ಕ್ರೀಡೆ

ಇದು ನನಗೆ... ಕೇವಲ 26 ರನ್​ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಬಳಿಕ ಧೋನಿ ಹೇಳಿದ್ದು ಅಚ್ಚರಿಯ ಮಾತು! MS Dhoni

MS Dhoni: ಟೀಮ್​ ಇಂಡಿಯಾದ ಮಾಜಿ ನಾಯಕ ಎಂ.ಎಸ್. ಧೋನಿ ಅವರು ತಮ್ಮ ಆಟಗಾರರನ್ನು ಹೊಗಳುವುದರಲ್ಲಿ ಯಾವಾಗಲೂ ಮುಂಚೂಣಿಯಲ್ಲಿರುತ್ತಾರೆ. ಅವರು ಎದುರಾಳಿ ಆಟಗಾರರಾಗಿದ್ದರು ಸರಿ, ಚೆನ್ನಾಗಿ ಆಡಿದರೆ, ಮೈದಾನದಲ್ಲೇ ಅವರನ್ನು ಹೊಗಳುತ್ತಾರೆ. ತಮ್ಮ ಸಹ ಆಟಗಾರರು ಮತ್ತು ಎದುರಾಳಿಗಳ ಕಠಿಣ ಪರಿಶ್ರಮಕ್ಕೆ ಮನ್ನಣೆ ನೀಡುವಲ್ಲಿ ಮುಂಚೂಣಿಯಲ್ಲಿರುವ ಮಹಿ ಇತ್ತೀಚೆಗೆ ಅದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

'ಪಂದ್ಯಶ್ರೇಷ್ಠ' ಪ್ರಶಸ್ತಿ ಪಡೆದರೂ, ತಾನು ಅದಕ್ಕೆ ಅರ್ಹನಲ್ಲ ಎಂದು ಧೋನಿ ಹೇಳಿದ್ದಾರೆ. ನಿನ್ನೆ (ಏಪ್ರಿಲ್​​ 14) ಲಖನೌದ ಏಕನಾ ಕ್ರಿಕೆಟ್​ ಸ್ಟೇಡಿಯಂನಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಗೆಲುವಿನತ್ತ ಕೊಂಡೊಯ್ದ ಮಹಿ, ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದರು. ಎಲ್‌ಎಸ್‌ಜಿ ವಿರುದ್ಧದ ಪಂದ್ಯದಲ್ಲಿ ಧೋನಿ ಅವರು 11 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್‌ನೊಂದಿಗೆ 26 ರನ್ ಗಳಿಸಿ ಅಜೇಯರಾಗಿ ಉಳಿದರು.

ಪಂದ್ಯದ ನಂತರದ ನಡೆಯುವ ಪ್ರಶಸ್ತಿ ಪ್ರಸ್ತುತಿ ಕಾರ್ಯಕ್ರಮದಲ್ಲಿ 18ನೇ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಗೆದ್ದ ಅನುಭವ ಹೇಗಿತ್ತು ಎಂದು ನಿರೂಪಕ ಮುರಳಿ ಕಾರ್ತಿಕ್ ಪ್ರಶ್ನಿಸಿದರು. ಈ ವೇಳೆ ಉತ್ತರಿಸಿದ ಧೋನಿ, ನೀವು ನನಗೆ ಪ್ರಶಸ್ತಿಯನ್ನು ಏಕೆ ನೀಡುತ್ತಿದ್ದೀರಿ ಎಂದು ನಾನು ಯೋಚಿಸುತ್ತಿದ್ದೇನೆ. ನೂರ್ ಅಹ್ಮದ್ ಈ ಪ್ರಶಸ್ತಿಗೆ ಅರ್ಹರು. ಅವರು ಇಂದು ಉತ್ತಮ ಕೆಲಸ ಮಾಡಿದರು. ಅವರು ಮಧ್ಯಮ ಓವರ್‌ಗಳಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡಿದರು ಎಂದು ಧೋನಿ ಉತ್ತರಿಸಿದರು.

ಲಖನೌ ಸೂಪರ್ ಜೈಂಟ್ಸ್ ವಿರುದ್ಧ ನೂರ್ ಅಹ್ಮದ್ ಅದ್ಭುತ ಬೌಲಿಂಗ್ ಮಾಡಿದರು. ತಮ್ಮ 4 ಓವರ್‌ಗಳ ಕೋಟಾದಲ್ಲಿ ವಿಕೆಟ್ ಪಡೆಯದಿದ್ದರೂ ಕೇವಲ 13 ರನ್‌ಗಳನ್ನು ನೀಡಿದರು. ನೂರ್ ಅವರ ಅದ್ಭುತ ಬೌಲಿಂಗ್ ಎಲ್‌ಎಸ್‌ಜಿ ದೊಡ್ಡ ಸ್ಕೋರ್ ಗಳಿಸುವುದನ್ನು ತಡೆಯಿತು. ಚೆನ್ನೈ ಇಲ್ಲಿಯವರೆಗೆ 7 ಪಂದ್ಯಗಳನ್ನು ಆಡಿದ್ದು, ನೂರ್ ಅಹ್ಮದ್ 24 ಓವರ್‌ಗಳನ್ನು ಬೌಲಿಂಗ್ ಮಾಡಿದ್ದಾರೆ. ಅವರು 12 ವಿಕೆಟ್‌ಗಳೊಂದಿಗೆ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ. 20 ವರ್ಷದ ನೂರ್, ಅಫ್ಘಾನಿಸ್ತಾನ ಕ್ರಿಕೆಟಿಗ. ಅವರು 2022ರಲ್ಲಿ ಅಫ್ಘಾನಿಸ್ತಾನ ಪರ ಪಾದಾರ್ಪಣೆ ಮಾಡಿದರು.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಖನೌ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 166 ರನ್ ಗಳಿಸಿತು. ಲಖನೌ ತಂಡದ ಪರ ರಿಷಭ್ ಪಂತ್ (63 ರನ್​, 49 ಎಸೆತ, 4 ಬೌಂಡರಿ, 4 ಸಿಕ್ಸರ್) ಅರ್ಧಶತಕ ಗಳಿಸಿದರು. ಮಿಚೆಲ್ ಮಾರ್ಷ್ (30) ಮತ್ತು ಆಯುಷ್ ಬಡೋನಿ (22) ಉಪಯುಕ್ತ ಕಾಣಿಕೆ ನೀಡಿದರು. ಆದರೆ, ಇತರ ಬ್ಯಾಟ್ಸ್‌ಮನ್​ಗಳು ಸಂಪೂರ್ಣ ವಿಫಲರಾದರು. ಚೆನ್ನೈ ಪರ ರವೀಂದ್ರ ಜಡೇಜಾ ಮತ್ತು ಮತಿಶಾ ಪತಿರಾಣ ತಲಾ ಎರಡು ವಿಕೆಟ್ ಪಡೆದರೆ, ಖಲೀಲ್ ಅಹ್ಮದ್ ಮತ್ತು ಅನ್ಶುಲ್ ಕಾಂಬೋಜ್ ತಲಾ ಒಂದು ವಿಕೆಟ್ ಪಡೆದರು.

ಗುರಿ ಬೆನ್ನತ್ತಿದ ಸಿಎಸ್​ಕೆ, ಶಿವಂ ದುಬೆ (ಅಜೇಯ 43 ರನ್​, 37 ಎಸೆತ, 3 ಬೌಂಡರಿ, 2 ಸಿಕ್ಸರ್), ರಾಚಿನ್ ರವೀಂದ್ರ (37 ರನ್​, 22 ಎಸೆತ, 5 ಬೌಂಡರಿ), ಶೇಖ್ ರಶೀದ್ (27 ರನ್​, 19 ಎಸೆತ, 6 ಬೌಂಡರಿ) ಮತ್ತು ಎಂಎಸ್ ಧೋನಿ (ಅಜೇಯ 26 ರನ್​, 11 ಎಸೆತ, 4 ಬೌಂಡರಿ, 1 ಸಿಕ್ಸರ್) ಬ್ಯಾಟಿಂಗ್​ ನೆರವಿನಿಂದ 19.3 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. (ಏಜೆನ್ಸೀಸ್​)