆಸರಿನಲ್ಲಿ 'ಎಕ್ಸ್' (ಟ್ವಿಟರ್) ನಲ್ಲಿ ನಕಲಿ ಖಾತೆಗಳನ್ನು ತೆರೆದಿದ್ದಾರೆ ಎಂದು ತಿಳಿದುಬಂದಿದೆ. ಇದನ್ನು ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಲಾಗಿದೆ.

"ನಮ್ಮ ದೈನಂದಿನ ಚಟುವಟಿಕೆ, ಸಂತೋಷ ಮತ್ತು ದುಃಖಗಳನ್ನು ಹಂಚಿಕೊಳ್ಳಲು ಸಾಮಾಜಿಕ ಮಾಧ್ಯಮವು ಒಂದು ಅದ್ಭುತ ವೇದಿಕೆಯಾಗಿದೆ. ಆದರೆ, ಕೆಲವರು ತಂತ್ರಜ್ಞಾನ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಬೇಸರ ತಂದಿದೆ. ನನ್ನ ಡೀಪ್‌ಫೇಕ್ ಫೋಟೋಗಳು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗುತ್ತಿರುವುದನ್ನು ನಾನು ನೋಡಿದ್ದೇನೆ. ಅಲ್ಲದೆ, ‘X’ನಲ್ಲಿ ಕೆಲವರು ಉದ್ದೇಶಪೂರ್ವಕವಾಗಿ ನನ್ನ ಹೆಸರಿನಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ ನೆಟಿಜನ್‌ಗಳನ್ನು ದಾರಿ ತಪ್ಪಿಸುತ್ತಿದ್ದಾರೆ. ನಾನು 'X'(ಎಕ್ಸ್​) ನೊಂದಿಗೆ ಮೂಲ ಖಾತೆಯನ್ನು ಹೊಂದಿಲ್ಲ. 'X'(ಎಕ್ಸ್​) ಅಂತಹ ನಕಲಿ ಖಾತೆಗಳನ್ನು ಗುರುತಿಸಿ ಅಮಾನತುಗೊಳಿಸುತ್ತದೆ ಎಂದು ನಾನು ಭಾವಿಸುತ್ತೇನೆ" ಎಂದು ಸಾರಾ ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಇತ್ತೀಚೆಗೆ ಟೀಂ ಇಂಡಿಯಾ ಕ್ರಿಕೆಟಿಗ ಶುಭಮನ್ ಗಿಲ್ ಜೊತೆ ಸಾರಾ ತೆಂಡೂಲ್ಕರ್ ಇರುವ ಮಾರ್ಫಿಂಗ್ ಫೋಟೋ ವೈರಲ್ ಆಗಿತ್ತು. ಸಾರಾ ಅವರ ಸಹೋದರ ಅರ್ಜುನ್ ಫೋಟೋವನ್ನು ಡೀಪ್‌ಫೇಕ್ ಮಾಡಿದ್ದಾರೆ. ಅರ್ಜುನ್ ಮುಖವನ್ನು ಗಿಲ್ ಅವರ ಫೋಟೋದಿಂದ ಬದಲಾಯಿಸಲಾಗಿದೆ ಮತ್ತು ಅದು ವೈರಲ್ ಆಗಿದೆ ಎನ್ನಲಾಗುತ್ತಿದೆ.

ಇದನ್ನು ಶುಭಮನ್ ಗಿಲ್ ಮತ್ತು ಸಾರಾ ತೆಂಡೂಲ್ಕರ್ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಹಾಕಲಾಗಿತ್ತು. ಈ ಹಿನ್ನೆಲೆಯಲ್ಲಿ ಸಾರಾ ಕಳವಳ ವ್ಯಕ್ತಪಡಿಸಿ ಪೋಸ್ಟ್ ಮಾಡಿದ್ದಾರೆ.

ಇತ್ತೀಚೆಗೆ ಸಿನಿಮಾ ತಾರೆಯರಾದ ರಶ್ಮಿಕಾ ಮಂದಣ್ಣ, ಕಾಜೋಲ್ ಮತ್ತು ಕತ್ರಿನಾ ಕೈಫ್ ಅವರ ಡೀಪ್‌ಫೇಕ್ ವಿಡಿಯೋಗಳು ವೈರಲ್ ಆಗಿದ್ದವು. ಇದರ ಬಗ್ಗೆ ಸಾಕಷ್ಟು ಕಳವಳ ವ್ಯಕ್ತವಾಗಿತ್ತು.