ಕ್ರೀಡೆ

VIDEO| ಬ್ಯಾಟಿಂಗ್​ ವೇಳೆ ಬಾಂಗ್ಲಾ ಆಟಗಾರನ ಎಡವಟ್ಟು; ಈ ನಿಯಮದಡಿ ಬಲಿಯಾದ ದೇಶದ ಮೊದಲ ಬ್ಯಾಟರ್​ ಇವರೇ

ನವದೆಹಲಿ: ಬಾಂಗ್ಲಾದೇಶ ಹಾಗೂ ನ್ಯೂಜಿಲೆಂಡ್​ ನಡುವೆ ನಡೆಯುತತ್ಇರುವ ಎರಡನೇ ಟೆಸ್ಟ್​ ಪಂದ್ಯದಲ್ಲಿ ವಿಕೆಟ್​ ಕೀಪರ್​, ಬ್ಯಾಟ್ಸ್​ಮನ್​ ಮುಶ್ಫಿಕರ್​ ರಹೀಮ್​ ಮಾಡಿದ ಎಡವಟ್ಟಿನಿಂದಾಗಿ ವಿಕೆಟ್​ ಒಪ್ಪಿಸಿರುವ ಘಟನೆ ಇದೀಗ ಎಲ್ಲೆಡೆ ವೈರಲ್​ ಆಗಿದೆ.

ಹ್ಯಾಂಡ್ಲಿಂಗ್ ದಿ ಬಾಲ್‌ ನಿಯಮದಡಿ ಮುಶ್ಫಿಕರ್​ ರೆಹಮಾನ್​ ಅವರನ್ನು ಅಂಪೈರ್​ ಔಟ್​ ಎಂದು ಘೋಷಿಸಿದ್ದು, ಈ ರೀತಿ ವಿಕೆಟ್​ ಒಪ್ಪಿಸಿದ ಬಾಂಗ್ಲಾದೇಶದ ಮೊದಲ ಬ್ಯಾಟರ್​ ಎಂಬ ಅಪಕೀರ್ತಿಗೆ ಪಾತ್ರರಾಗಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ವಿಡಿಯೋ ವೈರಲ್

ಈ ಪಂದ್ಯದಲ್ಲಿ 83 ಎಸೆತಗಳಲ್ಲಿ 35 ರನ್‌ ಗಳಿಸಿದ್ದ ಮುಶ್ಫಿಕರ್ ರಹೀಮ್ ಕಿವೀಸ್‌ ಬೌಲರ್ ಕೈಲ್ ಜೇಮಿಸನ್ 41ನೇ ಓವರ್‌ನ 4ನೇ ಎಸೆತ ಬೌಲಿಂಗ್‌ ಮಾಡಿದಾಗ ಅದನ್ನು ಬ್ಯಾಟ್‌ನಿಂದ ರಕ್ಷಣೆ ಮಾಡಿದರು. ತಕ್ಷಣವೇ ಸ್ಟಂಪ್ಸ್‌ನತ್ತ ಹೋಗುತ್ತಿದ್ದ ವೇಳೆ ಚೆಂಡನ್ನು ತಮ್ಮ ಬಲಗೈನಿಂದ ತಳ್ಳಿದರು. ಇದರಿಂದ ಕಿವೀಸ್‌ ಪಡೆ 3ನೇ ಅಂಪೈರ್‌ಗೆ ಮನವಿ ಮಾಡಿತು. ಟಿವಿ ಅಂಪೈರ್‌ ಅದನ್ನು ಔಟ್‌ ಎಂದು ತೀರ್ಪು ನೀಡಿದ್ದಾರೆ.

ಬಾಂಗ್ಲಾದೇಶ ಹಾಗೂ ನ್ಯೂಜಿಲೆಂಡ್‌‌ ನಡುವೆ ನಡೆಯುತ್ತಿರುವ ಎರಡು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಬಾಂಗ್ಲಾ ತಂಡವು 1-0 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಆದರೆ, 2ನೇ ಟೆಸ್ಟ್‌ ಪಂದ್ಯದಲ್ಲಿ ಇನ್ನಿಂಗ್ಸ್‌ ಆರಂಭಿಸಿದ ಬಾಂಗ್ಲಾದೇಶ ತಂಡ ಮೊದಲ ದಿನವೇ 66.2 ಓವರ್‌ಗಳಲ್ಲಿ 172 ರನ್‌ಗಳಿಗೆ ಆಲೌಟ್‌ ಆಯಿತು.

ನಿಯಮದಲ್ಲೇನಿದೆ

ಅಂತಾರಾಷ್ಟ್ರೀಯ ಕ್ರಿಕೆಟ್‌ ಬೌಲಿಂಗ್‌ ನಿಯಮಗಳ ಪ್ರಕಾರ, ʻಹ್ಯಾಂಡ್ಲಿಂಗ್ ದಿ ಬಾಲ್ʼಮಾಡುವುದು (ಕೈಗಳಿಂದ ಬಾಲ್‌ ತಳ್ಳುವುದು) ನಿಯಮ ಉಲ್ಲಂಘನೆಯ ಕ್ರಮವಾಗಿದೆ. ಅಂದರೆ ಪಂದ್ಯ ನಡೆಯುವ ವೇಳೆ ಫೀಲ್ಡರ್‌ ಒಪ್ಪಿಗೆಯಿಲ್ಲದೇ ಬ್ಯಾಟರ್‌ಗಳು ಉದ್ದೇಶಪೂರ್ವಕವಾಗಿ ಅಥವಾ ಉದ್ದೇಶ ರಹಿತವಾಗಿ ಕೈಯಿಂದ ಚೆಂಡನ್ನು ಮುಟ್ಟಿದರೆ ಅದು ನಿಯಮ ಉಲ್ಲಂಘನೆಯಾಗುತ್ತದೆ.

ಇದರಿಂದ ಅಂಪೈರ್‌ ಔಟ್‌ ತೀರ್ಪು ನೀಡಬಹುದು. ಆದ್ರೆ ಈ ನಿಯಮದಿಂದ ಔಟ್‌ ಮಾಡಿದ ವಿಕೆಟ್‌ ಬೌಲರ್‌ ಖಾತೆಗೆ ಸೇರುವುದಿಲ್ಲ. ಒಂದು ವೇಳೆ ಬಾಲ್‌ ಬ್ಯಾಟ್ಸ್‌ಮನ್‌ಗೆ ಅಪಾಯ ಉಂಟುಮಾಡುವ ಸಾಧ್ಯತೆಗಳಿದ್ದರೆ, ಅಂತಹ ಸಂದರ್ಭದಲ್ಲಿ ತನ್ನ ಕೈಗಳಿಂದ ಚೆಂಡನ್ನು ತಡೆಯಬಹುದು ಎಂದು ಕ್ರಿಕೆಟ್‌ ನಿಯಮ ಹೇಳುತ್ತದೆ.