ಕ್ರೀಡೆ

ಧೋನಿಗೆ ಪ್ರತಿಭೆ ಇದೆ ಆದರೆ ಟೆಕ್ನಿಕ್​ ಗೊತ್ತಿಲ್ಲಾ; ಎಸ್​ಆರ್​ಎಚ್​ ಆಟಗಾರನ ಹೇಳಿಕೆ ವೈರಲ್​

ಹೈದರಾಬಾದ್: ವಿಶ್ವದ ಮಿಲಿಯನ್​ ಡಾಲರ್​ ಟೂರ್ನಿಗಳಲ್ಲಿ ಒಂದಾದ ಐಪಿಎಲ್​ ಮುಕ್ತಾಯಗೊಂಡು ವಾರ ಕಳೆಯುತ್ತ ಬಂದರೂ ಜನರು ಮಾತ್ರ ಅದರ ಗುಂಗಿನಿಂದ ಇನ್ನೂ ಹೊರಬಂದಿಲ್ಲ. ಮೇ 26ರಂದು ನಡೆದ ಫೈನಲ್ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್​), ಸನ್ ರೈಸರ್ಸ್ ಹೈದರಾಬಾದ್ (ಎಸ್​ಆರ್​ಎಚ್​) ತಂಡವನ್ನು ಸೋಲಿಸುವ ಮೂಲಕ ಮೂರನೇ ಬಾರಿಗೆ ಐಪಿಎಲ್​ ಟ್ರೋಫಿಯನ್ನು ಎತ್ತಿಹಿಡಿಯಿತು. ಐಪಿಎಲ್​ ಮೂಲಕ ಹಲವು ನವ ಹಾಗೂ ಉದಯೋನ್ಮುಖ ಆಟಗಾರರು ತಮ್ಮ ಪ್ರತಿಭೆಯನ್ನು ಹೊರಹಾಕಿದ್ದು, ಅವಕಾಶಗಳನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

17ನೇ ಆವೃತ್ತಿಯ ಐಪಿಎಲ್​ನಲ್ಲಿ ಪ್ಯಾಟ್​ ಕಮ್ಮಿನ್ಸ್​ ನಾಯಕತ್ವದ ಸನ್​ರೈಸರ್ಸ್​ ಬ್ಯಾಟಿಂಗ್ ಹಾಗೂ ಬೌಲಿಂಗ್​ನಲ್ಲಿ ಹಲವು ದಾಖಲೆಗಳನ್ನು ಬರೆದಿತ್ತು. ಇನ್ನೂ ತಂಡದ ಪರ ಕಣಕ್ಕಿಳಿದ ಯುವ ಆಲ್ರೌಂಡರ್​ ನಿತೀಶ್​ ರೆಡ್ಡಿ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಭರವಸೆಯ ಆಟಗಾರ ಎನ್ನಿಸುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಇದೀಗ ನಿತೀಶ್​ ರೆಡ್ಡಿ ಟೀಮ್​ ಇಂಡಿಯಾ ಮಾಜಿ ನಾಯಕ ಎಂ.ಎಸ್. ಧೋನಿ ಬಗ್ಗೆ ಮಾತನಾಡುವ ಮೂಲಕ ಸುದ್ದಿಯಾಗಿದ್ದು, ದೊಡ್ಡ ವಿವಾದಕ್ಕೆ ಕಾರಣವಾಗಿದೆ.

ತೆಲುಗು ನಟ ಕಾರ್ತಿಕೇಯ ನಟಿಸಿರುವ ಭಜೆ ವಾಯು ವೇಗಂ ಚಿತ್ರದ ಪ್ರಮೋಷನ್​ನಲ್ಲಿ ಮಾತನಾಡಿದ ರೆಡ್ಡಿ, ಧೋನಿ ಪ್ರತಿಭೆಯನ್ನು ಹೊಂದಿದ್ದಾರೆ. ಆದರೆ, ಯಾವುದೇ ತಂತ್ರವನ್ನು ಹೊಂದಿಲ್ಲ. ವಿರಾಟ್​ ಕೊಹ್ಲಿ ರೀತಿಯ ಟೆಕ್ನಿಕ್​ ಧೋನಿಗೆ ಗೊತ್ತಿಲ್ಲಾ. ಆಟದ ವಿಚಾರಕ್ಕೆ ಬಂದರೆ ಧೋನಿ ಅವರು ತಮ್ಮ ಸಾಮರ್ಥ್ಯ ಹಾಗೂ ಆಟದ ಬಗ್ಗೆ ಚೆನ್ನಾಗಿ ತಿಳಿದಿದ್ದಾರೆ ಅದರ ಬಗ್ಗೆ ಬೇರೇನೂ ಹೇಳಬೇಕಾಗಿಲ್ಲ. ಅದಕ್ಕಾಗಿಯೇ ಅವರು ಚಾಂಪಿಯನ್​ ಆಗಿದ್ದಾರೆ. ಅವರೊಂದು ದಂತಕಥೆ ಎಂದು ನಿತೀಶ್​ ರೆಡ್ಡಿ ಹೇಳಿದ್ದಾರೆ.

ಇತ್ತ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಹಲವರು ಯುವ ಕ್ರಿಕೆಟಿಗನ ಹೇಳಿಕೆಯನ್ನು ಖಂಡಿಸಿದ್ದಾರೆ. ಧೋನಿಗೆ ಟೆಕ್ನಿಕ್​ ಗೊತ್ತಿರಲಿಲ್ಲವೆಂದರೆ ಕಪ್​ಗಳನ್ನು ಗೆಲ್ಲಿಸಲು ಸಾಧ್ಯವಾಗುತ್ತಿರಲಿಲ್ಲ. ಇನ್ನೂ ರಾಷ್ಟ್ರೀಯ ತಂಡದ ಪರ ಪದಾರ್ಪಣೆ ಮಾಡದೆ ಈ ರೀತಿಯ ಹೇಳಿಕೆಗಳನ್ನು ಕೊಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಹಲವರು ಕಿಡಿಕಾರಿದ್ದಾರೆ.