ರಾಂಚಿ: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ, ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಇದೀಗ 2024ರ ಐಪಿಎಲ್ ಟೂರ್ನಿಗೆ ಸಕಲ ತಯಾರಿಗಳನ್ನು ನಡೆಸುತ್ತಿದ್ದು, 42ರ ವಯಸ್ಸಿನಲ್ಲೂ ಕ್ರೀಡಾಂಗಣಕ್ಕೆ ಇಳಿದು ತರಬೇತಿ ನಡೆಸುವ ಮೂಲಕ ಅಭಿಮಾನಿಗಳನ್ನು ಆಕರ್ಷಿಸುತ್ತಿದ್ದಾರೆ. ಕಳೆದ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಟ್ರೋಫಿ ತಂದುಕೊಟ್ಟ ಧೋನಿ, ಮುಂಬರುವ ವರ್ಷ ಆಡಲಿದ್ದಾರಾ ಎಂಬ ಗೊಂದಲ ಕ್ರಿಕೆಟ್ ಅಭಿಮಾನಿಗಳಲ್ಲಿ ತೀವ್ರವಾಗಿ ಕಾಡುತ್ತಿತ್ತು. ಯಾರಿಗೂ ನಿರಾಸೆ ಮಾಡದ ಎಂಎಸ್ಡಿ, ಇದೀಗ ಹೊಚ್ಚ ಹೊಸ ಲುಕ್ನಲ್ಲಿ ಮರಳಿದ್ದಾರೆ.
ನೆಟ್ಸ್ನಲ್ಲಿ ಪ್ರಾಕ್ಟಿಸ್ ಶುರು ಮಾಡಿರುವ ಧೋನಿ, ಹೊಸ ಬ್ಯಾಟ್ನೊಂದಿಗೆ ಅಖಾಡದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಒಂದು ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಫೋಟೋದ ಪ್ರಕಾರ, ಧೋನಿ ಹಿಡಿದಿರುವ ಬ್ಯಾಟ್ ಮೇಲಿನ ಸ್ಟಿಕರ್, ಅವರ ಬಾಲ್ಯ ಸ್ನೇಹಿತನ ಅಂಗಡಿಯ ಹೆಸರು ಎಂಬುದು ವಿಶೇಷ. ತಮ್ಮ ಕರಿಯರ್ಗೆ ಸಹಾಯ ಮಾಡಿದ್ದ ಬಾಲ್ಯದ ಗೆಳೆಯನ ಅಂಗಡಿಯ ಹೆಸರಿನ ಸ್ಟಿಕ್ಕರ್‌ನೊಂದಿಗೆ ಈ ಬಾರಿ ಐಪಿಎಲ್ನಲ್ಲಿ ಕ್ಯಾಪ್ಟನ್ ಕೂಲ್ ಕಾಣಿಸಿಕೊಳ್ಳಲಿದ್ದಾರೆ.
ಸದ್ಯ ಈ ವಿಷಯ ಅಭಿಮಾನಿಗಳಲ್ಲಿ ಸಿಕ್ಕಾಪಟ್ಟೆ ಸಂತಸ ಮೂಡಿಸಿದ್ದು, ಗೆಳೆಯನ ಅಂಗಡಿಯ ಸ್ಟಿಕರ್ ಇರುವ ಬ್ಯಾಟ್ ಹಿಡಿದೇ ಧೋನಿ ಈ ಸೀಸನ್ ಪೂರ ಆಡಲಿದ್ದಾರೆ ಎನ್ನಲಾಗಿದೆ. ಪ್ರೈಮ್ ಸ್ಪೋರ್ಟ್ಸ್ ಎಂಬುದು ಅವರ ಬಾಲ್ಯದ ಗೆಳೆಯ ಪರಮ್‌ಜಿತ್ ಸಿಂಗ್ ಒಡೆತನದ ಅಂಗಡಿಯಾಗಿದೆ. ಪರಮ್‌ಜಿತ್ ಧೋನಿ ಕ್ರಿಕೆಟ್ ಪಯಣಕ್ಕೆ ಕಾಲಿಟ್ಟಾಗ ಆರಂಭದ ದಿನಗಳಲ್ಲಿ ಮಾಡಿದ ಸಹಾಯ ಮಹತ್ವವಾದದ್ದು, ಅದನ್ನು ಎಂ.ಎಸ್. ಧೋನಿ ಬಯೋಪಿಕ್ ಸಿನಿಮಾದಲ್ಲಿ ಸಹ ಕಾಣಬಹುದಾಗಿದೆ.
ಇದೀಗ ಪರಮ್‌ಜಿತ್ ಸಿಂಗ್ ಅಂಗಡಿಯ ಸ್ಟಿಕರ್ ಇರುವ ಬ್ಯಾಟ್ನಲ್ಲಿ ಧೋನಿ ಅಭ್ಯಾಸ ಮಾಡುತ್ತಿರುವ ಒಂದೆರಡು ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಗಮನ ಸೆಳೆಯುತ್ತಿದೆ,(ಏಜೆನ್ಸೀಸ್).