ಕ್ರೀಡೆ

43ನೇ ವಸಂತಕ್ಕೆ ಕಾಲಿಟ್ಟ ಎಂಎಸ್​ಡಿ; ಕ್ಯಾಪ್ಟನ್​ ಕೂಲ್​​ಗೆ ವಿಶೇಷವಾಗಿ ಶುಭಕೋರಿದ ಸಲ್ಮಾನ್

ಮುಂಬೈ: ಟೀಮ್​ ಇಂಡಿಯಾ ಮಾಜಿ ನಾಯಕ, ಕ್ಯಾಪ್ಟನ್​ ಕೂಲ್​ ಎಂದೇ ಕರೆಯಲ್ಪಡುವ ಮಹೇಂದ್ರ ಸಿಂಗ್​ ಧೋನಿ ಜುಲೈ 07ರಂದು 43ನೇ ವಸಂತಕ್ಕೆ ಕಾಲಿಟ್ಟಿದ್ದು, ಕುಟುಂಬಸ್ಥರು ಹಾಗೂ ಆಪ್ತರ ಜೊತೆ ಸರಳವಾಗಿಯೇ ಆಚರಿಸಿಕೊಂಡಿದ್ದಾರೆ. ಅನಂತ್​ ಅಂಬಾನಿ ಮದುವೆ ಕಾರ್ಯಕ್ರಮದ ನಿಮಿತ್ತ ಮುಂಬೈನಲ್ಲಿರುವ ಧೋನಿ ಅವರನ್ನು ಖುದ್ದು ಭೇಟಿ ಮಾಡಿ ಸಲ್ಮಾನ್​ ಖಾನ್​ ಶುಭಾಶಯ ಕೋರಿದ್ದು, ಈ ವಿಡಿಯೋ ವೈರಲ್​ ಆಗುತ್ತಿದೆ.

ಧೋನಿಯ ಜನ್ಮದಿನವನ್ನು ಸಾಕ್ಷಿ ಸಖತ್​ ಆಗಿಯೇ ಸೆಲೆಬ್ರೇಟ್​ ಮಾಡಿದ್ದಾರೆ. ಕೇಕ್ ಕಟ್ಟಿಂಗ್ ಬಳಿಕ ಸಾಕ್ಷಿ ಧೋನಿ ಪಾದ ಮುಟ್ಟಿ ನಮಸ್ಕರಿಸಿದ್ದು, ಧೋನಿಯು ಗೆದ್ದು ಬಾ ಎನ್ನುವ ಮೂಲಕ ಪತ್ನಿಯ ಕಾಲೆಳೆದಿದ್ದಾರೆ. ಪತ-ಪತ್ನಿಯ ಫನ್ನಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ನೆಟ್ಟಿಗರು ದಂಪತಿ ನಡುವಿನ ಅನ್ಯೋನ್ಯತೆ ಕಂಡು ಕಮೆಂಟ್​ ಮಾಡುತ್ತಿದ್ದಾರೆ.

ಅನಂತ್​ ಅಂಬಾನಿ-ರಾಧಿಕಾ ಮರ್ಚೆಂಟ್​ ಮದುವೆ ಪ್ರಯುಕ್ತ ಹಮ್ಮಿಕೊಳ್ಳಲಾಗಿರುವ ಸಂಗೀತ್​ ಕಾರ್ಯಕ್ರಮದಲ್ಲಿ ಭಾಗಿಯಾಗಲು ಮಹೇಂದ್ರ ಸಿಂಗ್​ ಧೋನಿ ದಂಪತಿಗಳು ಮುಂಬೈಗೆ ಬಂದಿಳಿದಿದ್ದಾರೆ. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಧೋನಿ ಸಲ್ಮಾನ್​ ಖಾನ್​, ರಣವೀರ್​ ಸಿಂಗ್​ ಜೊತೆ ಹೆಜ್ಜೆ ಹಾಕುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಕಾರ್ಯಕ್ರಮದ ಬಳಿಕ ನಡೆದ ಧೋನಿ ಬರ್ತಡೇ ಬ್ಯಾಶ್​ನಲ್ಲಿ ಸಲ್ಮಾನ್​ ಖಾನ್​ ಕೂಡ ಪಾಲ್ಗೊಂಡು ಟೀಮ್​ ಇಂಡಿಯಾ ಮಾಜಿ ನಾಯಕನಿಗೆ ಶುಭ ಹಾರೈಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ಪೋಸ್ಟ್​ ಮಾಡಿರುವ ಸಲ್ಮಾನ್​ ಹ್ಯಾಪಿ ಬರ್ತ್​ಡೇ ಕಪ್ತಾನ್​ ಸಾಬ್​ ಎಂದು ಬರೆದುಕೊಂಡಿದ್ದಾರೆ.

2020ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತರಾಗಿರುವ ಮಹೇಂದ್ರ ಸಿಂಗ್ ಧೋನಿ ಐಪಿಎಲ್​​ನಲ್ಲಿ ಮುಂದುವರೆದಿದ್ದಾರೆ. 17ನೇ ಆವೃತ್ತಿಯ ಐಪಿಎಲ್​ನಲ್ಲಿ ಸಿಎಸ್​ಕೆ ತಂಡದ ನಾಯಕತ್ವ ತ್ಯಜಿಸುವ ಮೂಲಕ ಅಚ್ಚರಿ ಮೂಡಿಸಿದ್ದರು. ಇದೀಗ ಸಿಎಸ್​ಕೆ ತಂಡವನ್ನು ರುತುರಾಜ್ ಗಾಯಕ್ವಾಡ್ ಮುನ್ನಡೆಸುತ್ತಿದ್ದು, 18ನೇ ಆವೃತ್ತಿಯ ಐಪಿಎಲ್​ನಲ್ಲಿ ಧೋನಿ ಆಡಲಿದ್ದಾರಾ ಅಥವಾ ನಿವೃತ್ತಿ ಘೋಷಿಸಲಿದ್ದಾರಾ ಎಂದು ಕಾದು ನೋಡಬೇಕಿದೆ.